ಸಿದ್ಧವನ ಗುರುಕುಲದ ಸವಿನೆನಪುಗಳು....
ಸಿದ್ಧವನ ಗುರುಕುಲಕ್ಕೆ ಈಗ 75ರ ಸಂಭ್ರಮ. ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಿದ್ಧವನ ಗುರುಕುಲದ ಕೆಲವು ಸವಿ ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.
ಅಂತು ಇಂತು ಸಿದ್ಧವನದ ಪ್ರವೇಶ ಸಿಕ್ಕಿತು -1
ಪಿಯುಸಿ ಬಳಿಕ ಮುಂದೇನು ಮಾಡ್ತೀರಿ ಎಂದು ಒಮ್ಮೆ ನಮ್ಮ ಅಧ್ಯಾಪಕರು ಕೇಳಿದ್ದರು. ನನ್ನ ಸರದಿ ಬಂದಾಗ ತಂದೆಯಂತೆ ನಾನು ಪತ್ರಕರ್ತನಾಗಬೇಕು. ಅದಕ್ಕಾಗಿ ಜರ್ನಲಿಸಂ ಓದಬೇಕು ಎಂದು ಒಂದು ಡೈಲಾಗ್ ಹೊಡೆದಿದ್ದೆ. ಆದರೆ ಈ ಡೈಲಾಗ್ ಕಾರ್ಯರೂಪಕ್ಕೆ ಬರುತ್ತದೆ ಎಂದು ನಾನು ಎಣಿಸಿಯೇ ಇರಲಿಲ್ಲ. ಯಾವಾಗ ನಾನು ನಿರೀಕ್ಷೆ ಮಾಡದ ಫಲಿತಾಂಶ ಬಂತೋ ಯಾವಾಗ ಇದು ಕಾರ್ಯರೂಪಕ್ಕೆ ಬಂತು ನೋಡಿ.
ಪಿಯು ಫಲಿತಾಂಶ ಹೇಗೂ ಇಂಟರ್ನೆಟ್ನಲ್ಲಿ ಬೇಗನೇ ಸಿಗುತ್ತೆ. ನನ್ನ ನಂಬರ್ನ್ನು ಮೊದಲೇ ತೆಗೆದುಕೊಂಡು ಹೋಗಿದ್ದ ತಂದೆಯವರು ಇಂಟರ್ನೆಟ್ನಲ್ಲಿ ನೋಡಿ ಬೆಳಗ್ಗೆ ಕರೆ ಮಾಡಿ 503 ಅಂಕ ಬಂದಿದೆ ಎಂದು ಹೇಳಿದರು. 503 ಅಂಕ ಎಂದು ಕೇಳಿದ ಕೂಡಲೇ ನನಗೆ ಒಮ್ಮೆ ಶಾಕ್. ಯಾಕೆಂದರೆ ಈ ಕಲಾ ಮಾಧ್ಯಮದಲ್ಲಿ ಪಾಸ್ ಆಗೋದು ಸುಲಭ, ಆದರೆ ಅಂಕ ಜಾಸ್ತಿ ಕೊಡಲು ಮೌಲ್ಯಮಾಪಕರು ಸಿಕ್ಕಾಪಟ್ಟೆ ಕಂಜೂಸ್ ಮಾಡ್ತಾರೆ . ಅಂತಹದ್ರಲ್ಲಿ ನನಗೆ ಭರ್ತಿ ಶೇ.83.33 ಅಂಕ ಬಂದಿದ್ದನ್ನು ಕೇಳಿ ನಂಬಲು ಸಾಧ್ಯವೇ ಆಗಿಲ್ಲ. ಕೂಡಲೇ ಹೇಳಿದೆ ಮೋಸ್ಟ್ಲಿ ನೀವು ಯಾವುದೋ ಬೇರೆ ನಂಬರ್ ಟೈಪ್ ಮಾಡಿರಬೇಕು. ಇನ್ನೊಮ್ಮೆ ಸರಿಯಾಗಿ ನಂಬರ್ ಬರೆದುಕೊಳ್ಳಿ ಎಂದು ಹೇಳಿ ಮತ್ತೊಮ್ಮೆ ತಿಳಿಸಿದೆ. ಸ್ವಲ್ಪ ಸಮಯದ ನಂತರ ನಮ್ಮ ಮನೆಯ ಹತ್ತಿರದವರು ಇಷ್ಟೇ ಅಂಕ ಬಂದಿದೆ ಎಂದಾಗ ಅಷ್ಟೊಂದು ಅಂಕ ಬಂದಿದ್ದು ನನಗೆ ಎನ್ನುವುದು
ಖಚಿತವಾಯಿತು.
ಮಾರ್ಕ್ಸ್ ಬಂದಿದ್ದನ್ನು ಕೇಳಿ ಬಂಪರ್ ಲಾಟರಿ ಸಿಕ್ಕಿದ್ದಷ್ಟು ಖುಷಿ ಆಯ್ತು. 'ಕೊನೆಯ ಸ್ಲಾಗ್ ಓವರ್ ವೇಗದ ಶತಕ ಸಿಡಿಸಿದ್ದೇನೆ' ಎನ್ನುವ ಸಂತಸದಲ್ಲಿ ನನ್ನಿದ್ದರೆ ತಂದೆ ಉಜಿರೆಗೆ ಹೋಗಲು ಸಿದ್ಧತೆ ನಡೆಸುತ್ತಿದ್ದರು. ಮೈಸೂರಿನ ಮಾವ ನಾನು ಪಿಯು ಓದುವಾಗಲೇ ಡಿಗ್ರಿಗೆ ಸಿದ್ಧವನಕ್ಕೆ ಸೇರಿಸಬೇಕು ಎಂದು ಹೇಳಿದ್ದರು. ಅದರಂತೆ ತಂದೆಯವರು ಉಜಿರೆಗೆ ಹೋಗಿ ಕಾಲೇಜು ಮತ್ತು ಸಿದ್ಧವನದ ಅರ್ಜಿಯನ್ನು ತಗೆದುಕೊಂಡು ಬಂದರು. ಎಲ್ಲ ಅರ್ಜಿಗಳನ್ನು ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ಉಜಿರೆಗೆ ನಮ್ಮ ಪ್ರಯಾಣ ಹೋಯಿತು.
ಆರಂಭದಲ್ಲೇ ಕಾಲೇಜಿಗೆ ಅರ್ಜಿ ನೀಡಲಾಯಿತು. ಬಳಿಕ ಸಿದ್ಧವನಕ್ಕೆ ಅರ್ಜಿ ನೀಡಲು ಹೋದೆವು. ಕಚೇರಿಯಲ್ಲೇ ಪಾಲಕರಾದ ವಿದ್ವಾನ್ ಶ್ರೀ ಮಹಾಬಲೇಶ್ವರ ಭಟ್ ಕುಳಿತಿದ್ದರು. ಅಂಕಗಳನ್ನು ನೋಡಿ ಒಳ್ಳೆ ಅಂಕ ಬಂದಿದೆ ಅಲ್ವಾ ಎಂದು ಹೇಳಿದರು. ಕೂಡಲೇ ತಂದೆಯವರು ಸೀಟ್ ಸಿಗುತ್ತಾ? ಕನ್ಫರ್ಮ್ ಮಾಡಿ ಎಂದರು. ಉತ್ತಮ ಅಂಕ ಬಂದಿದೆ ಸಿಗಬಹುದು. ಈಗಾಗಲೇ ಪಿಯು ಫುಲ್ ಆಗಿದೆ. ನಿಮ್ಮ ಮಗನಿಗಿಂತಲೂ ಹೆಚ್ಚಿನ ಅಂಕದ ವಿದ್ಯಾರ್ಥಿ ಬಂದರೆ ಕಷ್ಟ. ಆದರೂ ಶೇ.99 ಸಿಗಬಹುದು ಎಂದು ಭರವಸೆ ನೀಡಿದರು.
ಅರ್ಜಿ ನೀಡಿ ನಾಲ್ಕೈದು ದಿನವಾದರೂ ಯಾವುದೇ ಕರೆ ಬಾರದ್ದನ್ನು ನೋಡಿ ಮೋಸ್ಟ್ಲಿ ಶ್ರೇಯಾಂಕ ಪಡೆದ ಮಕ್ಕಳು ಬಂದಿರಬೇಕು, ಹೀಗಾಗಿ ಸೀಟ್ ಸಿಕ್ಕಿಲ್ಲ ಎಂದು ಕೊಂಡಿದ್ದೆ. ಆದರೆ ಒಂದು ವಾರದ ನಂತರ ಸಿದ್ಧವನ ಮತ್ತು ಕಾಲೇಜಿನಲ್ಲಿ ಸೀಟ್ ಸಿಕ್ಕಿದೆ ಕರೆಯೂ ಬಂತು ಪತ್ರವೂ ಬಂತು. ಪತ್ರ ನೋಡಿ ಖುಷಿಯೋ ಖುಷಿ. ಪತ್ರದಲ್ಲಿ ತಿಳಿಸಿದ ದಿನ ಕಾಲೇಜು, ಸಿದ್ಧವನ ಶುಲ್ಕವನ್ನು ಕಟ್ಟಲಾಯಿತು.
ಕಾಲೇಜು ಸೋಮವಾರ ಆರಂಭವಾದರೆ ಭಾನುವಾರ ನಮ್ಮ ಪ್ರಯಾಣ ಉಜಿರೆಗೆ ಹೊರಟಿತು. ಒಂದು ಟ್ರಂಕ್ನಲ್ಲಿ ಬಟ್ಟೆ ಬರೆ, ಮತ್ತು ಕಾಲೇಜು ಬ್ಯಾಗಿನೊಂದಿಗೆ ಸಿದ್ಧವನ ಪ್ರವೇಶವಾಯಿತು. ಪಾಲಕರ ಜೊತೆ ಮಾತನಾಡಿದ ಬಳಿಕ ಹಿರಿಯ ವಿದ್ಯಾರ್ಥಿಯೊಬ್ಬ ನಮ್ಮನ್ನು ಎರಡನೇ ಮಳಿಗೆ ಸಿ 16 ಕೊಠಡಿಗೆ ಕರೆದುಕೊಂಡು ಹೋದ. ಅಲ್ಲಿ ಈಗಾಗಲೇ ಮೂವರು ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಸೈಲೆಂಟ್ ಆಗಿ ಓದುತ್ತಿದ್ದರು.
ನಮ್ಮ ಬ್ಯಾಚ್ನಲ್ಲಿ ಸಿದ್ಧವನ ಸೇರಿದ ಬಹುತೇಕ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಜೀವನ ಹೊಸತು. ಕೆಲ ಪೋಷಕರು ಬಹಳ ದುಃಖದಿಂದ ಮಗನನ್ನು ಕಳುಹಿಸಿಕೊಡುತ್ತಿದ್ದರು. ಸಂಜೆ ಪ್ರಾರ್ಥನ ಮಂದಿರದಲ್ಲಿ ಸಿದ್ಧವನದಲ್ಲಿ ಹೇಗೆ ಇರಬೇಕು ಎನ್ನುವುದರ ಬಗ್ಗೆ ವಾರ್ಡನ್ ತಿಳಿಸಿಕೊಟ್ಟರು. ಇದಾದ ಬಳಿಕ ಕೆಳಗಡೆ ಇರುವ ಲೈಬ್ರರಿಗೆ ಮೂವರು ಹಿರಿಯ ವಿದ್ಯಾರ್ಥಿಗಳು ಕರೆದುಕೊಂಡು ಹೋದರು. ಇಲ್ಲಿ ಉಡಲು 2 ಪಂಚೆ 2 ಬಿಳಿ ಟವಲ್, ಕೆಲಸ ಮಾಡುವ ವೇಳೆ ಧರಿಸಲು ಎರಡು ಕೆಂಪು ಟವಲ್, ಮಳೆಯಿಂದ ತಲೆಯನ್ನು ರಕ್ಷಿಸಲು ಒಂದು ಪ್ಲಾಸ್ಟಿಕ್ ಟೋಪಿ, ಸ್ನಾನಕ್ಕೆ ಅಲ್ಯುಮಿನಿಯಂ ಬಕೆಟ್, ಒಂದು ತಟ್ಟೆ ಬೌಲ್ ನೀಡಿದರು.
ಪಂಚೆ ಸಿಕ್ಕಿದ ಮೇಲೆ ಇದನ್ನೆ ಇನ್ನು ಧರಿಸಬೇಕು. ಇದು ಇಲ್ಲಿಯ ಯೂನಿಫಾರ್ಮ್. ಜೀನ್ಸ್ ಪ್ಯಾಂಟ್ ಟೀಶರ್ಟ್ ಹಾಕುವಂತಿಲ್ಲ. ಸಿದ್ಧವನದ ವಠಾರದಲ್ಲಿ ಕೆಲಸದ ಅವಧಿ ಬಿಟ್ಟು ಉಳಿದ ಅವಧಿಯಲ್ಲಿ ಬಿಳಿ ಪಂಚೆ ಧರಿಸುವುದು ಕಡ್ಡಾಯ. ಪ್ಯಾಂಟ್ ,3/4 ಕಾಣಿಸಿಕೊಂಡರೆ ವಾರ್ಡನ್ ಕ್ಲಾಸ್ ಮಾಡ್ತಾರೆ ಎಂದು ಹಿರಿಯ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು. ನನಗೆ ಪಂಚೆ ಉಡಲು ಬರುತ್ತಿದ್ದರೂ ಕೆಲ ಸ್ನೇಹಿತರಿಗೆ ಪಂಚೆ ಉಡಲು ಬರುತ್ತಿರಲಿಲ್ಲ. ಹೀಗಾಗಿ ದ್ವಿತೀಯ ಪಿಯುಸಿ ಅಲ್ಲೇ ಓದಿದ್ದ ವಿದ್ಯಾರ್ಥಿಗಳು ಪಂಚೆ ಉಡುವುದು ಹೇಗೆ ಎಂದು ಅವರಿಗೆ ಹೇಳಿಕೊಡುತ್ತಿದ್ದರು.
ರೂಮಿನಲ್ಲಿದ್ದ 3 ಮಂದಿ ಮತ್ತು ಹೊಸದಾಗಿ ಸೇರಿದ 4 ಮಂದಿ ಮೊದಲ ದಿನ ಮಾತನಾಡಿದ್ದು ಬಿಟ್ಟರೆ ಬೇರೆ ಯಾರು ಮಾತನಾಡಲೇ ಇಲ್ಲ. ಸೀನಿಯರ್ಗಳು ಹೇಗಿರುತ್ತಾರೋ ಎನ್ನುವ ಭಯದಲ್ಲೇ ಮೊದಲ ದಿನ ಕಳೆದು ಹೋಯಿತು.
---------------------------
ಎಲ್ಲರೂ ಬಕೆಟ್ ತನ್ನಿ... ಸ್ನಾನ ಮಾಡೋ ಬಕೆಟ್ ಈಗ ಏನಕ್ಕೆ? - 2
ಗುರುಕುಲಕ್ಕೆ ಸೇರಿದ ಆರಂಭದ ಎರಡು ದಿನ ವಿದ್ಯಾರ್ಥಿಗಳಿಗೆ ಹನಿಮೂನ್ ಪಿರೇಡ್ ಇದ್ದಂತೆ. ಮನೆ ಬಿಟ್ಟು ಬಂದಿರುತ್ತಾರೆ, ಬೇಸರದಲ್ಲಿರುತ್ತಾರೆ ಎನ್ನುವ ಕಾರಣಕ್ಕೆ ಏನೋ ಈ ಎರಡು ದಿನ ಕೆಲಸ ಇರುವುದಿಲ್ಲ. ಹನಿಮೂನ್ ಪಿರೇಡ್ ಮುಗಿದ ಬಳಿಕ ಕೆಲಸ ಆರಂಭ.
ಸಿದ್ಧವನದ ನಿಯಮಗಳ ಪ್ರಕಾರ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೆಲಸ ಮಾಡಲೇಬೇಕು. ಕೃಷಿ ಕೆಲಸ, ಡೈರಿ, ತರಕಾರಿ ಹಚ್ಚುವ ಕೆಲಸ , ಲೈಬ್ರೆರಿ, ಆಹಾರ ಲೆಕ್ಕಗಳನ್ನು ನೋಡುವ ಕೆಲಸ... ಹೀಗೆ ಪ್ರತಿಯೊಂದಕ್ಕೂ ವಿದ್ಯಾರ್ಥಿಗಳನ್ನು ಹಂಚಲಾಗುತ್ತದೆ. ಇವುಗಳ ಪೈಕಿ ಅತಿ ಹೆಚ್ಚು ವಿದ್ಯಾರ್ಥಿಗಳು ಕೃಷಿ ಕೆಲಸಕ್ಕೆ ನಿಯೋಜನೆಗೊಂಡಿರುತ್ತಾರೆ.
ಬೆಳಗ್ಗೆ 6.10 ರಿಂದ 7.30 ಇದು ಕೃಷಿ ಕೆಲಸದ ಅವಧಿ. ಈ ಕೆಲಸಕ್ಕೆ ಎಲ್ಲ ವಿದ್ಯಾರ್ಥಿಗಳು ಭಾಗವಹಿಸುವುದಿಲ್ಲ. ಜೊತೆಗೆ ದಿನಂಪ್ರತಿಯೂ ಕೆಲಸ ಇರುವುದಿಲ್ಲ. ಒಂದೊಂದು ಫ್ಲೋರ್ನಲ್ಲಿ 2 ಬ್ಯಾಚ್ ಮಾಡಲಾಗುತ್ತದೆ. ಸೋಮ, ಬುಧ ಶುಕ್ರ ಒಂದು ತಂಡ ಭಾಗವಹಿಸಿದರೆ ಉಳಿದ ಮೂರು ದಿನದಲ್ಲಿ ಮತ್ತೊಂದು ತಂಡ ಕೆಲಸಕ್ಕೆ ಹಾಜರಾಗುತ್ತದೆ.
ಸಾಧಾರಣವಾಗಿ ಯಾವುದೇ ಕೆಲಸ ಮಾಡಬೇಕಾದರೆ ಒಂದು ಎನರ್ಜಿ ಡ್ರಿಂಕ್ ಬೇಕು. ಇಲ್ಲದಿದ್ದರೆ ಹುಮ್ಮಸ್ಸು ಇರುವುದಿಲ್ಲ ನೋಡಿ. ಹೀಗಾಗಿ ನಮಗೆಲ್ಲ ಹುಮ್ಮಸ್ಸು ನೀಡಲು ನಮಗೆಲ್ಲ ಎನರ್ಜಿ ಡ್ರಿಂಕ್ ಸಿಗುತಿತ್ತು. ಅಲ್ಲ ಸಿದ್ಧವನ ಇರುವುದು ಬಡ ಮಕ್ಕಳಿಗೆ. ಇಲ್ಲಿ ಎನರ್ಜಿ ಡ್ರಿಂಕ್? ಎಂದು ಕನ್ಫ್ಯೂಸ್ ಆಗಬೇಡಿ. ನಾವು ನಮ್ಮ ಫೇವರೇಟ್ ಚಹಾಕ್ಕೆ ಎನರ್ಜಿ ಡ್ರಿಂಕ್ ಎಂದು ಕರೆಯುತ್ತಿದ್ದೇವು. ಇದು ಕುಡಿದರೆ ಸಾಕು ಒಂದು ಕೆಲಸ ಮಾಡಲು ಕಿಕ್ ಸಿಗುತಿತ್ತು.
ಚಹಾದಲ್ಲಿ ಕಿಕ್ ಸಿಗಲು ಅಂಥ ವಿಶೇಷತೆ ಏನಿದೆ ಎಂದು ನೀವು ಕೇಳಬಹುದು. ಈಗ ಮಾರುಕಟ್ಟೆಯಲ್ಲಿ ಸಿಗುವ ಹಾಲಿನಿಂದ ಅಡುಗೆ ಭಟ್ಟರು ಇಲ್ಲಿ ಚಹಾ ಮಾಡುವುದಿಲ್ಲ. ಬದಲಾಗಿ ನಮ್ಮ ಸ್ನೇಹಿತರೇ ಬೆಳಗ್ಗೆ ಎದ್ದು ಕರೆದಿರುವ ಹಾಲಿನಿಂದ ಸ್ವಾಧಿಷ್ಟ ಚಹಾ ತಯಾರಾಗುತ್ತದೆ. ಇದಕ್ಕೆ ಸ್ವಲ್ಪ ಶುಂಠಿಯನ್ನು ಗುದ್ದಿ ಹಾಕಿದರೆ ಅದಕ್ಕೆ ಸಿಗುವ ಪರಿಮಳ ಮತ್ತು ಟೇಸ್ಟ್ ಇದೆಯಲ್ಲ.. ಅದು ಅನುಭವಿಸಿ ಹೇಳಬೇಕು.
ಬೆಳಗ್ಗೆ 5.30ಕ್ಕೆ ಪ್ರಾರ್ಥನಾ ಕೊಠಡಿಗೆ ವಿದ್ಯಾರ್ಥಿಗಳು ಗ್ಲಾಸ್/ ಬೌಲ್ ಹಿಡಿದುಕೊಂಡು ಬರಬೇಕು. ಪ್ರಾರ್ಥನೆ ಮುಗಿದ ಬಳಿಕ ವಾರ್ಡನ್ ಹಾಜರಾತಿ ಕರೆಯುತ್ತಾರೆ. 'ಎಸ್ ಸಾರ್' ಎಂದು ಹೇಳಿ ಎದ್ದು ಪ್ರಾರ್ಥನಾ ಮಂದಿರದಿಂದ ಹೊರ ಬಂದರೆ ಇಬ್ಬರು ವಿದ್ಯಾರ್ಥಿಗಳು ಬಿಸಿಬಿಸಿ 'ಎನರ್ಜಿ ಡ್ರಿಂಕ್' ಇರುವ ದೊಡ್ಡ ಪಾತ್ರೆಯೊಂದಿಗೆ ನಿಂತಿರುತ್ತಾರೆ. ಚಹಾ ಸೇವಿಸಿದ ಬಳಿಕ ಕೂಡಲೇ ನಮ್ಮ ಯೂನಿಫಾರ್ಮ್ ತೆಗೆದು ಕೃಷಿ ಕೆಲಸಕ್ಕೆ ಬಳಸುವ ಬಟ್ಟೆಯನ್ನು ತೊಡಬೇಕು. ಇದು ಪ್ರತಿ ದಿನ ನಡೆಯುವ ರೂಟಿನ್ ಕಾರ್ಯಕ್ರಮ.
ಹನಿಮೂನ್ ಪಿರೇಡ್ ಮುಗಿದ ಬಳಿಕ ನಮ್ಮ ಕೆಲಸದ ಅವಧಿ ಆರಂಭವಾಯಿತು ನೋಡಿ. ಬೆಳಗ್ಗೆ 6.10ಕ್ಕೆ ತಲೆಗೆ ಟೊಪ್ಪಿ ಕೆಂಪು ಟವಲ್, ಬನಿಯನ್ ಹಾಕಿ ಕೊಂಡು ಪ್ರೇಯರ್ ಹಾಲಿನ ಮುಂಭಾಗ ಸೇರಿದೇವು. ಈ ವೇಳೆ ವಾರ್ಡನ್, 'ನಿಮಗೆ ನೀಡಿರುವ ಬಕೆಟ್ ತನ್ನಿ' ಎಂದು ಹೇಳಿದರು, ಈ ವೇಳೆ ನಾವು ನಮ್ಮಲ್ಲೇ ಈ ಸ್ನಾನ ಮಾಡುವ ಬಕೆಟ್ ಈಗ ಏನಕ್ಕೆ ಎಂದು ಪ್ರಶ್ನೆ ಮಾಡುತ್ತಿರುವಾಗಹಿರಿಯ ವಿದ್ಯಾರ್ಥಿಗಳು ತೆಂಗಿನ ತೋಟಕ್ಕೆ ಸೆಗಣಿ ಮತ್ತು ಸ್ಲರಿ ಹಾಕಬೇಕು. ಅದಕ್ಕೆ ನಿಮ್ಮ ಬಕೆಟ್ ಬೇಗ ತನ್ನಿ ಎಂದು ಕಮಾಂಡ್ ಮಾಡಿದರು.
ಸರಿ ಎಂದು ಬಕೆಟ್ ತಂದಾಯಿತು. ಈ ವೇಳೆ ಹಿರಿಯ ವಿದ್ಯಾರ್ಥಿಗಳು ಗೊಬ್ಬರ ತೆಗೆಯಲು ಬಳಸುವ ಇಸುಮುಳ್ಳು ಹಿಡಿದು ರೆಡಿಯಾಗಿದ್ದರು. ನಮ್ಮ ಪಯಾಣ ದನದ ಹಟ್ಟಿಯತ್ತ ಹೋಯಿತು. ಅಲ್ಲೆ ಇದ್ದ ವಾರ್ಡನ್ ಎಲ್ಲರೂ ಇಲ್ಲಿ ಬಕೆಟ್ ಇಟ್ಟು ಸಾಲಾಗಿ ದೂರ ದೂರ ನಿಂತು ಕೊಳ್ಳಿ ಎಂದು ಹೇಳಿದರು. ಹಿರಿಯ ವಿದ್ಯಾರ್ಥಿಗಳಲ್ಲಿ ಕೆಲವರು ಮೇಲೆ ಇರುವ ತೆಂಗಿನ ತೋಟದಲ್ಲಿ ದ್ದರು. ನಂತರ ಆರಂಭವಾಯಿತು ನಮ್ಮ ಗೊಬ್ಬರ ಸಾಗಾಟ ಮಾಡುವ ಕೆಲಸ. ಐದು ಆರು ಮಂದಿ ಹಿರಿಯ ವಿದ್ಯಾರ್ಥಿಗಳು ಗೊಬ್ಬರ ಗುಂಡಿಗೆ ಇಳಿದು ಪಟಪಟನೇ ಬಕೆಟ್ ಫುಲ್ ಗೊಬ್ಬರ ತುಂಬಿಸಿ ಮೇಲೆ ಎತ್ತಿ ಕೊಡುತ್ತಿದ್ದರು. ಆ ವಿದ್ಯಾರ್ಥಿ ಮತ್ತೊಬ್ಬ ವಿದ್ಯಾರ್ಥಿಗೆ.. ಹೀಗೆ ಈ ಪಾಸಾದ ಬಕೆಟ್ ಕೊನೆಯವರೆಗೂ ತಲುಪುತಿತ್ತು. ಖಾಲಿ ಬಕೆಟ್ ಪುನಃ ಹಿಂದಕ್ಕೆ ಬರುತಿತ್ತು.
ಗುರುಕುಲದಲ್ಲಿ ಹೆಚ್ಚು ಕಡಿಮೆ 500 ತೆಂಗಿನ ಮರಗಳಿವೆ. ಅದೇ ರೀತಿ ಅಡಿಕೆಯ ಮರಗಳು ಇದೆ. ಇವುಗಳಿಗೆ ಆಯಾಯ ಸಂದರ್ಭದಲ್ಲಿ ಏನು ಹಾಕಬೇಕೋ ಅವುಗಳನ್ನು ನಾವೇ ಮಾಡಬೇಕು. ಅಡಿಕೆ ಮರಕ್ಕೆ ಮತ್ತು ತೆಂಗಿನ ಮರ ಹತ್ತುವಲ್ಲಿ ನಮ್ಮಲ್ಲೇ 'ಭಯಂಕರ ಎಕ್ಸ್ ಪರ್ಟ್'ಗಳಿದ್ದರೂ ತೆಂಗಿನ ಕಾಯಿಯನ್ನು ಕೀಳಲು ಹೊರಗಿನಿಂದ ವ್ಯಕ್ತಿ ಬರುತ್ತಾರೆ. ಆದರೆ ಅನಿವಾರ್ಯ ಸಂದರ್ಭದಲ್ಲಿ ಈ 'ಎಕ್ಸ್ಪರ್ಟ್ಗಳಿಗೆ' ತೆಂಗಿನ ಮರ ಹತ್ತಲು ವಾರ್ಡನ್ ಅನುಮತಿ ನೀಡುತ್ತಾರೆ.
ಇಷ್ಟೇ ಅಲ್ಲದೇ ಇಲ್ಲಿ ತರಕಾರಿಯನ್ನು ಬೆಳೆಸಬೇಕು. ವಾರದ ದಿನವಲ್ಲದೇ ಭಾನುವಾರ ಕೃಷಿಗೆಂದು ನಿಯೋಜನೆಗೊಂಡ ಎಲ್ಲ ವಿದ್ಯಾರ್ಥಿಗಳು ಕೆಲಸ ಮಾಡಬೇಕು. ಇಷ್ಟೇ ಇಲ್ಲದೇ ಕೆಲವೊಮ್ಮೆ ಅಗತ್ಯವಿದ್ದಲ್ಲಿ ಭಾನುವಾರ ಸಂಜೆಯೂ ಕೆಲಸ ಮಾಡಬೇಕಾಗುತ್ತದೆ. ಈ ಕೃಷಿ ಕೆಲಸವನ್ನು ನೋಡಿಕೊಳ್ಳಲು ಮಂತ್ರಿ ಇದ್ದು, ಆತ ಎಲ್ಲವನ್ನೂ ನೋಡಿ ವಾರ್ಡನ್ಗೆ ವರದಿ ನೀಡಬೇಕಾಗುತ್ತದೆ.
ಗುರುಕುಲದಲ್ಲಿ ಕಲಿತ ವಿದ್ಯಾರ್ಥಿಗಳು ಯಾವ ಕೆಲಸಕ್ಕೂ ಸಿದ್ಧರಾಗಿರಬೇಕು. ಪಾಠದ ಜೊತೆಗೆ ಜೀವನ ಶಿಕ್ಷಣವೂ ಗೊತ್ತಿರಬೇಕು ಎನ್ನುವ ಉದ್ದೇಶಕ್ಕಾಗಿ ಮಂಜಯ್ಯ ಹೆಗ್ಗಡೆಯವರು ಗುರುಕುಲವನ್ನು ಸ್ಥಾಪನೆ ಮಾಡಿದ್ದಾರೆ. ಹೀಗಾಗಿ ಇಲ್ಲಿ ಕಲಿತ ಮಕ್ಕಳು ಕೃಷಿ, ಹೈನುಗಾರಿಕೆ, ಅಡುಗೆ, ಇತ್ಯಾದಿ ಯಾವ ಕೆಲಸ ಕೊಟ್ಟರೂ ಒಂದು ತಕ್ಕ ಮಟ್ಟಿನ ಅನುಭವವನ್ನು ಹೊಂದಿರುತ್ತಾರೆ.
------------------------------
ಕೃಷಿ ಕೆಲಸ ಮಾತ್ರ ಅಲ್ಲ ಡೈರಿ ಕೆಲಸಕ್ಕೂ ನಾವು ಸೈ!-3
ಒಂದು ಅಲರಾಂ ಗಡಿಯಾರಕ್ಕೆ ಎಷ್ಟೊಂದು ಮಹತ್ವ ಇದೆ ಎಂದು ಗೊತ್ತಾಗಿದ್ದು ಗುರುಕುಲದಲ್ಲಿ. ಬೆಳಗ್ಗೆ ಐದು ಗಂಟೆಗೆ ಪ್ರಾರ್ಥನಾ ಮಂತ್ರಿ ಜೋರಾಗಿ ಟೈ ಟೈ ಟೈ ಎಂದು ಗಂಟೆ ಬಾರಿಸುತ್ತಾನೆ. ಈ ಗಂಟೆಯ 'ಇಂಪಾದ ದನಿಗೆ' ಎಂಥ ಗಟ್ಟಿ ನಿದ್ರೆಯಲ್ಲಿದ್ದವನು ಏಳುತ್ತಾನೆ. ಒಂದು ವೇಳೆ ರೂಮಿನಲ್ಲಿ ಲೈಟ್ ಆನ್ ಆಗದೇ ಇದ್ದರೆ ವಿಂಗ್ ಲೀಡರ್ ಬಂದು ಏಳಿಸುತ್ತಾನೆ. ಎಚ್ಚರವಾದ ಬಳಿಕ ಮುಖ ತೊಳೆದು, ಹಲ್ಲುಜ್ಜಿ 5.30ಕ್ಕೆ ಪ್ರಾರ್ಥನೆಗೆ ತೆರಳಿ ನಂತರ 6.10ಕ್ಕೆ ಕೃಷಿ ಕೆಲಸಕ್ಕೆ ಹೋಗುವುದು ಕ್ರಮ.
ಆದರೆ ಡೈರಿ ಕೆಲಸ ಇದೆಯಲ್ಲ ಇದು ಬೆಳಗ್ಗೆ 4.30ಕ್ಕೆ ಆರಂಭವಾಗುತ್ತದೆ. ಯಾಕೆ ಇಷ್ಟು ಬೇಗ ಅಂದರೆ 5.15ರ ಹೊತ್ತಿಗೆ ಡೈರಿಗೆ ಎಂದು ನಿಯೋಜನೆಗೊಂಡಿದ್ದ ವಿದ್ಯಾರ್ಥಿಗಳು ಹಾಲು ಕರೆಯಲು ಹಟ್ಟಿಗೆ ಬರುತ್ತಾರೆ. ಇವರು ಬರುವ ವೇಳೆಗೆ ಎಲ್ಲ ಸೆಗಣಿಗಳನ್ನು ಎತ್ತಿ, ನೀರು ಹಾಕಿ ಹಟ್ಟಿ ಕ್ಲೀನ್ ಆಗಿರಬೇಕು. ಇದಕ್ಕಾಗಿ ಪ್ರತಿ ದಿನ ಹಾಜರಿ ಪಟ್ಟಿಯಲ್ಲಿ ಯಾರ ಹೆಸರು ಅನುಕ್ರಮವಾಗಿ ಬರುತ್ತದೋ ಆ ಇಬ್ಬರು ವಿದ್ಯಾರ್ಥಿಗಳು ಡೈರಿಯನ್ನು ಕ್ಲೀನ್ ಮಾಡಬೇಕಾಗುತ್ತದೆ.
ಈ ಡೈರಿ ಕ್ಲೀನ್ ಮಾಡುವವರನ್ನು ಏಳಿಸಲು ಯಾರು ಬರುವುದಿಲ್ಲ. ಅಲರಾಂ ಗಡಿಯಾರ ಒಂದೇ ನಮ್ಮನ್ನು ಕಾಪಾಡುವುದು. ಅಪ್ಪಿ ತಪ್ಪಿ ಮಿಸ್ ಆಗಿ ಈ ಕೆಲಸ ತಡವಾದರೆ ಬೆಳಗ್ಗೆಯೇ ವಾರ್ಡನ್ ಕೈಯಿಂದ 'ಸನ್ಮಾನ ಸಮಾರಂಭ' ಗ್ಯಾರಂಟಿ. ಈ ಕಾರಣಕ್ಕೆ ಮೊದಲೇ ಚೆಕ್ ಮಾಡಿ ಸರಿಯಾಗಿ 4.15ಕ್ಕೆ ಹೊಡೆಯುವಂತೆ ಸೆಟ್ ಮಾಡಿ ಇಟ್ಟುಕೊಳ್ಳುತ್ತಿದ್ದೇವು. ಹಿಂದಿನ ದಿನ ಯಾರು ಡೈರಿಗೆ ಹೋಗಿರುತ್ತಾರೋ ಅವರೇ ಸ್ನೇಹಿತರಿಗೆ ಮುಂಚಿತವಾಗಿ ತಿಳಿಸಿ ಅಲರ್ಟ್ ಆಗಿರುವಂತೆ ಸೂಚಿಸುತ್ತಿದ್ದ ಕಾರಣ ಈ ಎಡವಟ್ಟುಆಗುತ್ತಿರಲ್ಲ.
ಡೈರಿಯಲ್ಲೂ ಎರಡು ಬ್ಯಾಚ್ಗಳಿರುತ್ತದೆ. ಒಂದು ಬ್ಯಾಚಿನಲ್ಲಿ 15 ವಿದ್ಯಾರ್ಥಿಗಳಿದ್ದು, ಒಂದೊಂದು ಬ್ಯಾಚ್ನವರು ಒಂದು ವಾರ ಪೂರ್ಣವಾಗಿ ಡೈರಿ ಕೆಲಸ ಮಾಡಬೇಕು. ಬೆಳಗ್ಗೆ 5.15.ಕ್ಕೆ , ಸಂಜೆ 5.30ಕ್ಕೆ ಕಡ್ಡಾಯವಾಗಿ ಹಾಜರಾಗಲೇಬೇಕು. 15 ಜನರಲ್ಲಿ ಒಂದು ಆರು ಮಂದಿ 5.15ರ ವೇಳೆ ಡೈರಿಗೆ ಹೋಗಿ ಬಕೆಟ್ಗೆ ಹಿಂಡಿ, ಬೂಸಾಗಳನ್ನು ಸರಿಯಾದ ಪ್ರಮಾಣದಲ್ಲಿ ನೀರಿಗೆ ಹಾಕಿ ಮಿಕ್ಸ್ ಮಾಡಿ ದನಗಳಿಗೆ ಕೊಡುತ್ತಾರೆ. ದನಗಳು ಇದನ್ನು ಸೇವಿಸುತ್ತಿದ್ದಂತೆ ಉಳಿದ 10 ಮಂದಿ ಬಂದು ಹಾಲು ಕರೆಯಲು ಆರಂಭಿಸುತ್ತಾರೆ.
ಬಹುತೇಕ ದನಗಳಿಗೆ ವಿದ್ಯಾರ್ಥಿಗಳನ್ನು ಕಂಡರೆ ಇಷ್ಟ. ಹೀಗಾಗಿ ಸುಲಭವಾಗಿ ಹಾಲನ್ನು ಕರೆಯಲು ಬಿಡುತ್ತಿದ್ದವು. ಒಂದು ಎರಡು ದನಗಳಿಗೆ ಸ್ವಲ್ಪ ಪೊಗರು ಇತ್ತು. ಹಾಲು ಕರೆಯುವಾಗ ಸ್ವಲ್ಪ ಆ ಕಡೆ ಈ ಕಡೆ ಹೋಗಿ 'ಅಷ್ಟು ಸುಲಭದಲ್ಲಿ ಹಾಲು ಕರೆಯಲು ನಾನು ಬಿಡಲ್ಲ' ಎನ್ನುವಂತೆ ವರ್ತನೆ ಮಾಡುತಿತ್ತು. ಈ ವೇಳೆ ಗಟ್ಟಿ ದೇಹ ಉಳ್ಳವರು ಅದನ್ನು ಸ್ವಲ್ಪ ನಿಯಂತ್ರಣಕ್ಕೆ ತಂದು ಹಾಲನ್ನು ಕರೆಯುತ್ತಿದ್ದರು.
ನಾವು ಇರುವ ಸಂದರ್ಭದಲ್ಲಿ ಹಟ್ಟಿಯಲ್ಲಿ 15 ದನಗಳು ಇದ್ದು, ದಿನಕ್ಕೆ 130 ಲೀಟರ್ ಹಾಲು ಸಿಗುತಿದ್ದ ನೆನಪು. ಹಾಲು ಕರೆದ ಬಳಿಕ ಅಡುಗೆ ಕೋಣೆಯಲ್ಲಿದ್ದ ದೊಡ್ಡ ಪಾತ್ರೆಯೊಂದಕ್ಕೆ ಹಾಲನ್ನು ಸುರಿಯಲಾಗುತ್ತದೆ. ಇಲ್ಲಿ ಗುರುಕುಲದ ದೈನಂದಿನ ಬಳಕೆಗೆ ಹಾಲನ್ನು ಇಟ್ಟುಕೊಂಡು ಉಳಿದ ಹಾಲನ್ನು ಹಣಕ್ಕೆ ಮಾರಾಟ ಮಾಡಲಾಗುತ್ತದೆ. ಈ ಫ್ರೆಶ್ ಹಾಲಿನ ಮಾರಾಟವನ್ನೂ ವಿದ್ಯಾರ್ಥಿಗಳೇ ಮಾಡುವುದು ವಿಶೇಷ. ಗುರುಕುಲದ ಸಮೀಪ ಇರುವ ಮನೆಗಳಿಗೆ, ಕಾಲೇಜಿನ ಸಿಬ್ಬಂದಿ ಮನೆಗೆ ಮಾರಾಟ ಮಾಡಿ ಬರುತ್ತಾರೆ.
ಆದರೆ ದನ ಕರು ಹಾಕುವ ಸಂದರ್ಭದಲ್ಲಿ ಮಾತ್ರ ಡೈರಿ ವಿದ್ಯಾರ್ಥಿಗಳಿಗೆ ಸ್ವಲ್ಪ ಆತಂಕ ಇರುತ್ತದೆ. ಗೋ ಡಾಕ್ಟ್ರು ದನವನ್ನು ಪರಿಶೀಲಿಸಿ ಈ ದಿನದಿಂದ ಈ ದಿನದ ಒಳಗಡೆ ಕಾರು ಹಾಕುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದು ಹೋಗಿರುತ್ತಾರೆ. ಅವರು ಕೊಟ್ಟ ದಿನದಿಂದ ಕರು ಹಾಕುವವರೆಗೂ ಸರದಿಯಂತೆ ಇಬ್ಬರು ಡೈರಿ ವಿದ್ಯಾರ್ಥಿಗಳು 24 ಗಂಟೆ ಕಾಯುತ್ತಲೇ ಇರಬೇಕು. ಅದಕ್ಕಾಗಿ ಡೈರಿ ಮಂತ್ರಿ ಮತ್ತು ಪಾಲಕರು ವಿದ್ಯಾರ್ಥಿಗಳ ಜೊತೆ ಚರ್ಚಿಸಿ ಯಾರು ಯಾವ ಸಮಯದಲ್ಲಿ ಇರಬೇಕು, ಕರು ಹಾಕುವ ವೇಳೆಯಲ್ಲಿ ಏನು ಮಾಡಬೇಕು ಎನ್ನುವುದನ್ನು ಸೂಚಿಸುತ್ತಾರೆ. ಅವರು ಸೂಚಿಸಿದ್ದಂತೆ ಒಬ್ಬ ಸೀನಿಯರ್, ಒಬ್ಬ ಜೂನಿಯರ್ ವಿದ್ಯಾರ್ಥಿ 2/3 ಗಂಟೆಗಳ ಕಾಲ ಡೈರಿಯಲ್ಲಿ ಕಾಯುತ್ತಲೇ ಇರುತ್ತಾರೆ. ಕರು ಹಾಕುತ್ತಿದೆ ಎಂದು ಗೊತ್ತಾದ ಕೂಡಲೇ ಅಲರ್ಟ್ ಆಗಿ ಎಲ್ಲ ಕಸಗಳನ್ನು ತೆಗೆದು ಸುರಕ್ಷಿತವಾಗಿ ಕರುವನ್ನು ರಕ್ಷಣೆ ಮಾಡಲಾಗುತ್ತದೆ.
ಇನ್ನೂ ಡೈರಿಯಲ್ಲೇ ಒಂದು ದೊಡ್ಡ ಬ್ಲಾಕ್ ಬೋರ್ಡ್ ಇದೆ. ಇಲ್ಲಿ ಯಾವ ದನ ಯಾವಾಗ ಹುಟ್ಟಿದ್ದು, ಎಷ್ಟು ಕರು ಹಾಕಿದೆ ಎಷ್ಟು ಲೀಟರ್ ಹಾಲು ನೀಡುತ್ತದೆ ಎನ್ನುವ ಮಾಹಿತಿಯನ್ನು ಡೈರಿ ಮಿನಿಸ್ಟರ್ ಬರೆಯಬೇಕಾಗುತ್ತದೆ.
ನಾವು ಓದುತ್ತಿದ್ದಾಗ ಪಾಲಕರ ಜೊತೆ ಸತೀಶ್ ಸರ್ ಡೈರಿಯನ್ನು ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ನನ್ನ ಸ್ನೇಹಿತ ಈಗ ಗಣಿತ ಉಪನ್ಯಾಸಕನಾಗಿರುವ Ananda Nelyadyಡೈರಿ ಮಂತ್ರಿಯಾಗಿದ್ದ. ಇವರಷ್ಟೇ ಅಲ್ಲದೇ ಸಿದ್ಧವನದ ಕೆಲಸಕ್ಕಾಗಿ ಒಬ್ಬರು ನಿಯೋಜನೆಗೆಗೊಂಡಿದ್ದು, ಅವರು ಹೊತ್ತು ಹೊತ್ತಿಗೆ ಬೈ ಹುಲ್ಲನ್ನು ದನಗಳಿಗೆ ಹಾಕುತ್ತಿದ್ದರು.
ಸಿದ್ಧವನ ಆರಂಭಗೊಂಡಾಗ ಇಲ್ಲಿ ಡೈರಿ ಡಿಪ್ಲೋಮಾ ಕೋರ್ಸ್ ಇತ್ತು. ನಂತರದ ದಿನಗಳಲ್ಲಿ ಈ ಕೋರ್ಸ್ ನಿಲ್ಲಿಸಲಾಗಿದ್ದರೂ ಗುರುಕುಲದ ವಿದ್ಯಾರ್ಥಿಗಳಿಗೆ ಪಶುಪಾಲನೆಯೂ ಗೊತ್ತಿರಲಿ ಎನ್ನುವುದಕ್ಕೆ ಈಗಲೂ ಇದನ್ನು ಮುಂದುವರಿಸಲಾಗುತ್ತಿದೆ.
ಪಂಚ್ಲೈನ್: ಹಟ್ಟಿಯಲ್ಲಿ ಕ್ವೀನ್ಗಳ ಸಂಖ್ಯೆ ಜಾಸ್ತಿ ಇದ್ದರೂ ಏಕಾಂಗಿಯಾಗಿದ್ದ ನಮ್ಮ ಕಿಂಗ್ ಟಿಂಕು ಮಾತ್ರ ಪವರ್ ಫುಲ್ ಆಗಿದ್ದ...
----------------------------------------------
ನೋ ತಿಂಡಿ... ಓನ್ಲೀ ಗಂಜಿ ಚಟ್ನಿ -4
ಬೆಳಗ್ಗಿನ ಉಪಹಾರಕ್ಕೆ ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ, ರಾಗಿ ಮುದ್ದೆ ಫೇಮಸ್, ನಮ್ಮ ದಕ್ಷಿಣ ಕನ್ನಡದಲ್ಲೂ ಈಗಲೂ ಗಂಜಿ ಚಟ್ನಿ ಸಖತ್ ಫೇಮಸ್. ಬಿಸಿ ಬಿಸಿ ತಿಳಿಯೊಂದಿಗೆ ಕುಚ್ಚಿಲಕ್ಕಿಯನ್ನು ಚಟ್ನಿಯೊಂದಿಗೆ ತಿಂದರೆ ಮಧ್ಯಾಹ್ನದವರೆಗೂ ಹೊಟ್ಟೆ ತಾಳ ಹಾಕುವುದೇ ಇಲ್ಲ. ಅದೊಂಥರ ಹೊಟ್ಟೆಯಲ್ಲಿ ಕಾಂಕ್ರೀಟ್ ಹಾಕಿದ ಅನುಭವ. ಇದು ಗಂಜಿ ಚಟ್ನಿ ಪವರ್. ಇಂಥ 'ಪವರ್ ಫುಲ್ ಫುಡ್' ಸಿದ್ಧವನದಲ್ಲಿ ಬೆಳಗ್ಗೆ ನಮಗಾಗಿ ಸಿದ್ಧವಾಗಿರುತಿತ್ತು.
ದಕ್ಷಿಣ ಕನ್ನಡದಲ್ಲೇ ಓದಿದ ವಿದ್ಯಾರ್ಥಿಗಳಿಗೆ ಗಂಜಿ ಚಟ್ನಿ ಹೊಸದೇನಲ್ಲ. ಆದರೆ ಈ ಜಿಲ್ಲೆ ಬಿಟ್ಟು ಹೊರಗಿನಿಂದ ಬಂದವರಿಗೆ ಆರಂಭದಲ್ಲಿ ಗಂಜಿ ಚಟ್ನಿ ಇಷ್ಟವಾಗುತ್ತಿರಲಿಲ್ಲ. ಬಿಳಿ ಅಕ್ಕಿಯೂ ಅಲ್ಲ, ಕುಚ್ಚಿಲಕ್ಕಿ ಬೇರೆ. ಇಷ್ಟವಿಲ್ಲದೇ ಇದ್ದರೂ ಕೃಷಿ ಕೆಲಸದಿಂದ ದಣಿದಿದ್ದ ದೇಹ ಹಸಿವಾಗಿದ್ದ ಕಾರಣ ಗಂಜಿ ಚಟ್ನಿ ಸರಾಗವಾಗಿ ಹೊಟ್ಟೆಗೆ ಇಳಿಯುತಿತ್ತು. ಎರಡು, ಮೂರು ದಿನ ಅಷ್ಟೇ.. ಮತ್ತೆ ಈ ಪವರ್ ಫುಲ್ ಫುಡನ್ನು ಅವರೂ ಮೆಚ್ಚಿದ್ದರು.
ಬೆಳಗ್ಗೆ 8 ಗಂಟೆಗೆ ಬೆಳಗಿನ ಉಪಹಾರ, ಮಧ್ಯಾಹ್ನ 1 ಗಂಟೆಗೆ ಊಟ, ರಾತ್ರಿ 7 ಗಂಟೆಗೆ ಭೋಜನದ ಸಮಯವಿದ್ದರೆ, ಜೈನ ವಿದ್ಯಾರ್ಥಿಗಳು ಸಂಜೆ 6.15ರ ಒಳಗಡೆ ಭೋಜನ ಮಾಡಬೇಕಿತ್ತು. ಗುರುಕುಲದ ಒಳಗಡೆ ಬಿಳಿ ಪಂಚೆ, ಬಿಳಿ ಶರ್ಟ್ ಸಮವಸ್ತ್ರವಾಗಿದ್ದರೆ, ಅನ್ನಪೂರ್ಣ ಭೋಜನ ಶಾಲೆಗೆ ಹೋಗಬೇಕಾದರೆ ಬಿಳಿ ಪಂಚೆ ಮತ್ತು ಬಿಳಿ ಟವಲ್ ಧರಿಸಿಕೊಂಡು ಹೋಗಬೇಕು.
ಈ ಗಂಜಿ ಚಟ್ನಿಯನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲ. ಸಖತ್ ಟೇಸ್ಟ್... ಬೀಟ್ ರೂಟ್ ಸಂಬಾರ್ ನಾನು ಕೇಳಿದ್ದೆ. ಆದರೆ ಬೀಟ್ ರೂಟ್ ಚಟ್ನಿಯಾಗಿ ಬಳಸಬಹುದು ಎಂದು ಗೊತ್ತಾಗಿದ್ದು ಸಿದ್ಧವನದಲ್ಲಿ. ಹುರುಳಿ, ಬೀಟ್ ರೂಟ್ ಚೀನಿಕಾಯಿ ,ಪೂಂಬೆ.. ಹೀಗೆ ವಾರದಲ್ಲಿ ಒಂದೊಂದು ಚಟ್ನಿ ಇರುತ್ತಿತ್ತು. ಈ ಚಟ್ನಿಗೆ ಹೇಗೆ ಮಸಾಲ ಪಾಕ ಮಾಡುತ್ತಿದ್ದರೋ ನನಗೆ ಗೊತ್ತಿಲ್ಲ. ಆದರೆ ಚಟ್ನಿ ಮಾತ್ರ ಸೂಪರ್..ಯಾವಾಗ್ಲೂ ಘಮ್ ಅಂತಿತ್ತು. ವಾರ ಪೂರ್ತಿ ಗುರುಕುಲದಲ್ಲಿ ಬೆಳಗ್ಗೆ ಗಂಜಿ ಚಟ್ನಿ ಇದ್ದರೆ, ಭಾನುವಾರ ಸಂಜೆ ಮಾತ್ರ ತಿಂಡಿ. 3.30ರ ವೇಳೆಗೆ ಅವಲಕ್ಕಿ, ಉಪ್ಪಿಟ್ಟು ಬಿಟ್ಟರೆ ಬೇರೆ ಯಾವ ತಿಂಡಿಯೂ ಸಿಗುತ್ತಿರಲಿಲ್ಲ. ಅದು ಲೆಕ್ಕದ್ದು ಒಂದು ಸೌಟ್ನಲ್ಲಿ ಎಷ್ಟು ಹಿಡಿಯುತ್ತೋ ಅಷ್ಟು ಮಾತ್ರ.
ಆಹಾರ ಬಡಿಸಲು 14 ಬ್ಯಾಚ್ ಇದ್ದು, ಅಂತಿಮ ಪದವಿಯಿಂದ ಹಿಡಿದು ಪ್ರಥಮ ಪಿಯುಸಿಯವರೆಗಿನ ವಿದ್ಯಾರ್ಥಿ ಬಡಿಸಲೇಬೇಕು. ಬೆಳಗ್ಗೆ ಎಲ್ಲರೂ ಸಾಲಾಗಿ ಕುಳಿತ ಬಳಿಕ ಪ್ರಾರ್ಥನಾ ಮಂತ್ರಿ ಆ ದಿನ ಬಡಿಸಬೇಕಾದ ತಂಡದ ಸದಸ್ಯರ ಹೆಸರನ್ನು ಗಟ್ಟಿಯಾಗಿ ಓದುತ್ತಾನೆ. ಇದಾದ ಬಳಿಕ ಅನ್ನಪೂರ್ಣೆ ಸದಾಪೂರ್ಣೆ.. ಸಹನಾವವತು ಸಹನೌ ಭುನಕ್ತು ಶಾಂತಿ ಮಂತ್ರ ಹೇಳಿ ಹೇಳಿ ಉಪಹಾರ/ರಾತ್ರಿಯ ಭೋಜನವನ್ನು ಸೇವಿಸುವುದು ಸಂಪ್ರದಾಯ. ಧರ್ಮಸ್ಥಳದಲ್ಲಿ ನೀವು ಅನ್ನ ಬಡಿಸುವ ಗಾಡಿಗಳನ್ನು ನೋಡಿರಬಹುದು. ಅಂತಹದ್ದೆ ಎರಡು ಗಾಡಿಗಳು ಸಿದ್ಧವನದಲ್ಲಿತ್ತು. ಈ ಗಾಡಿಯಲ್ಲಿ ಗಂಜಿ/ಅನ್ನವನ್ನು ತುಂಬಿಸಿ ಬಡಿಸುವುದೇ ಏನೋ ಒಂಥರ ಖುಷಿ.
ನಾನು ಪದವಿಗೆ ಸೇರಿದ ಆರಂಭದಲ್ಲಿ ಬೆಳಗ್ಗೆ ಗಂಜಿ ಚಟ್ನಿಇತ್ತು. ಆದರೆ ಮೂರು ತಿಂಗಳ ಬಳಿಕ ಸಿದ್ಧವನದ ಆಡಳಿತದ ಮಂಡಳಿ ಮಕ್ಕಳಿಗೆ ಇನ್ನು ಮುಂದೆ ಗಂಜಿ ಚಟ್ನಿಯ ಬದಲು ಬೆಳಗ್ಗೆ ಎಲ್ಲ ಹಾಸ್ಟೇಲ್ನಲ್ಲಿರುವಂತೆ ಉಪಹಾರ ನೀಡುವ ನಿರ್ಧಾರವನ್ನು ಕೈಗೊಂಡಿತು.ವಾರದಲ್ಲಿ ಒಂದು ದಿನ ತಿಂಡಿಗಾಗಿ ಭಾನುವಾರವನ್ನು ಕಾಯುತ್ತಿದ್ದ ನಮಗೆ ಪ್ರತಿ ದಿನ ತಿಂಡಿ ಸಿಗುತ್ತದೆ ಎನ್ನುವುದನ್ನು ಕೇಳಿ ಏನೋ ಖುಷಿ. ಅಷ್ಟೇ ಅಲ್ಲದೇ ತಿಂಡಿ ಜೊತೆ ಕಷಾಯ ಸಿಗುತ್ತೆ ಎಂದು ಕೇಳಿದ ಮೇಲೆ ನಮಗೆ ಇಮ್ಮಡಿ ಫುಲ್ಖುಷಿ. ಆದರೆ ಶನಿವಾರ ಎನ್ಸಿಸಿ, ಎನ್ಎಸ್ಎಸ್..ಇತ್ಯಾದಿ ಇರುವ ಕಾರಣ ಏನೋ ಗೊತ್ತಿಲ್ಲ ಅ ದಿನ ಮಾತ್ರ ಬೆಳಗ್ಗೆ ಗಂಜಿ ಚಟ್ನಿ ಇರುತಿತ್ತು.
ಇಡ್ಲಿ, ರವಾ ಇಡ್ಲಿ, ದೋಸೆ, ಚಿತ್ರಾನ್ನಾ, ಪುಳಿಯೋಗರೆ, ಪಲಾವ್,ಬಿಸಿ ಬೇಳೆ ಬಾತ್, ವಾಂಗಿ ಬಾತ್ ಇದು ನಮ್ಮ ಬೆಳಗಿನ ಉಪಹಾರದ ಮೆನು. ಸೋಮವಾರದಿಂದ ಶುಕ್ರವಾರದ ವರೆಗೆ ಈ ತಿಂಡಿಯಿದ್ದರೆ 'ವೀಕೆಂಡ್ ವಿಥ್ ಅನ್ನಪೂರ್ಣ'ದ ವಿಶೇಷ ತಿಂಡಿಯಾಗಿ ಚಪಾತಿ, ಕೆಲವೊಮ್ಮೆ ಮಸಾಲ ದೊಸೆಯನ್ನೂ ಸವಿಯುವ ಭಾಗ್ಯ ಸಿಗುತಿತ್ತು.
ಆರಂಭದ ಚಪಾತಿಯ ತಯಾರಿಯ ಅನುಭವ ಈಗಲೂ ಮರೆಯಲು ಸಾಧ್ಯವಿಲ್ಲ. ಗುರುಕುಲದ 250 ವಿದ್ಯಾರ್ಥಿಗಳು, ಇನ್ನು ಕ್ರೀಡಾ ಹಾಸ್ಟೇಲ್ನಿಂದ 30 ವಿದ್ಯಾರ್ಥಿಗಳು ಇವರಿಗೆಲ್ಲ ಚಪಾತಿ ಮಾಡುವುದು ಅಂದರೆ ಸುಲಭದ ಮಾತೇ? ಒಂದು ಸಲ ಬ್ಯಾಟಿಂಗ್ ಇಳಿದರೆ ಕನಿಷ್ಟ 5 ಚಪಾತಿಯನ್ನು ಎದುರಿಸದೇ ಬಿಡುವವರಲ್ಲ. ಇದಕ್ಕಾಗಿ ಬೆಳಗ್ಗೆ 6 ಗಂಟೆಯಿಂದಲೇ ಚಪಾತಿ ಲಟ್ಟಿಸುವ ಕಾರ್ಯಾಚರಣೆ ಆರಂಭವಾಗುತಿತ್ತು. ಅಡುಗೆ ಭಟ್ಟರು ಗೋಧಿ ಹಿಟ್ಟನ್ನು ಮಿಕ್ಸ್ ಮಾಡಿ ಕೊಟ್ಟರೆ 15ವಿದ್ಯಾರ್ಥಿಗಳ ತಂಡ ಚಪಾತಿ ಲಟ್ಟಿಸುವಲ್ಲಿ ತೊಡಗುತಿತ್ತು. ಆರಂಭದಲ್ಲಿ ವಿಶ್ವದ ವಿವಿಧ ರಾಷ್ಟ್ರಗಳ ಭೂಪಟಗಳು ಸೃಷ್ಟಿಯಾಗುತ್ತಿದ್ದರೆ, ನಂತರ ವೃತ್ತಾಕಾರದಲ್ಲೇ ಚಪಾತಿ ಮೂಡಿ ಬರತೊಡಗಿತು.
ಅರ್ಜೆಂಟ್ ಕೆಲಸ ಇರುವವರು, ಬೆಳಗ್ಗೆ 9 ಗಂಟೆಗೆ ತರಗತಿ ಆರಂಭವಾಗುವ ವಿದ್ಯಾರ್ಥಿಗಳು ಹೆಚ್ಚಾಗಿ ಮೊದಲ ಸಾಲಿನಲ್ಲಿ ಕುಳಿತು ಬೇಗನೆ ಎದ್ದು ಹೋಗುತ್ತಾರೆ. ಆದರೆ ಬೆಳಗ್ಗೆ 10 ಗಂಟೆಗೆ ತರಗತಿ ಇರುವವವರು, ಹೆಚ್ಚು ತಿಂಡಿ ತಿನ್ನುವವರು ಕೊನೆಯ ಸಾಲಿನಲ್ಲಿ ಕುಳಿತುಕೊಳ್ಳುವುದು ಸಾಮಾನ್ಯ. ಗುರುಕುಲದಲ್ಲಿ ಎಲ್ಲರಿಗೂ ಸಮ ಪ್ರಮಾಣದಲ್ಲಿ ತಿಂಡಿ ಸಿಗುತ್ತದೆ. ಹಾಗೆಂದ ಮಾತ್ರಕ್ಕೆ ಜಾಸ್ತಿ ಹಾಕಿ ಕಸದ ತೊಟ್ಟಿಗೆ ಎಸೆಯುವಂತಿಲ್ಲ. ಕೆಲವೊಮ್ಮೆ ಇಡ್ಲಿ ಬೇಯುವುದು ತಡವಾದರೆ ಕೂಡಲೇ ಸಿಗುವುದಿಲ್ಲ. ಕಾಯಲು ತಾಳ್ಮೆ ಇಲ್ಲದವರು ಬೇಗನೇ ಔಟಾಗಿ ಪೆವಿಲಿಯನ್ ಸೇರಿಕೊಂಡರೆ, ತಿಂಡಿ ಪ್ರಿಯರು ನಿಧಾನವಾಗಿ ಬ್ಯಾಟಿಂಗ್ ಆರಂಭಿಸಿ ಎಲ್ಲ 'ಬಾಲ್'ಗಳನ್ನು ಹೊಡೆದು ಭರ್ಜರಿ ರನ್ ಮಾಡುತ್ತಿದ್ದರು.
ಕಾಲೇಜಿನ ವಿದ್ಯಾರ್ಥಿಗಳ ಪೈಕಿ ವೇಗವಾಗಿ ಯಾರು ನಡೆಯುತ್ತಾರೋ ಅವರು ಗುರುಕುಲದ ವಿದ್ಯಾರ್ಥಿಗಳು ಎನ್ನುವ ಮಾತಿದೆ. ಯಾಕೆಂದರೆ ಕೇವಲ ಒಂದು ಗಂಟೆಯ ಒಳಗಡೆ ಕಾಲೇಜನ್ನು ಬಿಟ್ಟು ಮರಳಿ ಕಾಲೇಜಿಗೆ ಎಂಟ್ರಿ ಆಗ್ತಾರೆ. ಕಾಲೇಜಿನಿಂದ ಗುರುಕುಲಕ್ಕೆ ಅಂದಾಜು 500 ಮೀಟರ್ ದೂರವಿದ್ದು ಮಧ್ಯಾಹ್ನ 1 ಗಂಟೆಗೆ ಕಾಲೇಜು ಬಿಟ್ಟರೆ 1.10ಕ್ಕೆ ಗುರುಕುಲ ತಲುಪಿ, ಕೂಡಲೇ ಡ್ರೆಸ್ ಚೆಂಜ್ ಬಿಳಿ ಪಂಚೆ, ಬಿಳಿ ಟವಲ್ ಹೊದ್ದು ಭೋಜನ ಶಾಲೆಗೆ ತೆರಳಿದರೆ 1.35ರ ಒಳಗಡೆ ಮರಳಿ ರೂಮ್. ಬಳಿಕ ಡ್ರೆಸ್ ಚೆಂಜ್ ಮಾಡಿ ಮತ್ತೆ ಕಾಲೇಜಿಗೆ ಪ್ರಯಾಣ.
ಮೂರು ಹೊತ್ತಿನ ಆಹಾರಕ್ಕೆ ತಿಂಗಳಿಗೆ ಕನಿಷ್ಟ ಮೂರು ಸಾವಿರ ರೂ. ಆಗುತ್ತದೆ. ಹೀಗಿರುವಾಗ ಆಹಾರ ವಸತಿಗಾಗಿ ವರ್ಷಕ್ಕೆ ಕೇವಲ ಮೂರು ಸಾವಿರ ರೂ. (ಈಗ ಜಾಸ್ತಿಯಾಗಿದೆ) ಶುಲ್ಕ ನೀಡಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುತ್ತಿರುವ ಸಿದ್ಧವನಕ್ಕೆ ನಮೋ ನಮಃ
------------------------------------------
ಪ್ರಾರ್ಥನಾ ಮಂದಿರವೆಂಬ ಜ್ಞಾನ ಮಂದಿರ-5
"ನೀನು ಸರಿಯಾಗಿ ಒಂದು ನಿಮಿಷ ಭಾಷಣ ಮಾಡುವರೆಗೂ ಪ್ರತಿ ದಿನ ಮಾತನಾಡಬೇಕು. ಚೀಟಿಯಲ್ಲಿ ಬರೆದು ಓದಿದರೂ ಪರವಾಗಿಲ್ಲ. ವೇದಿಕೆಗೆ ಬಂದು ಭಾಷಣ ಮಾಡಬೇಕು" ಇದು ಗುರುಕುಲದ ಪಾಲಕರಾದ ವಿದ್ವಾನ್ ಶ್ರೀ ಮಹಾಬಲೇಶ್ವರ ಭಟ್ ಭಾಷಣ ಮಾಡಲು ವೇದಿಕೆಗೆ ಬರಲು ಹೆದರಿದ ವಿದ್ಯಾರ್ಥಿಯೊಬ್ಬನಿಗೆ ಹೇಳಿದ ಮಾತು.
ಪ್ರಾರ್ಥನಾ ಮಂದಿರದಲ್ಲಿ ಕೇವಲ ಪ್ರಾರ್ಥನೆಯೊಂದೆ ನಡೆಯುತ್ತಿರಲಿಲ್ಲ. ಪ್ರಾರ್ಥನೆಯ ಜೊತೆ ಜ್ಞಾನವನ್ನು ಹೆಚ್ಚಿಸುವ ಕಾರ್ಯಕ್ರಮಗಳು ನಡೆಯುತ್ತಿತ್ತು. ಸಂಜೆ 6.10ಕ್ಕೆ ವಿದ್ಯಾರ್ಥಿಗಳು ಎಲ್ಲ ಪ್ರಾರ್ಥನಾ ಮಂದಿರಕ್ಕೆ ಸೇರಿ ಪ್ರಾರ್ಥನೆ ಮಾಡಿದ ಬಳಿಕ ಪಾಲಕರು ಪ್ರತಿದಿನ( ಸೋಮ, ಮಂಗಳ, ಗುರು, ಶುಕ್ರ) ಭಗವದ್ಗೀತೆಯ ಅಧ್ಯಾಯದ ಕೆಲ ಶ್ಲೋಕವನ್ನು ಹೇಳಿ ಅರ್ಥವನ್ನು ವಿವರಿಸುತ್ತಿದ್ದರು.
ಭಗವದ್ಗೀತೆಯ ಜೊತೆಗೆ ಡಿವಿ ಗುಂಡಪ್ಪನವರ ಮಂಕುತಿಮ್ಮನ ಕಗ್ಗವನ್ನು ವಾಚಿಸಿ ದೊಡ್ಡ ದೊಡ್ಡ ವ್ಯಕ್ತಿಗಳ ಜೀವನದ ಟರ್ನಿಂಗ್ ಪಾಯಿಂಟ್ ಘಟನೆಗಳನ್ನು ವಿವರಿಸುತ್ತಿದ್ದರು. ಸಾಧಾರಣವಾಗಿ 6.50ಕ್ಕೆ ಪಾಲಕರು ತಮ್ಮ ಮಾತುಗಳಿಗೆ ವಿರಾಮ ಹೇಳಿ ವಿದ್ಯಾರ್ಥಿ ಭಾಷಣಕ್ಕೆ ಅನುಮತಿ ನೀಡುವುದು ಕ್ರಮ. ಪ್ರತಿಯೊಬ್ಬ ವಿದ್ಯಾರ್ಥಿಯು ವೇದಿಕೆಗೆ ಬಂದು ಭಾಷಣ ಮಾಡಬೇಕು ಎನ್ನುವುದು ಪಾಲಕರ ಆಶಯ. ಇಷ್ಟ ಬಂದ ಯಾವ ವಿಚಾರದ ಬಗ್ಗೆ ಮಾತನಾಡಲು ಸ್ವಾತಂತ್ರ್ಯ ಇತ್ತು. ಒಂದು ವೇಳೆ ಭಾಷಣ ಮಾಡಲು ವೇದಿಕೆಗೆ ಯಾರು ಹಿಂಜರಿಯುತ್ತಿದ್ದರೋ ಅವರಿಗೆಲ್ಲ ಪಾಲಕರು ನಾನು ಆರಂಭದಲ್ಲಿ ಏನು ಬರೆದಿದ್ದೇನೋ ಅದೇ ರೀತಿಯಾಗಿ ಕ್ಲಾಸ್ ತೆಗೆದುಕೊಂಡು ವೇದಿಕೆಗೆ ಬರುವಂತೆ ಮಾಡಿ ಅವರಿಗಿದ್ದ ಸ್ಟೇಜ್ ಭಯವನ್ನು ಕಡಿಮೆ ಮಾಡುತ್ತಿದ್ದರು.
ಬುಧವಾರ ಪಾಲಕರ ಪ್ರವಚನ ಇಲ್ಲ. ಈ ದಿನ ಕಾಲೇಜಿನ ಪ್ರಾಧ್ಯಾಪಕರಿಂದ ಭಾಷಣ ಇರುತಿತ್ತು. ಶಿಕ್ಷಣ ಮಂತ್ರಿ ವಾರದ ಆರಂಭದಲ್ಲೇ ಪ್ರಾಧ್ಯಾಪಕರ ಜೊತೆ ಮಾತನಾಡಿ ಅವರನ್ನು ಗುರುಕುಲಕ್ಕೆ ಆಹ್ವಾನಿಸಬೇಕಿತ್ತು.ಇದರ ಜೊತೆ ಹಿರಿಯ ವಿದ್ಯಾರ್ಥಿಗಳು ರಸಪ್ರಶ್ನೆ, ಚರ್ಚಾ ಕಾರ್ಯಕ್ರಮ ನಡೆಸುತ್ತಿದ್ದರು. ಚರ್ಚಾ ಕಾರ್ಯಕ್ರಮದಲ್ಲಿ ಭಯಂಕರ ಚರ್ಚೆ ನಡೆಯುತಿತ್ತು. 7 ಗಂಟೆಗೆ ಪ್ರಾರ್ಥನಾ ಅವಧಿ ಕೊನೆಯಾಗಬೇಕಿದ್ದರೂ ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದನ್ನು ನೋಡಿ ಈ ಅವಧಿ ಮತ್ತೆ 10, 15 ನಿಮಿಷ ವಿಸ್ತರಣೆಗೊಳ್ಳುತ್ತಿತ್ತು.
ಮೇಲಿನ ಭಾಗದಲ್ಲಿ ತಿಳಿಸಿರುವುದು ಸಂಜೆಯ ಕಾರ್ಯಕ್ರಮವಾದರೆ ಬೆಳಗ್ಗಿನ ಪ್ರಾರ್ಥನೆಯ ವೇಳೆ ಪ್ರಾಣಾಯಮ ಮಾಡಬೇಕಿತ್ತು.ನಾಡಿಶೋಧನ, ಶೀತಲಿ, ಸಧಂತಿ, ನಾಸಿಕ,ಭ್ರಮರಿ ಪ್ರಾಣಾಯಮ ಮಾಡುತ್ತಿರುವಾಗ, ಇವುಗಳನ್ನು ಮಾಡುವುದರಿಂದ ದೇಹಕ್ಕೆ ಹೇಗೆ ಒಳ್ಳೆದಾಗುತ್ತದೆ ಎನ್ನುವುದನ್ನು ಪಾಲಕರು ವಿವರಿಸುತ್ತಿದ್ದರು. ಇದಾದ ಬಳಿಕ ವಿದ್ಯಾರ್ಥಿಯೊಬ್ಬ ಕಡ್ಡಾಯವಾಗಿ ಶುಭಾಷಿತ ಹೇಳಿ ವಿವರಿಸಬೇಕಿತ್ತು.
ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಗೆ ಈ ಪ್ರಾಣಾಯಮ, ಪ್ರಾರ್ಥನೆಗಳು ಹೊಸದು. ಅದರಲ್ಲೂ ಕೆಲ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡುತ್ತಿರುವಾಗಲೇ ಬೆಲ್ಲ ತೂಗುತ್ತಿದ್ದರು. ಕೂಡಲೇ ವಾರ್ಡನ್ ಆತನ ಹತ್ತಿರ ಹೋಗಿ' ಏನ್ ಮಾಡ್ತಿದ್ದೀಯಾ ಇಲ್ಲಿ' ಎಂದು ಗದರಿಸಿದಾಗ ಆತನ ನಿದ್ದೆ ಒಂದು ಕ್ಷಣದಲ್ಲಿ ಹೋಗಿರುತಿತ್ತು. ಆರಂಭದ ದಿನಗಳಲ್ಲಿ ಮಾತ್ರ ಈ ಬೆಲ್ಲ ತೂಗುವ ಕಾರ್ಯಕ್ರಮ. ನಂತರ ಎಲ್ಲ ವಿದ್ಯಾರ್ಥಿಗಳ ಜೊತೆ ಅವರೂ ಸೇರಿ ಹೋಗುತ್ತಿದ್ದರು.
ರಾತ್ರಿ ,ಹಗಲು ಬೇರೆ ಏನು ಕೆಲಸ ಮಾಡದೇ ಬರೀ ಓದಿ ಕೆಲ ವಿದ್ಯಾರ್ಥಿಗಳು ಶ್ರೇಯಾಂಕ ತೆಗೆದರೆ ಗುರುಕುಲದ ವಿದ್ಯಾರ್ಥಿಗಳು ಇಲ್ಲಿ ನಡೆಯುವ ಎಲ್ಲ ಚಟುವಟಿಕೆ, ಕೆಲಸದಲ್ಲಿ ಭಾಗಿಯಾಗಿ rank ತೆಗೆಯುವುದು ವಿಶೇಷ. ಆಟ, ಕೂಟ, ಪಾಠ, ಊಟ, ನಿದ್ದೆ ಯಾರು ಚೆನ್ನಾಗಿ ಮಾಡುತ್ತಾರೋ ಅವರು ಓದಿನಲ್ಲಿ ಭಯಂಕರ ಮುಂದಿರುತ್ತಿದ್ದರು. ಸೆಮಿಸ್ಟರ್ ಫಲಿತಾಂಶ ಬಂದಾಗಲೇ ಈ 'ಇಂಟಲಿಜೆಂಟ್ ಬುದ್ಧಿಜೀವಿಗಳ' ಸಾಧನೆ ತಿಳಿಯುತಿತ್ತು. ಹೀಗಾಗಿ ಯಾರೆಲ್ಲ ವಿವಿ ಪರೀಕ್ಷೆಯಲ್ಲಿ ಶ್ರೇಯಾಂಕ ತೆಗೆದಿದ್ದಾರೋ ಅವರ ಹೆಸರು ಪ್ರಾರ್ಥನಾ ಮಂದಿರ ಬಾಗಿಲಿನ ಪಕ್ಕದ ಬೋರ್ಡ್ನಲ್ಲಿ ಬರೆಯಲ್ಪಡುತಿತ್ತು.
ದಿನದ ಎರಡು ಹೊತ್ತು ಪ್ರಾರ್ಥನ ಮಂದಿರಕ್ಕೆ ಬರುವ ವೇಳೆ ಈ rank ಬೋರ್ಡ್ ನೋಡುವಾಗ ಈ ಪಟ್ಟಿಯಲ್ಲಿ ಸ್ಥಾನ ಪಡೆಯಬೇಕೆಂದು ಉಳಿದ ವಿದ್ಯಾರ್ಥಿಗಳಂತೆ ನಾನು ಕನಸು ಕಂಡಿದ್ದೆ. ಆದರೆ ಪ್ರತಿ ಸೆಮಿಸ್ಟರ್ನಲ್ಲಿ ಸ್ಲಾಗ್ ಓವರ್ನಲ್ಲಿ ಸಿಡಿದು ಅರ್ಧಶತಕ ಸಿಡಿಸುತ್ತಿದ್ದ ಕಾರಣ ನಮಗೆ rank ಸಿಗಲೇ ಇಲ್ಲ. ಆದರೆ ನಮ್ಮ ಸ್ಟ್ರೈಕ್ ರೇಟ್ ಮಾತ್ರ ಉತ್ತಮವಾಗಿತ್ತು!
------------------------------------------
ಶು(ಸಿ)ದ್ಧವನದ ಗಣಪತಿ ಹಬ್ಬ- 6
"ಒಟ್ಟಿನಲ್ಲಿ ಇದು ಈ ಬಾರಿ ತಾಲೂಕಿನಲ್ಲಿ ಬೇರೆಲ್ಲೂ ಕಂಡುಬರದ ಶು(ಸಿ)ದ್ಧವನದ ವಿಶಿಷ್ಟ ಗಣಪ"
ಈ ಸಾಲು ಚೌತಿಯ ಮರುದಿನದ ಪತ್ರಿಕೆಯಲ್ಲಿ ಬಂದಾಗ ನಮಗೆ ಖುಷಿಯೋ ಖುಷಿ. ಏನೇ ಆಗಲಿ ನಮ್ಮ ಗಣಪ ತಾಲೂಕಿನಲ್ಲಿ ಫೇಮಸ್ ಆದನಲ್ಲ ಎನ್ನುವ ಹೆಮ್ಮೆ ನಮಗೆ.
ಕಾಲೇಜುಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹಾಸ್ಟೇಲ್ ಇರುವುದು ಸಾಮಾನ್ಯ. ಆದರಂತೆ ಉಜಿರೆಯ ಎಸ್ ಡಿಎಂ ಕಾಲೇಜಿನ ವಿದ್ಯಾರ್ಥಿನಿಯರಿಗೆ ಮೈತ್ರೈಯಿ ಹಾಸ್ಟೇಲ್ ಇದ್ದರೆ ಹುಡುಗರಿಗೆ ಒಂದು ವಸತಿ ನಿಲಯವಿದೆ. ಆದರೆ ಅದಕ್ಕೆ ಹಾಸ್ಟೇಲ್ ಎಂದು ಕರೆಯುವುದಿಲ್ಲ. ಬದಲಾಗಿ ಗುರುಕುಲ, ಸಿದ್ಧವನ ಗುರುಕುಲ ಎಂದೇ ಕರೆಯುತ್ತಾರೆ. ಆರ್ಥಿಕವಾಗಿ ಹಿಂದುಳಿದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುವ ಈ ಗುರುಕುಲದಲ್ಲಿಎಲ್ಲ ಧರ್ಮದ ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ಎಲ್ಲ ಹಬ್ಬಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಹಬ್ಬ ಎಂದರೆ ಅದು ಚೌತಿ ಮಾತ್ರ.
ಸಾಮಾನ್ಯವಾಗಿ ವಿದ್ಯಾರ್ಥಿನಿಲಯದಲ್ಲಿ ಚೌತಿ ಹಬ್ಬದಂದು ಅಂಗಡಿಯಿಂದ ಗಣಪತಿಯನ್ನು ತಂದು ಕುಳ್ಳಿರಿಸಿ ಅದಕ್ಕೆ ಪೂಜೆ ಮಾಡುತ್ತಾರೆ. ಆದರೆ ಸಿದ್ಧವನದಲ್ಲಿ ಹಾಗಲ್ಲ. ಅಲ್ಲಿ ವಿದ್ಯಾರ್ಥಿಗಳೇ ಮಣ್ಣಿನಲ್ಲಿ ಮೂರ್ತಿ ರಚಿಸಿ ಪೂಜೆ ಮಾಡಿ ಅಲ್ಲಿರುವ ಕೆರೆಯಲ್ಲಿ ವಿಸರ್ಜನೆ ಮಾಡುತ್ತಾರೆ. ಪಾಲಕರು(ವಾರ್ಡನ್) ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಕೆಲ ಸೂಚನೆಗಳನ್ನು ನೀಡುತ್ತಾರೆಯೇ ಹೊರತು ಈ ಚೌತಿ ಸಂಪೂರ್ಣ ಉಸ್ತುವಾರಿಯನ್ನು ವಿದ್ಯಾರ್ಥಿಗಳೇ ನೋಡಿಕೊಳ್ಳುತ್ತಾರೆ. ಹೀಗಾಗಿ ಇಂದಿಗೂ ಚೌತಿ ಬಂದಾಗ ಯಾರೆಲ್ಲ ಈ ಗುರುಕುಲದಲ್ಲಿ ಕಲಿತಿದ್ದಾರೋ ಅವರೆಲ್ಲ ಒಮ್ಮೆ ಸಿದ್ಧವನದ ನೆನಪನ್ನು ಮಾಡಿಯೇ ಮಾಡಿಕೊಳ್ಳುತ್ತಾರೆ.
ನೆನಪು ಯಾಕೆ ಮಾಡಿಕೊಳ್ಳುತ್ತಾರೆ ಎನ್ನುವುದಕ್ಕೆ ಕಾರಣವೂ ಇದೆ. ಚೌತಿಗೆ ಇನ್ನು ಒಂದುವರೆ ತಿಂಗಳು ಇದೆ ಎನ್ನುವಾಗಲೇ ಸಿದ್ಧವನದಲ್ಲಿ ಗಣಪತಿಯ ಮೂರ್ತಿಯ ನಿರ್ಮಾಣ ತಯಾರಿ ಕೆಲಸ ಆರಂಭವಾಗುತ್ತದೆ. ಗಣಪತಿ ತಯಾರಿಸುವ ವ್ಯಕ್ತಿಗಳಿಂದ ಆರಂಭದಲ್ಲಿ ಜೇಡಿ ಮಣ್ಣನ್ನು ತರಲಾಗುತ್ತದೆ. ಚೆನ್ನಾಗಿ ಚಿತ್ರ ಬಿಡಿಸಬಲ್ಲ ಪದವಿ ವಿದ್ಯಾರ್ಥಿಗಳ ಹೆಗಲಿಗೆ ಗಣಪತಿ ನಿರ್ಮಾಣ ಕಾರ್ಯದ ಹೊಣೆ ಇರುತ್ತದೆ. ಪ್ರತಿ ವರ್ಷ ವಿದ್ಯಾರ್ಥಿಗಳೇ ಮಾಡಬೇಕಾದ ಕಾರಣ ಚೆನ್ನಾಗಿ ಡ್ರಾಯಿಂಗ್ ಬಿಡಿಸಬಲ್ಲ ಕಿರಿಯ ವಿದ್ಯಾರ್ಥಿಗಳು ಗಣಪತಿ ನಿರ್ಮಾಣ ಮಾಡುತ್ತಿರುವ ಹಿರಿಯ ವಿದ್ಯಾರ್ಥಿಗಳಿಗೆ ಸಹಕಾರ ನೀಡುತ್ತಾರೆ.
ಚೌತಿಯ ಗಣಪನನ್ನು ಕೂರಿಸುವುದು ಗುರುಕುಲದ ಪ್ರಾರ್ಥನಾ ಮಂದಿರದಲ್ಲಿ. ಹೀಗಾಗಿ ಚತುರ್ಥಿಗೆ ಇನ್ನು 20 ದಿನ ಇದೆ ಎನ್ನುವಾಗ ಪಾಲಕರು ಅಂತಿಮ ಪದವಿಯ ವಿದ್ಯಾರ್ಥಿಗಳಿಗೆ ಪ್ರಾರ್ಥನಾ ಮಂದಿರದಲ್ಲಿ ಅಲಂಕಾರಗೊಳಿಸಲು ಅನುಮತಿ ನೀಡುತ್ತಾರೆ. ಅನುಮತಿ ನೀಡುವುದಕ್ಕೂ ಮೊದಲು ನಾವೇನು ಮಾಡುತ್ತಿದ್ದೇವೆ ಎನ್ನುವುದನ್ನು ವಿದ್ಯಾರ್ಥಿಗಳು ಪಾಲಕರಿಗೆ ತಿಳಿಸಬೇಕಾಗುತ್ತದೆ.
ಪಾಲಕರು ಅನುಮತಿ ನೀಡಿದ ಬಳಿಕ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ರಾತ್ರಿ ಪಾಳಿ ಆರಂಭವಾಗುತ್ತದೆ. ಓದಿಗೆ ಚಕ್ಕರ್ ಹೊಡೆದು ಈ ಕೆಲಸ ಮಾಡಲು ನಿಷೇಧವಿರುವುದರಿಂದದ ಚೌತಿ ಮುಗಿಯುವ ವರೆಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ರಾತ್ರಿ 12, 1 ಗಂಟೆಯವರೆಗೆ ಕೆಲಸ ಮಾಡುತ್ತಿರುತ್ತಾರೆ. ಇನ್ನೊಂದು ವಿಶೇಷ ಏನೆಂದರೆ ಪ್ರಾರ್ಥನಾ ಮಂದಿರದಲ್ಲಿ ಏನು ಮಾಡುತ್ತೇವೆ ಎನ್ನುವುದು ಪಾಲಕರಿಗೆ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಗೊತ್ತಿರುತ್ತದೆ. ಚೌತಿಯ ದಿನ ಗಣೇಶನನ್ನು ಕೂರಿಸಿ ಬೆಳಗ್ಗೆ ಬಾಗಿಲು ತೆರೆದಾಗಲೇ ಉಳಿದ ವಿದ್ಯಾರ್ಥಿಗಳಿಗೆ ಈ ಹಿರಿಯ ವಿದ್ಯಾರ್ಥಿಗಳು ಏನು ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ವಿವಿಧ ಕಲ್ಪನೆಗಳನ್ನು ಬಳಸಿ ಪ್ರಾರ್ಥನ ಮಂದಿರವನ್ನು ಅಲಂಕಾರ ಮಾಡುವುದರಿಂದ ಪ್ರತಿ ವರ್ಷವೂ ಉಳಿದ ವಿದ್ಯಾರ್ಥಿಗಳಲ್ಲಿ ಈ ವರ್ಷ ಏನು ಮಾಡುತ್ತೇವೆ ಎನ್ನುವ ಕುತೂಹಲ ಇರುತ್ತದೆ.
2009ರಲ್ಲಿ ಚೌತಿ ಆಚರಣೆಯ ಸಂಪೂರ್ಣ ಹೊಣೆ ನಮ್ಮ ಮೇಲಿತ್ತು. ಒಂದೊಂದು ವಿಚಾರದಲ್ಲಿ ಘಟಾನುಘಟಿಗಳೇ ಸ್ನೇಹಿತರೇ ಇದ್ದ ಕಾರಣ ಐಡಿಯಾಗಳಿಗೆ ಕೊರತೆ ಆಗಲಿಲ್ಲ. ಒಬ್ಬರೊಬ್ಬರ ಐಡಿಯಾಗಳನ್ನು ತೆಗೆದುಕೊಂಡು ಕೊನೆಗೆ ಹಿಮಲೋಕದಲ್ಲಿ ಆದಿ ಶೇಷನ ಮೇಲೆ ಗಣಪತಿ ಕೂರಿಸುವ ಐಡಿಯಾಗೆ ಎಲ್ಲರ ಬೆಂಬಲ ಸಿಕ್ಕಿತು. ಇದಾದ ಉಳಿದ ಜಾಗದಲ್ಲಿ ಹೊರಗಡೆ ಗುಹೆಯ ಮೂಲಕ ಪ್ರವೇಶಿಸಿ ಗಣಪತಿ ದರ್ಶನ ಸಿಗುವಂತೆ ಮಾಡೋಣ ಎಂದು ತೀರ್ಮಾನಿಸಿ ಕೆಲಸ ಆರಂಭಿಸಿದೇವು.
ಈ ಕೆಲಸ ಆರಂಭಿಸುವ ಮೊದಲೇ ಎಲ್ಲ ವರ್ಷದ ಹಿರಿಯ ವಿದ್ಯಾರ್ಥಿಗಳಿಗೆ ಹೇಳಿದಂತೆ ಪಾಲಕರು ನಮಗೆ ಸೂಚನೆಗಳನ್ನು ನೀಡಿದ್ದರು. ಒಳಾಂಗಣ ವಿನ್ಯಾಸಕ್ಕೆ ಜಾಸ್ತಿ ಬಜೆಟ್ ಕೊಡುವುದಿಲ್ಲ. ಅಷ್ಟೇ ಅಲ್ಲದೇ ಸಿದ್ಧವನದಲ್ಲಿ ಸಿಗುವ ವಸ್ತುಗಳನ್ನು ಬಳಸಿಯೇ ಅಲಂಕಾರ ಮಾಡಬೇಕೆಂದು ಹೇಳಿದ್ದ ಕಾರಣ ನಾವು ಹೆಚ್ಚಾಗಿ ಅಂಗಡಿಗಳ ಕಡೆ ಹೋಗದೇ ಗುರುಕುಲದಲ್ಲಿ ಸಿಗುವ ವಸ್ತುಗಳನ್ನೇ ಬಳಸಿ ಅಲಂಕಾರ ಮಾಡಲು ಮುಂದಾದೆವು.
ಗುಹೆಯ ಐಡಿಯಾ ಸುಲಭ. ಆದರೆ ಮಾಡುವುದು ಕಷ್ಟ ಎನ್ನುವುದುಕೆಲಸ ಮಾಡಿದಾಗಲೇ ಗೊತ್ತಾಯಿತು. ನಮ್ಮ ಡೈರಿಗೆ ಹಿಂಡಿ ಬರುವ ಕಾರಣ ನಮಗೆ ಗೋಣಿ ಚೀಲಕ್ಕೆ ಸಮಸ್ಯೆ ಆಗಲಿಲ್ಲ. 80ಕ್ಕೂ ಹೆಚ್ಚು ಗೋಣಿಗಳನ್ನು ಹರಿದು ,ಅದನ್ನು ಹೊಲಿದು ಗುಹೆಯನ್ನು ಸೃಷ್ಟಿಸಿದ್ದು ಆಯಿತು. ಇದಾದ ಬಳಿಕ ಜಲಪಾತದ ನೀರು ಸಂಗ್ರಹಿಸಿಡಲು ಒಳಗಡೆಯೆ ಒಂದು ಸಣ್ಣ ತೊರೆಯನ್ನು ನಿರ್ಮಿಸಿ , ಆ ನೀರು ಮತ್ತೆ ಜಲಪಾತಕ್ಕೆ ಹೋಗುವಂತೆ ವ್ಯವಸ್ಥೆ ಮಾಡಿದ್ದೇವು. ಬೇರೆ ಯಾವ ಕೆಲಸದಲ್ಲೂ ನಮಗೆ ಅಂಥ ಕಷ್ಟವಾಗಲಿಲ್ಲ. ಆದರೆ ನೀರನ್ನು ಸಂಗ್ರಹಿಸುವುದು ಮಾತ್ರ ಬಹಳ ಸವಾಲಿನ ಕೆಲಸ ನೋಡಿ. ಟರ್ಪಲ್ ಮೇಲೆ 2 ಗಂಟೆ ನೀರು ನಿಂತು ಒಂದು ಸಂದಿಯ ಮೂಲಕ ಹೊರಗಡೆ ಹೋದರೆ ನಮ್ಮ ಪ್ರಾರ್ಥನಾ ಮಂದಿರ ಕೆಸರು ಗದ್ದೆಯಾಗುತಿತ್ತು. ಕೊನೆಗೆ ಏನೇನೋ ತಂತ್ರಗಳನ್ನು ಮಾಡಿ ನೀರನ್ನು ಹಿಡಿದಿಡುವಲ್ಲಿ ಯಶಸ್ವಿಯಾದೇವು.
ಪ್ರಾರ್ಥನಾ ಮಂದಿರವನ್ನು ಸಂಪೂರ್ಣವಾಗಿ ಮುಚ್ಚಲು ಅಂತಿಮ ವರ್ಷದ ವಿದ್ಯಾರ್ಥಿನಿಯರು ನಮಗೆ ಸಹಕಾರ ನೀಡಿದ್ದರು. ಮನೆಯ ಸೀರೆಗಳನ್ನು ನಮಗೆ ನೀಡುವ ಮೂಲಕ ಅವರೂ ಗಣೇಶನ ಕೃಪೆಗೆ ಪಾತ್ರರಾದರು. ಹೀಗಾಗಿ ಚೌತಿ ಬಂದಾಗ ಇಂದಿಗೂ ನಮ್ಮ ಬ್ಯಾಚಿನ ಅಂತಿಮ ವರ್ಷದ ವಿದ್ಯಾರ್ಥಿನಿಯರನ್ನು ನಾವು ಒಮ್ಮೆ ನೆನೆಯುತ್ತೇವೆ!.
ಚೌತಿಗೆ ಇನ್ನು ಮೂರು ದಿನವಿದ್ದಾಗ ಎಲ್ಲೆಲ್ಲಿ ನಾವು ಮಣ್ಣುಗಳನ್ನು ಹಾಕಿದ್ದೇವೋ ಅಲ್ಲೆಲ್ಲ ರಾಗಿಯನ್ನು ಬಿತ್ತನೆ ಮಾಡಿದ್ದೆವು. ಪರಿಣಾಮ ಅದು ಕೈ ತೋಟದಲ್ಲಿ ಬೆಳೆದ ಹುಲ್ಲಿನಂತೆ ಕಾಣುತಿತ್ತು. ಹೀಗಾಗಿ ಗಣಪತಿಯನ್ನು ನೋಡಲು ಬಂದ ಬಹಳಷ್ಟುಮಂದಿ ಈ ಹಸಿರು ಹುಲ್ಲನ್ನು ಮುಟ್ಟಿ ನೋಡಿ ಏನಿದು ಎಂದು ಕೇಳಿದಾಗ ನಮಗೆ ಮನಸಿನ ಒಳಗೆ ಏನೋ ಒಂದು ರೀತಿಯ ಸಂತಸ ನೀಡಿದ ಅನುಭವ ಆಗುತಿತ್ತು.(ಪ್ರಾರ್ಥನ ಮಂದಿರದ ಒಳಗಡೆ ನಾವು ಏನೇನು ಮಾಡಿದ್ದೇವೆ ಎನ್ನುವುದಕ್ಕೆ ಪತ್ರಿಕಾ ವರದಿಯ ಫೋಟೋವನ್ನು ಅಪ್ಲೋಡ್ ಮಾಡಲಾಗಿದೆ)
ಅಂತಿಮ ವರ್ಷದ ವಿದ್ಯಾರ್ಥಿಗಳು ಈ ಕೆಲಸ ಮಾಡುತ್ತಿದ್ದರೆ, ಉಳಿದ ವಿದ್ಯಾರ್ಥಿಗಳು ಕೆಲಸ ಮಾಡುತ್ತಾರೆ. ಚೌತಿಗೆ ಇನ್ನು ಒಂದು ವಾರದ ಇದ್ದಾಗ 15 ಕ್ಕೂ ಹೆಚ್ಚು ಕಮಿಟಿಗಳು ನೇಮಕವಾಗುತ್ತದೆ, ಆಮಂತ್ರಣ ಪತ್ರ ಹಂಚುವ ಕಮಿಟಿ, ಪೂಜಾ ಕಮಿಟಿ, ಕ್ಲೀನಿಂಗ್ ಕಮಿಟಿ, ಅತಿಥಿಗಳನ್ನುಸ್ವಾಗತಿಸಲು ಕಮಿಟಿ, ಸ್ಟೇಜ್ ಕಮಿಟಿ, ಪ್ರೋಗ್ರಾಂ ಕಮಿಟಿ.. ಹೀಗೆ ನಾನಾ ಕಮಿಟಿಗಳು ನೇಮಕವಾಗುತ್ತದೆ. ಒಂದೊಂದು ಕಮಿಟಿಯಿಯಲ್ಲಿ 15 ರಿಂದ 20 ವಿದ್ಯಾರ್ಥಿಗಳು ಇರುತ್ತಾರೆ.
ಗಣಪತಿಯನ್ನು ಕುಳ್ಳಿರಿಸಿದ ಮಾತ್ರಕ್ಕೆ ನಮ್ಮಲ್ಲಿ ಚೌತಿ ಆಗುವುದಿಲ್ಲ. ಎರಡು ದಿನವೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿದ್ಧವನದ ಮಕ್ಕಳು ಎವರೆಡಿ ಬ್ಯಾಟರಿ ಇದ್ದ ಹಾಗೇ. ಪ್ರತಿ ವಾರ ಒಂದೊಂದು ವಿಂಗ್ ನಲ್ಲಿರುವ ಸದಸ್ಯರು ಕಡ್ಡಾಯವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲೇಬೆಕೆಂಬ ನಿಯಮವಿರುವುದರಿಂದ ಪ್ರತಿಭೆಗಳಿಗೆ ಕೊರತೆ ಇರುವುದಿಲ್ಲ. ಹೀಗಾಗಿ ಚೌತಿಯ ಎರಡು ದಿನಗಳ ಮೊದಲೇ ಏನೇನು ಕಾರ್ಯಕ್ರಮ ಮಾಡುತ್ತೇವೆ ಎನ್ನುವುದನ್ನು ಪಾಲಕರ ಮುಂದೆ ತೋರಿಸಿ ಅಲ್ಲಿ ಒಪ್ಪಿಗೆಯಾದರೆ ಮಾತ್ರ ವೇದಿಕೆಯಲ್ಲಿ ಪ್ರದರ್ಶನ ನೀಡಲು ಅವಕಾಶ. ಹೀಗಾಗಿ ಹೊರಗಿನವರನ್ನು ಕರೆಸದೇ ಗುರುಕುಲದ ವಿದ್ಯಾರ್ಥಿಗಳೇ ಭರ್ಜರಿಯಾಗಿ ಎರಡು ದಿನಗಳ ಕಾಲ ಮೂರು, ಮೂರು ಗಂಟೆ ಮನೋರಂಜನೆ ನೀಡುತ್ತಾರೆ.
ಮೂರನೇ ದಿನ ವಿಸರ್ಜನಾ ಕಾರ್ಯಕ್ರಮ ನಡೆಯುತ್ತದೆ. ಇದಕ್ಕೂ 15 ಕಮಿಟಿಗಳು ಇರುತ್ತದೆ. ಈ ಶೋಭಾಯಾತ್ರೆಯಲ್ಲಿ ಆರಂಭದಲ್ಲಿ ಕೆಲ ವಿದ್ಯಾರ್ಥಿಗಳು ಪೌರಾಣಿಕ ಪಾತ್ರಗಳ ವೇಷವನ್ನು ಧರಿಸಿ ಮುಂದುಗಡೆ ಇದ್ದರೆ, ನಂತರ ಜಾನಪದ ವೇಷ, ಯಕ್ಷಗಾನದ ವೇಷವನ್ನು ಧರಿಸಿದ ವಿದ್ಯಾರ್ಥಿಗಳು ಹಿಂದೆ ಇರುತ್ತಾರೆ. ಶೋಭಾಯಾತ್ರೆ ನ್ಯಾಚುರೋಪತಿ ಕಾಲೇಜ್, ಹುಡುಗಿಯರ ಹಾಸ್ಟೆಲ್ ತಿರುವು, ಕಾಲೇಜು ಮುಂಭಾಗ ಸಾಗಿ ಉಜಿರೆ ಸರ್ಕಲ್ಗೆ ಸುತ್ತು ಹೊಡೆದು ಮರಳಿ ಅದೇ ದಾರಿಯಾಗಿ ಬಂದು ಗುರುಕುಲದಲ್ಲಿರುವ ಕೆರೆಯಲ್ಲಿ ಗಣೇಶನನ್ನು ವಿಸರ್ಜನೆ ಮಾಡಲಾಗುತ್ತದೆ.
ಸಿದ್ದವನದ ಇನ್ನೊಂದು ವಿಶೇಷತೆ ಏನೆಂದರೆ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ದಿನ ಮಾತ್ರ ಹೊರಗಡೆ ಹೋಗಲು ಅನುಮತಿ. ಆದರೆ ಚೌತಿಯಂದು ಮೆರವಣಿಗೆ ಮೂಲಕ ಹೋಗುವ ಕಾರಣ ಎಲ್ಲ ವಿದ್ಯಾರ್ಥಿಗಳಲ್ಲಿ ಒಂದು ರೀತಿಯ ಹುರುಪು. ಆದರಲ್ಲೂ ವಿದ್ಯಾರ್ಥಿನಿ ನಿಲಯದ ಹತ್ತಿರ ಬಂದಾಗ ಎಲ್ಲಿಲ್ಲದ ಹುರುಪು. ಸಿಕ್ಕಾಪಟ್ಟೆ ಕುಣಿದು ಕುಪ್ಪಳಿಸುತ್ತಾರೆ. ಆದರೆ ಈ ಮೆರವಣಿಗೆಯಲ್ಲಿ ಸಿದ್ದವನದ ವಿದ್ಯಾರ್ಥಿಗಳು ಮಾತ್ರ ಭಾಗವಹಿಸುತ್ತಾರೆ ಹೊರತು ಬೇರೆ ಹುಡುಗರು ಭಾಗವಹಿಸುವುದಿಲ್ಲ ಎನ್ನುವುದು ಗುರುತಿಸಬೇಕಾದ ಮತ್ತೊಂದು ಅಂಶ.
ನಮ್ಮ ಬ್ಯಾಚ್ನ ಗಣೇಶ ಚತುರ್ಥಿಯ ವರದಿಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಚಾರ ಮಾಡಿದ ವ್ಯಕ್ತಿ ಪತ್ರಕರ್ತ Laxmi Machina ಅವರಿಗೊಂದು ಥ್ಯಾಂಕ್ಸ್ ಹೇಳುತ್ತಾ ಅವರು ಬರೆದ ವರದಿಯನ್ನು ಇಲ್ಲಿ ಅಪ್ಲೋಡ್ ಮಾಡಿದ್ದೇನೆ.
----------------------------------------------------
ವೀಕೆಂಡ್ ಸ್ಪೆಷಲ್ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಭಜನೆ -7
" ನೋಡ್ರಪ್ಪ 3.30 ಕ್ಕೆ ತಿಂಡಿ ಇರುತ್ತೆ. ತಿಂಡಿ ನಂತ್ರ ಸಂಜೆ 4 ಗಂಟೆಗೆ ಎಲ್ರೂ ಕಾರ್ನರ್ ರೂಮ್ಗೆ ಸೇರಬೇಕು. ಈ ಭಾನುವಾರ ನಮ್ದು ಕಲ್ಚರಲ್ ಪ್ರೋಗ್ರಾಂ. ಬಂದಿಲ್ಲ ಅಂದ್ರೆ ಅಷ್ಟೇ" ಹೀಗೆಂದು ಕಟ್ಟಪ್ಟಣೆ ಹೊರಡಿಸಿ ಹೋದ ನಮ್ಮ ವಿಂಗ್ ಲೀಡರ್.
ತಿಂಡಿಯಾದ ಬಳಿಕ ವಿಂಗ್ನ ಎಲ್ಲ ವಿದ್ಯಾರ್ಥಿಗಳು ಕಾರ್ನರ್ ರೂಮ್ ಸೇರಿದೇವು. ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಕ್ಸ್ ಪರ್ಟ್ ಗಳಾದ ಮೂರು ಮಂದಿ ಹಿರಿಯ ವಿದ್ಯಾರ್ಥಿಗಳು ಕುಳಿತ್ತಿದ್ದರು. ವಿದ್ಯಾರ್ಥಿಯೊಬ್ಬನನ್ನು ಕರೆದು ನೋಡು ನೀನು ಸ್ಕಿಟ್ ಮಾಡಬೇಕು. ಏನಿಲ್ಲ ಒಂದು 6 ಡೈಲಾಗ್ ಇದೆ ಅಷ್ಟೇ. ಹೇಗೂ ಹಾಡು ಹೇಳ್ತಿಯಲ್ಲ ನೀನು ಒಂದು ಹಾಡು ಹೇಳಬೇಕು.. ಹೀಗೆ ಒಬ್ಬೊಬ್ಬ ವಿದ್ಯಾರ್ಥಿಗೆ ಪಾತ್ರ ನೀಡಲಾಯಿತು. ಒಂದೂವರೆ ಘಂಟೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಪೂರ್ವ ತಯಾರಿಯೂ ನಡೆಯಿತು. ಅಂತಿಮವಾಗಿ ಸಂಜೆ 6.10ರಿಂದ ಪ್ರಾರ್ಥನಾ ಮಂದಿರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಪ್ರದರ್ಶನವನ್ನು ನೀಡಿಯೂ ಆಯ್ತು.
ವಾರದ 4 ದಿನ ಪಾಲಕರಿಗೆ, ಒಂದು ದಿನ ವಿಶೇಷ ಅತಿಥಿಗಳಿಗೆ ಪ್ರಾರ್ಥನಾ ಮಂದಿರ ಮೀಸಲಾಗಿದ್ದರೆ ಶನಿವಾರ ಮತ್ತು ಭಾನುವಾರ ವಿದ್ಯಾರ್ಥಿಗಳಿಗೆ ಮೀಸಲು. ಪರೀಕ್ಷೆ ಸಮಯ ಬಿಟ್ಟು ಪ್ರತಿ ಭಾನುವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಲೇಬೇಕು. ಒಟ್ಟು 6 ವಿಂಗ್ಗಳಲ್ಲಿ ಒಂದು ವಿಂಗ್ನ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮ ನೀಡಬೇಕು. ವಿದ್ಯಾರ್ಥಿಗಳ ದೊಡ್ಡ ಸಮಸ್ಯೆ ಏನೆಂದರೆ ಅಭ್ಯಾಸ ಮಾಡಲು ಯಾವುದೇ ಸಮಯವಿರುವುದಿಲ್ಲ. ಯಾಕೆಂದರೆ ಭಾನುವಾರ ಬೆಳಗ್ಗೆ ಜನರಲ್ ವರ್ಕ್ ಎಲ್ಲರೂ ಕೃಷಿ ಕೆಲಸ ಮಾಡಬೇಕು. ಬಟ್ಟೆ ಒಗೆಯಲು ಸಿಗುವುದೇ ಒಂದು ದಿನ. ಇನ್ನೂ ರಾತ್ರಿ 7.30ರಿಂದ 10.30ರವರೆಗೆ ಅಭ್ಯಾಸ ಮಾಡಿ ತೊಂದರೆ ಮಾಡುವಂತಿಲ್ಲ. ಹೀಗಾಗಿ ಸಿಕ್ಕಿದ ಸಮಯದಲ್ಲಿ ಅಭ್ಯಾಸ ಮಾಡಿ ಪ್ರದರ್ಶನ ನೀಡುವ ಅನಿವಾರ್ಯತೆ.
ಮೇಲಿನ ಎಲ್ಲ ಕಾರಣಗಳಿಂದಾಗಿ ಸಾಂಸ್ಕೃತಿಕ ಕಾರ್ಯಕ್ರಮದ ದಿನ ಕಡಿಮೆ ಅವಧಿಯಲ್ಲಿ ಭರ್ಜರಿ ಬೆಳೆ ತೆಗೆಯುವ ಹೈ ಬ್ರಿಡ್ ತಳಿಗಳಾಗಿ ನಾವು ಬದಲಾಗುತ್ತಿದ್ದೇವು. ಆದರಲ್ಲೂ ಸ್ಕಿಟ್ಗಳಲ್ಲಿ ನಮ್ಮ ಜ್ಯೂನಿಯರ್ ವಿದ್ಯಾರ್ಥಿಗಳು ಭಯಂಕರವಾಗಿದ್ದರು. ಸ್ಪಾಟಲ್ಲಿ ಪಂಚಿಂಗ್ ಡೈಲಾಗ್ ಡೆಲಿವರಿ ಮಾಡುವುದರಲ್ಲಿ ಎತ್ತಿದ ಕೈ. ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಒಂದು ಆರೋಗ್ಯಕರ ಸ್ಪರ್ಧೆಯೂ ಇತ್ತು ಎನ್ನುವುದು ವಿಶೇಷ. ಪ್ರತಿ ಬಾರಿಯೂ ನಮ್ಮ ವಿಂಗ್ ಇನ್ನೊಂದು ವಿಂಗ್ ವಿದ್ಯಾರ್ಥಿಗಳಿಗಿಂತ ಮಿಂ ಬೇಕು ಎಂದು ತಲೆಯಲ್ಲಿ ಇಟ್ಟುಕೊಂಡೇ ಕಾರ್ಯಕ್ರಮ ತಯಾರಾಗುತಿತ್ತು.
ವಾರಕ್ಕೊಂದು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಪರಿಣಾಮ ಎಕ್ಸ್ ಪರ್ಟ್ಗಳಾಗಿ ಚೌತಿ ಸಂದರ್ಭದಲ್ಲಿ ಸಾಂಸ್ಕೃತಿಕ ಮಂತ್ರಿ ಬಳಿ ಬಹಳಷ್ಟು ವಿದ್ಯಾರ್ಥಿಗಳು ಕಾರ್ಯಕ್ರಮಗಳನ್ನು ನೀಡಲು ಹೆಸರು ನೊಂದಾಯಿಸುತ್ತಿದ್ದರು. ಅಷ್ಟೇ ಅಲ್ಲದೇ ಚೌತಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೈತ್ರೇಯಿ ಹಾಸ್ಟೇಲ್ನ ವಿದ್ಯಾರ್ಥಿನಿಯರು ಬರುವ ಕಾರಣ ಏನೋ ಗೊತ್ತಿಲ್ಲ ಪ್ರೋಗ್ರಾಂಗೆ ಸಿಕ್ಕಾಪಟ್ಟೆ ಹೆಸರು ರಿಜಿಸ್ಟರ್ ಆಗುತಿತ್ತು ನೋಡಿ. ಹೀಗಾಗಿ ಎರಡೂವರೆ ಗಂಟೆಯ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಫಿಲ್ಟರ್ ಮಾಡುವ ಅನಿವಾರ್ಯತೆ. ಅದಕ್ಕಾಗಿ ಚೌತಿಯ ಎರಡು ದಿನದ ಹಿಂದೆ ಪಾಲಕರುಗಳ ಮುಂದೆ ಕಾರ್ಯಕ್ರಮವನ್ನು ಅರ್ಧ ಪ್ರದರ್ಶನ ನೀಡಿ ಗ್ರೀನ್ ಸಿಗ್ನಲ್ ಪಡೆದುಕೊಳ್ಳಬೇಕಿತ್ತು.
ಭಾನುವಾರದ ಸಾಂಸ್ಕೃತಿಕ ಕಾರ್ಯಕ್ರಮ ನಮಗೆ ಎನ್ಸಿಸಿಯಲ್ಲೂ ಸಹಾಯವಾಗಿತ್ತು. ಮಂಗಳೂರು ವಿವಿಯ ಕ್ರೆಡಿಟ್ ಬೇಸ್ಡ್ ಸೆಮಿಸ್ಟರ್ನ ಪ್ರಥಮ ಬ್ಯಾಚ್ ವಿದ್ಯಾರ್ಥಿಗಳಾಗಿದ್ದ ಕಾರಣ ನಮ್ಮ ಬ್ಯಾಚ್ನಲ್ಲಿ ಸ್ವಲ್ಪ ಜನ ಎನ್ಸಿಸಿ ಆರ್ಮಿ ಸೇರಿದ್ದೇವು. ರಜೆ ವೇಳೆ ನಡೆಯುವ ಸಿಎಟಿಸಿ ಕ್ಯಾಂಪ್ ಮೂಡಬಿದರೆಯ ಮಹಾವೀರ ಕಾಲೇಜಿನಲ್ಲಿ ಆಯೋಜನೆಗೊಂಡಿತ್ತು. ಈ ಕ್ಯಾಂಪ್ನಲ್ಲಿ ಪ್ರತಿ ರಾತ್ರಿ ಅರ್ಧಗಂಟೆಗಳ ಕಾಲ ಒಂದೊಂದು ಕಾಲೇಜಿನವರಿಗೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಅವಕಾಶ. ಗುರುಕುಲದ ವಿದ್ಯಾರ್ಥಿಗಳಾಗಿದ್ದ ಕಾರಣ ನಮ್ಮಲ್ಲಿ ಯಾರು ಏನು ಮಾಡುತ್ತಾರೆ ಎನ್ನುವುದು ಚೆನ್ನಾಗಿ ತಿಳಿದಿತ್ತು. ಆದರಂತೆ ಸ್ಕಿಟ್, ಮೈಮ್, ಪಿರಮಿಡ್, ಕಾಮಿಡಿ ಫ್ಯಾಶನ್ ಶೋಗಳನ್ನು ಮಾಡಿದ್ದು ಕ್ಲಿಕ್ ಆಗಿತ್ತು. ಎನ್ಸಿಸಿಯ ಅಧಿಕಾರಿಗಳು ಕಾರ್ಯಕ್ರಮ ನೋಡಿ ಫುಲ್ಕುಶ್ ಆಗಿದ್ದರು. ಅಷ್ಟೇ ಅಲ್ಲದೇ ಮಾನವ ಪಿರಮಿಡ್ ಇಷ್ಟವಾಗಿ ಮಂಗಳೂರು ಬೆಟಾಲಿಯನ್ ಮುಖ್ಯಸ್ಥರು ಆಗಮಿಸಿದ ದಿನ ನಡೆದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಪಿರಮಿಡ್ ಮಾಡಲು ಅವಕಾಶ ನೀಡಿದ್ದರು.
ಕಾಲೇಜಿನ ವಾರ್ಷಿಕ ದಿನಾಚರಣೆಗೆ ತರಗತಿವಾರು ವೆರೈಟಿ ಕಾರ್ಯಕ್ರಮದ ಸ್ಪರ್ಧೆ ಇರುತ್ತದೆ. ಆದರೆ ಛದ್ಮವೇಶ(ಫ್ಯಾನ್ಸಿ ಡ್ರೆಸ್) ಸ್ಪರ್ಧೆಗೆ ಆಯಾ ತರಗತಿಯವರೇ ಪಾಲ್ಗೊಳ್ಳಬೇಕೆಂಬ ನಿಯಮ ಇಲ್ಲ. ಹೀಗಾಗಿ ನಾವಿರುವಾಗ ಈ ಸ್ಪರ್ಧೆಗೆ ಗುರುಕುಲದಿಂದ ಕನಿಷ್ಟ ಎಂದಾದರೂ ಮೂರು ತಂಡಗಳು ಭಾಗವಹಿಸುತಿತ್ತು. ನಮ್ಮ ಅವಧಿಯಲ್ಲಿ ಮೈದಾಹಿಟ್ಟು ಮತ್ತು ಬಿಳಿ ಬಣ್ಣವನ್ನು ಮೈಮೇಲೆ ಬಳಿದುಕಂಡು 'ಅನ್ಯಗ್ರಹ ಜೀವಿ'ಗಳ ಬಗ್ಗೆ ಛದ್ಮವೇಶ ಮಾಡಿದ್ದೇವು. ಮರಕ್ಕೆ ಹತ್ತುವಲ್ಲಿ ನಮ್ಮವರಲ್ಲಿ ಬಹುತೇಕರು ಸಿದ್ಧ ಹಸ್ತರಾಗಿದ್ದ ಕಾರಣ ಕಾಲೇಜಿನ ಮರದಿಂದ ಕೆಳಗಡೆ ಇಳಿದು ಪ್ರದರ್ಶನ ನೀಡಿ, ವಿಚಿತ್ರವಾಗಿ ಅಭಿನಯಿಸಿದ್ದಕ್ಕೆ ನಮಗೆ ಎರಡನೇ ಬಹುಮಾನ ಬಂದಿತ್ತು. ಮರು ವರ್ಷ ನಮ್ಮ ಜ್ಯೂನಿಯರ್ಗಳು ಕಾಲೇಜಿನ ಅಂಗಣದಲ್ಲಿ ಡ್ರಾಗನ್ ತಂದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಒಟ್ಟಿನಲ್ಲಿ ಭಾನುವಾರದ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಎನ್ಸಿಸಿ,ಎನ್ಎಸ್ಎಸ್, ರೋವರ್ಸ್ ರೇಂಜರ್ಸ್ ವಿವಿಗಳಲ್ಲಿ ನಡೆಸುವ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಇದ್ದ ಮೊದಲು ಮೆಟ್ಟಿಲು ಎಂದರೆ ತಪ್ಪಾಗಲಾರದು.
ಮೇಲೆ ತಿಳಿಸಿದ್ದು ಭಾನುವಾರದ ಸಾಂಸ್ಕೃತಿಕ ಕಾರ್ಯಕ್ರಮದ ಮಹಿಮೆ ಆಗಿದ್ದರೆ ಶನಿವಾರ ವಿದ್ಯಾರ್ಥಿಗಳು ಭಜನೆ ಮಾಡಬೇಕು. ಹುಡುಗರು ಭಜನೆ ಮಾಡುತ್ತಾರಾ ಎಂದು ನೀವು ಕೇಳಬಹುದು. ಹೌದು ಹುಡುಗರೇ ಇಲ್ಲಿ ಭಜನೆ ಮಾಡಬೇಕು. ಹಾಡುಗಾರರಿಗೆ ಇಲ್ಲಿ ಕೊರತೆ ಇರಲಿಲ್ಲ. ಕೆಲವರು ಎಷ್ಟು ಉತ್ಸಾಹದಿಂದ ಭಾಗವಹಿಸುತ್ತಿದ್ದರು ಎಂದರೆ ಪ್ರಾರ್ಥನಾ ಮಂದಿರಲ್ಲೇ ಖಂಜೀರಾ(ಭಜನೆ ಮಾಡುವಾಗ ಕೈಯಲ್ಲಿ ಹಿಡಿದು ಭಾರಿಸುವ ಸಾಧನ, ಠಮ್ಕಿ ಎಂತಲೂ ಕರೆಯುತ್ತಾರೆ)ಇದ್ದರೂ ಮನೆಯಿಂದಲೇ ತಂದು ಭಜನೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಕೊನೆಗೆ ಮಂಗಳಾರಾತಿಯಾಗಿ ಪಂಚಕಜ್ಜಾಯ ಸೇವಿಸಿದರೆ ಭಜನೆ ಕಾರ್ಯಕ್ರಮ ಮುಗಿಯುತಿತ್ತು.
-------------------------------------
ನಾನು ಗುರುಕುಲದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧನಾಗಿರುತ್ತೇನೆ-8
ಕಾಲೇಜುಗಳಲ್ಲಿ ಚುನಾವಣೆ ನಡೆಯುವುದು ಸಾಮಾನ್ಯ. ಆದರೆ ಹಾಸ್ಟೇಲ್ಗಳಲ್ಲಿ ಚುನಾವಣೆ ನಡೆಯುವುದು ಕಡಿಮೆ. ಬಹುತೇಕ ಹಾಸ್ಟೇಲ್ಗಳಲ್ಲಿ ಅವಿರೋಧವಾಗಿ ಅಧ್ಯಕ್ಷ ಸೇರಿದಂತೆ ಇತರ ಮಂತ್ರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಗುರುಕುಲದಲ್ಲಿ ಹಾಗಲ್ಲ. ಪ್ರಜಾಪ್ರಭುತ್ವದ ಕಲ್ಪನೆ ವಿದ್ಯಾರ್ಥಿಗಳಿಗೆ ತಿಳಿಯಬೇಕು ಎನ್ನುವ ಉದ್ದೇಶದಿಂದ ಗುರುಕುಲದಲ್ಲೂ ವಿದ್ಯಾರ್ಥಿ ಸರ್ಕಾರದ ಆಡಳಿತವನ್ನು ಸ್ಥಾಪಿಸಲಾಗಿದೆ. ವಿಧಾನಸಭಾ ಚುನಾವಣಾ ಸಮಯದಲ್ಲಿ ಯಾವೆಲ್ಲ ಪ್ರಕ್ರಿಯೆಗಳು ನಡೆಯುತ್ತದೋ ಆ ಎಲ್ಲ ಪ್ರಕ್ರಿಯೆಗಳು ಈ ಚುನಾವಣೆಯಲ್ಲಿ ನಡೆದು ವಿದ್ಯಾರ್ಥಿ ಸರ್ಕಾರವನ್ನು ಆಯ್ಕೆ ಮಾಡಲಾಗುತ್ತದೆ.
ವಿದ್ಯಾರ್ಥಿಗಳ ಚುನಾವಣೆ ಎಂದರೆ ಅಲ್ಲಿ ಬಡಿದಾಟ, ಗಲಾಟೆ , ಅಮೀಷಗಳನ್ನು ಒಡ್ಡುವುದು ಸಾಮಾನ್ಯ. ಆದರೆ ಇಲ್ಲಿ ಅದೆಲ್ಲದ್ದಕ್ಕೂ ನಿಷೇಧ. ಆರಂಭದಲ್ಲಿ ಪಾಲಕರು ಚುನಾವಣಾ ಅಧಿಸೂಚನೆಯನ್ನು ಹೊರಡಿಸಿ ಚುನಾವಣಾ ದಿನಾಂಕವನ್ನು ಪ್ರಕಟಿಸುತ್ತಾರೆ. ಚುನಾವಣೆ ಭಾನುವಾರವೇ ನಡೆದು, ಅದೇ ದಿನ ಫಲಿತಾಂಶವನ್ನು ಪ್ರಕಟಿಸುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ.
ಚುನಾವಣಾ ಅಧಿಸೂಚನೆ ಹೊರ ಬಿದ್ದ ಬಳಿಕ ಮೊದಲನೇ ಮಹಡಿ ಮತ್ತು ಎರಡನೇ ಮಹಡಿಯ ಕಾರ್ನರ್ ಕೊಠಡಿಯಲ್ಲಿ ಬಿಸಿಬಿಸಿ ಚರ್ಚೆ ಆರಂಭವಾಗುತ್ತದೆ. ಮೊದಲ ಮಹಡಿಯಲ್ಲಿ ಪಿಯು ವಿದ್ಯಾರ್ಥಿಗಳು ಚರ್ಚೆ ನಡೆಸಿದರೆ, ಎರಡನೇ ಮಹಡಿಯಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳು ತಮ್ಮ ತಮ್ಮಲ್ಲೇ ಮಾತುಕತೆ ನಡೆಸಿ ಅಂತಿಮವಾಗಿ ಚುನಾವಣಾ ಅಖಾಡಕ್ಕೆ ಅಭ್ಯರ್ಥಿಗಳನ್ನು ಇಳಿಸುತ್ತಾರೆ . ಮುಖ್ಯಮಂತ್ರಿ, ಸ್ಪೀಕರ್, ಗೃಹಮಂತ್ರಿ, ಕಾರ್ಯದರ್ಶಿ, ಹಣಕಾಸು ಮಂತ್ರಿ ಸ್ಥಾನಗಳು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಮೀಸಲಿಟ್ಟರೆ ಶಿಕ್ಷಣ, ಸಾಂಸ್ಕೃತಿಕ, ಕ್ರೀಡೆ, ಆಹಾರ ಇತ್ಯಾದಿಗಳಿಗೆ ಪದವಿ ಮತ್ತು ಪಿಯು ವಿದ್ಯಾರ್ಥಿಗಳು ಸ್ಪರ್ಧಿಸಬಹುದು. ಯಾರೆಲ್ಲ ಸ್ಪರ್ಧಿಸುತ್ತಾರೋ ಅವರೆಲ್ಲ ನಾಮಪತ್ರಗಳನ್ನು ತುಂಬಿ ಪಾಲಕರಿಗೆ ನೀಡಿದರೆ ಒಂದು ಹಂತ ಮುಗಿದಂತೆ.
ಎರಡನೇ ಹಂತದಲ್ಲಿ ಬಹಿರಂಗ ಚುನಾವಣಾ ಭಾಷಣ ಮಾಡಬೇಕಾಗುತ್ತದೆ. ಪ್ರಾರ್ಥನಾ ಮಂದಿರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳು ವಿವಿಧ ಆಶ್ವಾಸನೆಗಳನ್ನು ನೀಡಿ ಭಾವಿ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಾರೆ. ನಮ್ಮ ಅವಧಿಯಲ್ಲಿ ಗಂಜಿ ಚಟ್ನಿ ಹೋಗಿ ತಿಂಡಿ ಆರಂಭವಾದ ಹಿನ್ನೆಲೆಯಲ್ಲಿ ಆಹಾರ ಮಂತ್ರಿ ಹುದ್ದೆಗೆ ನಿಂತ ಅಭ್ಯರ್ಥಿಗಳು ಭರಪೂರ ಅಶ್ವಾಸನೆಗಳನ್ನು ನೀಡುತ್ತಿದ್ದರು. ಒಬ್ಬ ವಿದ್ಯಾರ್ಥಿ ನಾನು ಈ ಬಾರಿ ಪ್ರೋಟಿನ್ಯುಕ್ತವಾದ ವಿಶೇಷ ತಿಂಡಿಗಳನ್ನು ಮಾಡಲು ಮುಂದಾಗುತ್ತೇನೆ ಎಂದು ಹೇಳಿದರೆ ಶಿಕ್ಷಣ ಮಂತ್ರಿಗೆ ನಿಂತವ ಕಡಿಮೆ ಖರ್ಚಿನಲ್ಲಿ ಭರ್ಜರಿ ಪ್ರವಾಸವನ್ನು ಆಯೋಜನೆ ಮಾಡುತ್ತೇನೆ. ಶಿಕ್ಷಣ ಮಂತ್ರಿ ಗೃಂಥಾಲಯಕ್ಕೆ ಈ ಬಾರಿ ಮತ್ತಷ್ಟು ಹೊಸ ಪಠ್ಯ ಪುಸ್ತಕವನ್ನು ತರುತ್ತೇನೆ ಎಂದು ಹೇಳುವುದು ಸಾಮಾನ್ಯ.
ಕೃಷಿ ಮಂತ್ರಿಗೆ ನಿಂತವನೊಬ್ಬ ಭರ್ಜರಿ ಭಾಷಣ ಮಾಡಿದ್ದ. 'ಈ ಬಾರಿ ಕಡಿಮೆ ಕೆಲಸ ಮಾಡಿ ಹೆಚ್ಚು ಇಳುವರಿ ತೆಗೆಯುವಂತಹ ಬೆಳೆಗಳನ್ನು ಬೆಳೆಯುತ್ತೇನೆ' ಎಂದು ಆಶ್ವಾಸನೆ ನೀಡಿದಾಗ 'ಅಂಥಾ ಮ್ಯಾಜಿಕ್ ಏನು ಮಾಡ್ತೀರಿ?' ಎಂದು ಪಾಲಕರು ಪ್ರಶ್ನಿಸಿದರೆ, ' ಮೊದಲು ವಿದ್ಯಾರ್ಥಿಗಳು ಮತವನ್ನು ಹಾಕಿ ಜಯವನ್ನು ತಂದು ಕೊಡಲಿ, ಆಮೇಲೆ ನನ್ನ ಕೆಲಸ ನೋಡಿ ಸರ್' ಎನ್ನುವ ಮಾತುಗಳನ್ನು ಹೇಳಬೇಕೇ?
ಸಾಮಾನ್ಯವಾಗಿ ಪಿಯು ಮತ್ತು ಡಿಗ್ರಿ ವಿದ್ಯಾರ್ಥಿಗಳು ಕಣಕ್ಕೆ ನಿಂತಿರುವ ಹುದ್ದೆಗಳಿಗೆ ಭಾರೀ ಪೈಪೋಟಿ ಇರುತ್ತದೆ. ಗುರುಕುಲದಲ್ಲಿ ಎರಡು ಮಳಿಗೆಯಲ್ಲಿ ಪಿಯು ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಒಲಿಸಿಕೊಳ್ಳುವುದು ಬಹಳ ಕಷ್ಟದ ಕೆಲಸ. ಪದವಿ ತರಗತಿಗಳು ಆರಂಭವಾಗುವುದೇ ತಡವಾಗಿ. ಹೀಗಾಗಿ ಮೊದಲೇ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಬುಟ್ಟಿಗೆ ಹಾಕಿರುತ್ತಾರೆ. ಹೀಗಾಗಿ ಚುನಾವಣಾ ಪ್ರಚಾರ ಭಾಷಣದಲ್ಲಿ ಡಿಗ್ರಿ ವಿದ್ಯಾರ್ಥಿಗಳು ಚೆನ್ನಾಗಿ ಭಾಷಣ ಮಾಡಿದರೆ ಈ ಹುದ್ದೆಗೆ ಭಾರೀ ಪೈಪೋಟಿ ಇರುತಿತ್ತು.
ಒಂದೇ ಬ್ಯಾಲೆಟ್ ಪೇಪರ್ನಲ್ಲಿ ಎಲ್ಲ ಹುದ್ದೆಗಳಿಗೆ ನಿಂತ ಅಭ್ಯರ್ಥಿಗಳ ಹೆಸರನ್ನು ಮುದ್ರಿಸಿ ಮತದಾನ ಪ್ರಕ್ರಿಯೆ ನಡೆಯುತ್ತದೆ. ಬೆಳಗ್ಗೆ 7 ಗಂಟೆಗೆ ಆರಂಭವಾದರೆ 8.30ರ ವೇಳೆಗೆ ಮತದಾನ ಮುಕ್ತಾಯಗೊಂಡ ಬಳಿಕ ಮೂವರು ಪಾಲಕರು ಸೇರಿ ಮತವನ್ನು ಎಣಿಕೆ ಮಾಡಿ ಅಂತಿಮವಾಗಿ ಫಲಿತಾಂಶವನ್ನು ಘೋಷಣೆ ಮಾಡುತ್ತಾರೆ.
ಸಾಧಾರಣವಾಗಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಯಾವುದೇ ಹುದ್ದೆ ಇರುವುದಿಲ್ಲ. ಆದರೆ ಇಲ್ಲಿ ಹಾಗಲ್ಲ ಸೋತವರು ಜಯಗಳಿಸಿದವರು ಇಬ್ಬರು ಮಂತ್ರಿ ಸ್ಥಾನ ಭಾಗ್ಯ ಸಿಗುತ್ತದೆ. ಹೀಗಾಗಿ ಇಬ್ಬರೂ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕಾಗುತ್ತದೆ. ಇದು ಇಲ್ಲಿಯ ವಿಶೇಷತೆ. ಕೃಷಿ ಮಂತ್ರಿ ಒಂದು ದಿನ ತೋಟದ ಜವಾಬ್ದಾರಿ ತೆಗೆದುಕೊಂಡರೆ ಉಪ ಕೃಷಿ ಮಂತ್ರಿ ನೇತೃತ್ವದಲ್ಲಿ ಮತ್ತೊಂದು ದಿನ ವಿದ್ಯಾರ್ಥಿಗಳ ಶ್ರಮದಾನ ನಡೆಯುತ್ತದೆ.
ಜಯಗಳಿಸಿದ ಆ ಕ್ಷಣದಿಂದಲೇ ವಿದ್ಯಾರ್ಥಿಗಳು ಅಧಿಕಾರ ಸ್ವೀಕರಿಸಿದ್ದರೂ ಅಧಿಕೃತವಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ಚುನಾವಣೆ ನಡೆದು ಒಂದು ತಿಂಗಳ ಬಳಿಕ ನಡೆಯುತ್ತದೆ. ಗುರುಕುಲದ ಗೌರವ ರಾಜ್ಯಪಾಲರಾದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿ ವಿದ್ಯಾರ್ಥಿಗಳಿಗೆ ಮಂತ್ರಿ ಸ್ಥಾನದ ಬ್ಯಾಡ್ಜ್ ನೀಡುತ್ತಾರೆ. ಈ ಕಾರ್ಯಕ್ರಮದಲ್ಲಿ ಎಡ ಭಾಗದಲ್ಲಿ ಆಡಳಿತ ಪಕ್ಷದ ಸದಸ್ಯರು ಕುಳಿತುಕೊಂಡರೆ, ಬಲ ಭಾಗದಲ್ಲಿ ವಿರೋಧ ಪಕ್ಷದ ಸದಸ್ಯರು ಕುಳಿತುಕೊಂಡು 'ಸಿದ್ಧವನದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಬದ್ಧನಾಗಿರುತ್ತೇನೆ' ಎಂದು ಪ್ರತಿಜ್ಞೆ ಮಾಡಿ ಅಧಿಕಾರವನ್ನು ಸ್ವೀಕರಿಸುತ್ತಾರೆ.
ಗುರುಕುಲದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳ ನಿರೂಪಣೆಯನ್ನು ವಿದ್ಯಾರ್ಥಿಗಳೇ ಮಾಡುತ್ತಾರೆ. ಆದರೆ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಮಾಡುವುದು ವಿಶೇಷ. ಅದರಲ್ಲೂ ಸಂಸ್ಕೃತ ವಿಭಾಗದ ಇ ಮಹಾಬಲೇಶ್ವರ ಭಟ್ ಸರ್ ಮತ್ತು ಕನ್ನಡ ವಿಭಾಗದ ಸಂಪತ್ ಕುಮಾರ್ ಸರ್ ಹೆಚ್ಚು ಬಾರಿ ನಿರೂಪಣೆ ಮಾಡುಕೊಂಡು ಬಂದಿದ್ದಾರೆ.
ಈ ಹಿಂದೆ ಈ ಕಾರ್ಯಕ್ರಮಕ್ಕೆ ಗುರುಕುಲದ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಅಧ್ಯಾಪಕರುಗಳಿಗೆ ಮಾತ್ರ ಆಹ್ವಾನವಿತ್ತು. ಆದರೆ ಈಗ ಕಾಲೇಜಿನ ವಿದ್ಯಾರ್ಥಿಗಳು ಅಲ್ಲದೇ ಪಿಜಿ, ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೂ ಆಹ್ವಾನ ಇರುವ ಕಾರಣ ಈ ಸಮಾರಂಭವನ್ನು ಗುರುಕುಲದಲ್ಲಿ ನಡೆಸದೇ ನ್ಯಾಚುರೋಪತಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗುತ್ತದೆ.
ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ನಡೆದ ಬಳಿಕ ತಿಂಗಳಿಗೆ ಒಂದು ಬಾರಿ ಟಿವಿ ಕೊಠಡಿಯಲ್ಲಿ ಅಧಿವೇಶನ ನಡೆಯುತ್ತದೆ. ರಾತ್ರಿ 8 ಗಂಟೆಯಿಂದ ನಡೆಯುವ ಈ ಅಧಿವೇಶನ ಕಾರ್ಯಕ್ರಮದಲ್ಲಿ ಭಯಂಕರ ಚರ್ಚೆ ನಡೆಯುತ್ತದೆ. ಯಾವ ಮಂತ್ರಿ ಏನು ತಪ್ಪು ಮಾಡಿದ್ದಾನೆ ಎನ್ನುವುದನ್ನು ಮುಲಾಜಿಲ್ಲದೇ ಹೇಳಲಾಗುತ್ತದೆ. ಯಾರನ್ನು ಯಾರು ಬೇಕಾದರೂ ಪ್ರಶ್ನೆ ಮಾಡಲು ಅನುಮತಿ ಇರುವ ಕಾರಣ ಕೆಲವರು ಸಾಕ್ಷ್ಯಗಳನ್ನು ಹಿಡಿದು ಪ್ರಶ್ನೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಚುನಾವಣಾ ಭಾಷಣದಲ್ಲಿ ನೀಡಿದ ಅಶ್ವಾಸನೆ ಈಡೇರಿಸದೇ ಹೋದಲ್ಲಿ, ಆ ಮಂತ್ರಿಗೆ ನೀವು ನೀಡಿದ ಅಶ್ವಾಸನೆ ಎಲ್ಲಿ ಹೋಯಿತು? ಯಾಕೋ ನಮ್ಮ ಮಂತ್ರಿಗಳು 'ಪ್ರಬುದ್ಧ ರಾಜಕಾರಣಿ' ಆಗಲು ಹೊರಟಿದ್ದಾರೆ ಎಂದು ಕಿಚಾಯಿಸಿ ಅವರಿಗೂ ಫುಲ್ ಕ್ಲಾಸ್ ತೆಗೆದುಕೊಳ್ಳಲಾಗುತ್ತದೆ. ಈ ಅಧಿವೇಶನದಲ್ಲಿ ಬಹುತೇಕ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಮಸ್ಯೆ ವಿಚಾರ ಬಂದಾಗ ಪಾಲಕರೇ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಂಡು ಇಬ್ಬರೂ ಮಂತ್ರಿಗಳಿಗೆ ಚಾಟಿ ಬೀಸುವುದು ಸಾಮಾನ್ಯ.
ಅಧಿವೇಶನದಲ್ಲಿ ಮಾತ್ರ ಬಿಸಿಬಿಸಿ ಚರ್ಚೆ. ರಾತ್ರಿಯಾದರೆ ಎಲ್ಲವೂ ಕೂಲ್ ಕೂಲ್. ಮಂತ್ರಿಯ ಕಾರ್ಯ ವೈಖರಿಯ ಬಗ್ಗೆ ಎಷ್ಟೇ ಟೀಕೆ ಮಾಡಿದರೂ ಮರುದಿನ ಕೆಲಸ, ಆಟದಲ್ಲಿ ಎಲ್ಲರೂ ಒಟ್ಟಾಗಿ ಸೇರಿದಾಗ ಈ ಅಧಿವೇಶನದ ವಿಚಾರ ಮರೆತು ಹೋಗಿರುತಿತ್ತು. ನಮ್ಮ ಅವಧಿಯಲ್ಲಿ Sunil DSouza ಮುಖ್ಯಮಂತ್ರಿಯಾಗಿದ್ದರೆ, ನಾನು ಉಪ ಸಾಂಸ್ಕೃತಿಕ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದೆ.
-------------------------------------------
ನಕ್ಷತ್ರಿಕರಂತೆ ಕಾಡುತ್ತಿರುವ ಆ ಇಬ್ಬರನ್ನು ದಯವಿಟ್ಟು ಬಿಟ್ಟುಬಿಡಿ-9
"ನಕ್ಷತ್ರಿಕರಂತೆ ಇಬ್ಬರು ಹುಡುಗರು ನನ್ನ ಹಿಂದೆಯೇ ಕಾಡುತ್ತಿದ್ದಾರೆ. ಕಿರು ಬ್ಯಾಗ್ ಎತ್ತಿಕೊಳ್ಳಬೇಕು ಎಂದರೂ ಅವರು ಬ್ಯಾಗ್ ಕೊಡಿ ನಾವು ಹಿಡಿದುಕೊಳ್ಳುತ್ತೇವೆ ಎಂದು ಹೇಳುತ್ತಾರೆ. ದಯವಿಟ್ಟು ಆ ಹುಡುಗರನ್ನು ಬಿಟ್ಟು ಬಿಡಿ"
ಇದು 1979ರಲ್ಲಿ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಪಿ. ರಾಜರತ್ನಂ ಅವರು ಗುರುಕುಲದ ಇಬ್ಬರು ವಿದ್ಯಾರ್ಥಿಗಳ ಉಪಚಾರದ ಬಗ್ಗೆ ಬಗ್ಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಜೊತೆ ಹೇಳಿದ ಹೊಗಳಿಕೆಯ ಮಾತುಗಳು.
ರಾಜರತ್ನಂ ಅವರು ವಿದ್ಯಾರ್ಥಿಗಳನ್ನು ಹೊಗಳಲು ಕಾರಣವಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಯೋಜನೆಗೊಳ್ಳುವ ಯಾವುದೇ ದೊಡ್ಡ ಕಾರ್ಯಕ್ರಮದಲ್ಲಿ ಗುರುಕುಲದ ವಿದ್ಯಾರ್ಥಿಗಳಿಗೆ ಸ್ವಯಂ ಸೇವಕರಾಗಿ ಭಾಗವಹಿಸಲು ಅವಕಾಶವಿರುತ್ತದೆ. ಸ್ವಯಂ ಸೇವಕರಾಗಿ ಹೋಗಲೇಬೇಕೆಂಬ ಕಡ್ಡಾಯ ನಿಯಮವಿಲ್ಲ. ಯಾರೆಲ್ಲ ಭಾಗವಹಿಸಲು ಇಚ್ಚಿಸುತ್ತಾರೋ ಅವರು ಮೊದಲೇ ಹೆಸರನ್ನು ನೊಂದಾಯಿಸಿಕೊಳ್ಳಬೇಕಾಗುತ್ತದೆ. ಯಾರೆಲ್ಲ ಹೆಸರು ನೀಡಿರುತ್ತಾರೋ ಅವರನ್ನು ವಿವಿಧ ಕಡೆ ಸ್ವಯಂ ಸೇವಕರನ್ನಾಗಿ ನಿಯೋಜಿಸಲಾಗುತ್ತದೆ.
ಪ್ರತಿ ವರ್ಷ ಶ್ರೀಕ್ಷೇತ್ರದಲ್ಲಿ ನಡೆಯುವ ಲಕ್ಷದೀಪೋತ್ಸವದಲ್ಲಿ ಸ್ವಯಂ ಸೇವಕರಾಗಿ ಭಾಗವಹಿಸುವುದು ಎಂದರೆ ನಮಗೆಲ್ಲ ಅದೇನೋ ಹುರುಪು. ಯಾಕೆಂದರೆ ಸಾಹಿತ್ಯ ಮತ್ತು ಸರ್ವಧರ್ಮ ಸಮ್ಮೇಳನ, ರಾಜ್ಯ ಮಟ್ಟದ ವಸ್ತು ಪ್ರದರ್ಶನ , ರಾಜ್ಯ, ರಾಷ್ಟ್ರ ಮಟ್ಟದ ಕಲಾವಿದರಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಇವುಗಳನ್ನು ಯಾವಾಗಲೂ ನೋಡಲು ಸಿಗುವುದಿಲ್ಲ. ಆದರೆ ಇಲ್ಲಿ ಈ ಎಲ್ಲ ಕಾರ್ಯಕ್ರಮಗಳನ್ನು ಒಂದೇ ಕಡೆ ವೀಕ್ಷಿಸಬಹುದಾಗಿದ್ದ ಕಾರಣ ಬಹಳಷ್ಟು ವಿದ್ಯಾರ್ಥಿಗಳು ಸ್ವಯಂಸೇವಕರಾಗಿ
ಭಾಗವಹಿಸಲು ಹೆಸರು ನೊಂದಾಯಿಸುತ್ತಿದ್ದರು.
ಹೆಸರು ನೀಡಿದ ವಿದ್ಯಾರ್ಥಿಗಳನ್ನು ವಿಂಗಡಿಸಿ ಅತಿಥಿ ಸತ್ಕಾರ, ಸ್ಟೇಜ್ ಕಮಿಟಿ, ಫುಡ್ ಕಮಿಟಿ, ವಸ್ತು ಪ್ರದರ್ಶನ ಮಳಿಗೆಯಲ್ಲಿ ಉದ್ಘೋಷಕರಾಗಿ..ಹೀಗೆ ವಿವಿಧ ಕಮಿಟಿಗಳಲ್ಲಿ ಹಾಕಲಾಗುತ್ತದೆ. ಸಾಧಾರಾಣ ದಿನಗಳಲ್ಲೇ ಶ್ರೀ ಕ್ಷೇತ್ರದಲ್ಲಿ ಸಾವಿರಕ್ಕೂ ಹೆಚ್ಚು ಜನ ಸೇರುತ್ತಾರೆ. ಇನ್ನು ಲಕ್ಷದೀಪದಂದು ಕೇಳಬೇಕೇ?..ಜೊತೆಗೆ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನ ಸಹ ಆಯೋಜನೆ ಗೊಳ್ಳುವುದರಿಂದ ಭಕ್ತ, ಜನರ ಜಾತ್ರೆ ಆಗಿರುತ್ತದೆ. ಹೀಗಾಗಿ ಇಲ್ಲಿ ಛತ್ರಗಳು ಸಿಗುವುದು ಕಷ್ಟ. ಆದರೆ ಗುರುಕುಲದ ವಿದ್ಯಾರ್ಥಿಗಳಿಗೆ ಮೊದಲೇ ಕೆಲ ಛತ್ರದ ಕೊಠಡಿಗಳು ಬುಕ್ ಆಗಿರುತಿತ್ತು. ಎಲ್ಲರೂ ಒಟ್ಟಾಗಿ ಈ ಕೆಲಸ ಮಾಡುವುದರಿಂದ ನಮಗೆಲ್ಲ ಒಂದು ಮಿನಿ ಟೂರ್ ಹೋದ ಅನುಭವ. ನಾಲ್ಕು, ಐದು ದಿನ ಕೆಲಸ ಮಾಡುವುದು ಎಂದರೇ ಅದೇನೋ ಒಂದು ಖುಷಿ..
ಅತಿಥಿ ಸತ್ಕಾರ ಸಮಿತಿಗೆ ಸಾಧಾರಣವಾಗಿ ಹಿರಿಯ ವಿದ್ಯಾರ್ಥಿಗಳನ್ನು ನಿಯೋಜಿಸುತ್ತಾರೆ. ಬಿಳಿ ಬಣ್ಣದ ಪಂಚೆ, ಶರ್ಟ್ ಧರಿಸಿದ್ದ ನಮ್ಮನ್ನು ಕಾಲೇಜಿನ ಪ್ರಾಧ್ಯಾಪಕರು ಅತಿಥಿಗಳಿಗೆ ಪರಿಚಯಿಸಿದ ಮೇಲೆ ಅತಿಥಿ ಉಪಚಾರದ ಕೆಲಸ ಆರಂಭ. ಹೊಸದಾಗಿ ಧರ್ಮಸ್ಥಳಕ್ಕೆ ಅತಿಥಿಗಳು ಬಂದಿದ್ದಲ್ಲಿ ಅವರನ್ನು ಕಾರ್ ಮ್ಯೂಸಿಯಂ, ವಸ್ತು ಪ್ರದರ್ಶನ ಮೈದಾನ, ಬಾಹುಬಲಿ ಬೆಟ್ಟಕ್ಕೆ ಕರೆದುಕೊಂಡು ಹೋಗುವ ಅವಕಾಶ. ಅತಿಥಿಗಳು/ಸಾಹಿತಿಗಳು ಎಷ್ಟು ಖುಷಿಯಾಗಿರುತ್ತಿದ್ದರು ಎಂದರೆ ಕೊನೆಗೆ ಅವರು ಶ್ರೀ ಕ್ಷೇತ್ರದಿಂದ ತೆರಳುವಾಗ ಸಹಿ ಹಾಕಿ ತಮ್ಮ ಪುಸ್ತಕವನ್ನು ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿದ ಉದಾಹರಣೆಯೂ ಇದೆ.
ನಮ್ಮ ಅವಧಿಯಲ್ಲಿ ಲಕ್ಷದೀಪೋತ್ಸವ, ಮಹಾಮಸ್ತಕಾಭೀಷೇಕ ನೋಡಲು ಸಿಕ್ಕಿದ್ದರೆ, ಪಿಯುಸಿಯಿಂದ ಡಿಗ್ರಿ ಓದಿದ ನನ್ನ ಸ್ನೇಹಿತರಿಗೆ ಈ ಎರಡೂ ಅಲ್ಲದೇ ಮಹಾ ನಡಾವಳಿಯನ್ನು ನೋಡುವ ಸಂಭ್ರಮ ಸಿಕ್ಕಿತ್ತು. ಯಾರೆಲ್ಲ ಈ ಸಂಭ್ರಮವನ್ನುಅನುಭವಿಸಿದ್ದಾರೋ ಅವರಲ್ಲಿ ಈಗಲೂ ಈ ಸಂಭ್ರಮ ಹಸಿಯಾಗಿಯೇ ಇರುತ್ತದೆ. ಈವಾಗಲೂ ಅಷ್ಟೇ ಶ್ರೀ ಕ್ಷೇತ್ರದಲ್ಲಿ ನಡೆಯುವ ಯಾವುದೇ ದೊಡ್ಡ ಕಾರ್ಯಕ್ರಮಗಳ ಬಗ್ಗೆ ಮಧ್ಯಮಗಳಲ್ಲಿ ಸುದ್ದಿ ಬಂದಾಗ, ಒಂದು ಕಾಲದಲ್ಲಿ ನಾವು ಇಂತಹ ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಅದೇನೋ ಒಂದು ರೀತಿ ಹೆಮ್ಮೆ ಆಗುತ್ತದೆ.
ಈಗ ನಾನು ಲೇಖನದ ಆರಂಭದಲ್ಲಿ ರಾಜರತ್ನಂ ಹೇಳಿದ ಹೊಗಳಿಕೆಯ ಮಾತುಗಳಿಗೆ ಬರುತ್ತೇನೆ. ರಾಜರತ್ನಂ ಗುರುಕುಲದ ವಿದ್ಯಾರ್ಥಿಗಳ ಬಗ್ಗೆ ಹೇಳಿದ ವಿಚಾರ ನನಗೂ ತಿಳಿದಿರಲಿಲ್ಲ. ಕಳೆದ ವಾರ ನಡೆದ ಅಮೃತ ಮಹೋತ್ಸವ ಸಮಾರಂಭದಲ್ಲಿ ಪೂಜ್ಯ ಖಾವಂದರು ಭಾಷಣದಲ್ಲಿ ಈ ವಿಚಾರವನ್ನು ತಿಳಿಸುತ್ತಾ, " ಧರ್ಮಸ್ಥಳ ಸಾಹಿತ್ಯ ಸಮ್ಮೇಳನದ ಬಳಿಕ ಮೈಸೂರಿನ ಒಂದು ಕಡೆ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಾಗ ರಾಜರತ್ನಂ ಅವರು ಕಾರ್ಯಕ್ರಮ ಅತಿಥಿಯಾಗಿ ಹೋಗಿದ್ದರು. ಅಲ್ಲೆ ಅವರಿಗೆ ಕೆಟ್ಟ ಅನುಭವ ಆಗಿತ್ತಂತೆ. ಈ ವೇಳೆ ಗುರುಕುಲದ ವಿದ್ಯಾರ್ಥಿಗಳ ಅತಿಥಿ ಸತ್ಕಾರ ಅವರು ನೆನಪಿಸಿಕೊಂಡು ಮತ್ತೊಮ್ಮೆ ನನ್ನ ಜೊತೆ ಆ ವಿಚಾರವನ್ನುಹಂಚಿಕೊಂಡಿದ್ದರು" ಎಂದು ಮೆಲುಕು ಹಾಕಿದ್ದರು.
ಗುರುಕುಲದಲ್ಲೂ ಅಷ್ಟೇ ಯಾವುದೇ ದೊಡ್ಡ ಕಾರ್ಯಕ್ರಮವಾದರೂ 'ಗೆಸ್ಟ್ ಟ್ರೀಟ್ ಮೆಂಟ್ ಕಮಿಟಿ' ಇರುತ್ತದೆ. ಈ ಕಮಿಟಿಯ ಸದಸ್ಯರು ಬಂದಂತಹ ಅತಿಥಿಗಳನ್ನು ಸ್ವಾಗತ ಮಾಡುವುದರಿಂದ ಹಿಡಿದು ಕೊನೆಗೆ ಅವರು ಹೋಗುವಾಗ ಗುರುಕುಲದ ಗೇಟ್ ವರೆಗೆ ಹೋಗಿ ಬೀಳ್ಕೊಟ್ಟು ಬರಬೇಕು. ಈ ರೀತಿ ಕೆಲಸ ಮಾಡಬೇಕೆಂದು ಪ್ರತಿವರ್ಷ ಪಾಲಕರು ಈ ಕಮಿಟಿಯ ವಿದ್ಯಾರ್ಥಿಗಳಿಗೆ ಸೂಚನೆ ನೀಡುತ್ತಾರೆ. ಈ ಎಲ್ಲ ಕಾರಣಗಳಿಂದ ಅತಿಥಿ ದೇವೋಭವ ಎನ್ನುವ ಉಪನಿಷತ್ ವಾಕ್ಯದಂತೆ ಇಲ್ಲಿ ಈಗಲೂ ಅತಿಥಿಗಳನ್ನು ಗೌರವದಿಂದಲೇ ಸತ್ಕರಿಸಲಾಗುತ್ತದೆ.
------------
ನಮ್ಮ ಕಷ್ಟ ದೂರ ಮಾಡಿ., ಓದಲು ನೆಲೆ ನೀಡಿದ ನಿಮಗಿದೋ ಕೃತಜ್ಞತೆ- 10
"ಬೆಳಗ್ಗೆಯೂ ಕೆಲಸ ,ಸಂಜೆಯೂ ಕೆಲಸ. ಜೀನ್ಸ್ ಪ್ಯಾಂಟ್, ಟೀಶರ್ಟ್ ಹಾಕುವಂತಿಲ್ಲ. ಬೆಳಗ್ಗೆ ಗಂಜಿ ತಿನ್ನಬೇಕು. ಸಂಜೆ ತಿಂಡಿ ಇಲ್ಲ. ಯಾವಾಗ್ಲೂ ಬಿಳಿ ಪಂಚೆ, ಬಿಳಿ ಶರ್ಟ್ ಧರಿಸಬೇಕು. ಮಳೆಗಾಲದಲ್ಲಿ ಈ ಬಟ್ಟೆ ಒಗೆಯುವುದು, ಒಣಗಿಸುವುದು ಮತ್ತೊಂದು ದೊಡ್ಡ ಕಷ್ಟ. ಇಡಿ ಫ್ಲೋರ್ಗೆ ಎರಡೇ ಪ್ಲಗ್ ಬಾಕ್ಸ್.. ಬೆಳಗ್ಗೆ 7.30ರ ನಂತರ ಐರನ್ ಮಾಡಬೇಕು. ಇವುಗಳನ್ನು ನೋಡಿದಾಗ ಸಿದ್ಧವನಕ್ಕೆ ಸೇರಿದ್ದ ಆರಂಭದಲ್ಲಿ ನಾನು ತಂದೆಯವರ ಜೊತೆ ದಯವಿಟ್ಟು ನನಗೆ ಈ ಗುರುಕುಲದಿಂದ ಮುಕ್ತಿ ಕೊಡಿ. ಈ ಕಷ್ಟದಲ್ಲಿ ಓದಲು ಸಾಧ್ಯವಿಲ್ಲ. ಊರಿನಲ್ಲಿರುವ ಯಾವುದಾದರೂ ಲೋಕಲ್ ಕಾಲೇಜಿಗೆ ಸೇರಿಸಿ ಎಂದಿದ್ದೆ. ಆರಂಭದ ಒಂದು ವಾರ ಮಾತ್ರ ಈ ಅನುಭವ... ಆದರೆ ಇಲ್ಲಿ ಯಾವ ಮ್ಯಾಜಿಕ್ ನಡೆಯಿತೋ ಗೊತ್ತಿಲ್ಲ. ಈಗ ಇಲ್ಲಿಂದ ತೆರಳಲು ಮನಸ್ಸೇ ಆಗುತ್ತಿಲ್ಲ. ಅನಿವಾರ್ಯವಾಗಿ ತೆರಳಬೇಕಿದೆ. ಈ ಮೂರು ವರ್ಷದ ಅನುಭವ ಎಲ್ಲಿಯೂ ಸಿಗಲು ಸಾಧ್ಯವಿಲ್ಲ"
ಇದು ಅಂತಿಮ ವರ್ಷದ ಪದವಿ ವಿದ್ಯಾರ್ಥಿಯೊಬ್ಬ ಗುರುಕುಲದ ಸವಿ ನೆನಪಿನ ಬಗ್ಗೆ ಮಾಡಿದ ಭಾಷಣದ ಕೆಲ ಅಂಶಗಳು.
ಆರಂಭದಲ್ಲಿ ಬಹುತೇಕ ವಿದ್ಯಾರ್ಥಿಗಳಿಗೆ ಈ ಭಾಷಣದಲ್ಲಿ ಪ್ರಸ್ತಾಪ ಮಾಡಿದ ಅನುಭವವೇ ಆಗಿರುತ್ತದೆ. ಆದರೆ ಆರಂಭದ ಕೆಲ ದಿನದಲ್ಲಿ ಮಾತ್ರ ಈ ಅನುಭವ. ಬರಬರುತ್ತಾ 'ಮಿನಿ ಕರ್ನಾಟಕ'ದಲ್ಲಿರುವ ಎಲ್ಲ ವಿದ್ಯಾರ್ಥಿಗಳ ಪರಿಚಯವಾದ ಬಳಿಕ ಗುರುಕುಲವನ್ನು ತೊರೆಯುವ ಕನಸು ಸಹ ಬೀಳುವುದಿಲ್ಲ.
ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಪರೀಕ್ಷಾ ಸಮಯವಾದರೆ ಗುರುಕುಲದಲ್ಲಿ ಸಂಜೆಯ ಪ್ರಾರ್ಥನಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ನೆನಪಿನ ಬುತ್ತಿಯನ್ನು ಬಿಚ್ಚುವ ಅವಕಾಶವಿರುತ್ತದೆ. ನೆನಪಿನ ಬುತ್ತಿಗೆ ಕೈ ಹಾಕುವುದು ಎಂದರೆ ಅದು ಅಕ್ಷಯ ಪಾತ್ರೆಗೆ ಕೈ ಹಾಕಿದಂತೆ. ಆರಂಭಗೊಂಡರೆ ಅದು ಮುಕ್ತಾಯವೇ ಆಗುವುದಿಲ್ಲ. ಯಾಕೆಂದರೆ ಮೂರು ವರ್ಷದ ಅನುಭವ ಒಬ್ಬ ಹೇಳಿದರೆ ಮತ್ತೊಬ್ಬ ಪಿಯುನಿಂದ ಡಿಗ್ರಿವರೆಗಿನ ಅನುಭವ ಹೇಳುತ್ತಾನೆ. ಒಬ್ಬೊಬ್ಬನು ಸ್ವಾರಸ್ಯಕರವಾಗಿ ನೆನಪನ್ನು ಹಂಚಿಕೊಳ್ಳುವಾಗ ವಿದ್ಯಾರ್ಥಿಗಳಿಗೆ,ಓ ಈ ರೀತಿಯ ಅನುಭವನ ನನಗೂ ಆಗಿತ್ತು ಎನ್ನುವ ಭಾವನೆ ಮೂಡುವುದು ಸಹಜ.
250ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರೂ ಇದನ್ನು ಹಾಸ್ಟೇಲ್ ಎಂದು ಕರೆಯುವಂತಿಲ್ಲ. ಇದು ವಿದ್ಯಾರ್ಥಿಗಳ ಎರಡನೇ ಮನೆ. ಪಾಲಕರೇ ನಮ್ಮ ತಂದೆ ತಾಯಿ. ಅಷ್ಟೇ ಅಲ್ಲದೇ ಕೃಷಿ, ಡೈರಿ, ಅಡುಗೆ ಇತ್ಯಾದಿ ಮನೆಕೆಲಸಗಳನ್ನು ಮಾಡುತ್ತಿರುವುದರಿಂದ ಇದು ನಮ್ಮ ಮುದ್ದು ಮನೆ. ಈ ಕಾರಣಕ್ಕಾಗಿ ಈ ಮನೆಯನ್ನು ತೊರೆಯುವ ವೇಳೆ ನಮಗೆ ನೆಲೆ ಕೊಟ್ಟವರಿಗೆ ಕೃತಜ್ಞತೆ ಹೇಳುವುದು ನಮ್ಮ ಕರ್ತವ್ಯ. ಅದಕ್ಕಾಗಿ ಮಾರ್ಚ್/ಏಪ್ರಿಲ್ ತಿಂಗಳ ಒಂದು ದಿನ ಕೃತಜ್ಞತಾ ಸಮಾರಂಭ ನಡೆಯುತ್ತದೆ.
ಗುರುಕುಲದ ಗೌರವ ರಾಜ್ಯಪಾಲರಾದ ವೀರೇಂದ್ರ ಹೆಗಡೆಯವರು ಸಿದ್ಧವನಕ್ಕೆ ಆಗಮಿಸಿ, ಅವರಿಗೆ ವಿದ್ಯಾರ್ಥಿಗಳು ಕೃತಜ್ಞತಾ ಪತ್ರವನ್ನು ಸಮರ್ಪಿಸುವುದು ಪದ್ದತಿ. ಈ ಸಮಾರಂಭ ನಡೆದ ಬಳಿಕ ಅಂತಿಮ ವರ್ಷ ಪದವಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಗ್ರೂಪ್ ಫೋಟೋ ತೆಗೆಯುವ ಕಾರ್ಯಕ್ರಮ ನಡೆಯುತ್ತದೆ. ಆದರೆ ನಮ್ಮ ಅವಧಿಯಲ್ಲಿ ಖಾವಂದರು ವಿದೇಶ ಪ್ರವಾಸಕ್ಕೆ ತೆರಳಿದ್ದ ಕಾರಣ ಕೃತಜ್ಞತಾ ಸಮಾರಂಭ ಗುರುಕುಲದಲ್ಲಿ ನಡೆಯಲಿಲ್ಲ. ಪ್ರವಾಸದಿಂದ ಬಂದ ಕೂಡಲೇ ಮೇ ತಿಂಗಳ ಒಂದು ಭಾನುವಾರದಂದು ಶ್ರೀ ಕ್ಷೇತ್ರದಲ್ಲಿ ಕೃತಜ್ಞತಾ ಸಮಾರಂಭ ನಡೆಯಿತು.
-------------------------------------
ವಾರ್ಷಿಕ ರಜೆಯಲ್ಲೂ ಕೆಲಸ ಮಾಡಬೇಕು- 11
ಪರೀಕ್ಷೆ ಮುಗಿದ ತಕ್ಷಣ ಮನೆಗೆ ಹೋಗಿ ಕಾಲೇಜು ಆರಂಭ ಆಗುವವರೆಗೂ ರಜೆಯನ್ನು ಸಂಪೂರ್ಣವಾಗಿ ಎಂಜಾಯ್ ಮಾಡಬೇಕೆಂದು ಬಹುತೇಕ ಹಾಸ್ಟೇಲ್ ವಿದ್ಯಾರ್ಥಿಗಳು ಯೋಚಿಸಿರುತ್ತಾರೆ. ಆದರೆ ಗುರುಕುಲದ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ರಜೆಯನ್ನು ಮನೆಯಲ್ಲೇ ಕಳೆಯುವಂತಿಲ್ಲ. ಯಾವ ವಿದ್ಯಾರ್ಥಿಯಾದರೂ ವರ್ಷದಲ್ಲಿ ಒಮ್ಮೆ 15 ದಿನಗಳ ಕಾಲ ರಜೆಯಲ್ಲಿ ಬ್ಯಾಚ್ ವರ್ಕ್ ಮಾಡಿಯೇ ಹೋಗಬೇಕು. ಇದು ಸಿದ್ಧವನದ ವಿಶೇಷತೆ.
ಯಾರು ಕೃಷಿ, ಹೈನುಗಾರಿಕೆ ಮಾಡುತ್ತಾರೋ ಅವರು ಯಾವುದೇ ಕಾರಣಕ್ಕೂ ಮನೆಯನ್ನು ಖಾಲಿ ಮಾಡಿ ಎಲ್ಲಿಗೂ ಹೋಗುವುದಿಲ್ಲ. ದನಗಳನ್ನು ನೋಡಿಕೊಳ್ಳಲು, ತೋಟಕ್ಕೆ ನೀರು ಬಿಡಲು ಎಂದಾದರೂ ಕನಿಷ್ಟ ಒಬ್ಬರಾದರೂ ಮನೆಯಲ್ಲಿ ಇರುತ್ತಾರೆ. ಇದೇ ರೀತಿ ಇಲ್ಲೂ ತೋಟ ಮತ್ತು ಡೈರಿ ಇರುವುದದರಿಂದ ವರ್ಷದ ಎಲ್ಲ ದಿನಗಳಲ್ಲೂ ಕೆಲಸ ನಡೆಯುತ್ತದೆ. ಹೀಗಾಗಿ ರಜೆ ಸಮಯದಲ್ಲೂ ಈ ಕೆಲಸ ಮಾಡಲು ವಿದ್ಯಾರ್ಥಿಗಳು ಕಡ್ಡಾಯವಾಗಿ ಗುರುಕುಲದಲ್ಲಿ ಇರಬೇಕಾಗುತ್ತದೆ.
ಕಾಲೇಜು ಅವಧಿಯಲ್ಲಿ ಬೆಳಗ್ಗೆ 6.10ರಿಂದ 7.30ರವರೆಗೆ ಕೆಲಸ ಮಾಡಬೇಕಿದ್ದರೆ, ಬ್ಯಾಚ್ ವರ್ಕ್ ಸಮಯದಲ್ಲಿ ಬೆಳಗ್ಗೆ 6.10 ರಿಂದ 7.30ವರೆಗೆ, ನಂತರ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ, ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆಯವರೆಗೆ ಕೆಲಸ ಇರುತ್ತದೆ. ಸಾಧಾರಣವಾಗಿ ಒಂದು ಬ್ಯಾಚ್ನಲ್ಲಿ 10,15ಮಂದಿ ಇರುತ್ತಾರೆ. ಪಾಲಕರು ಕೆಲವೊಮ್ಮೆ," ನೋಡ್ರಪ್ಪ, ಇವತ್ತು ನಾನು ಇರಲ್ಲ. ಇಷ್ಟು ಕೆಲಸ ಮಾಡಿ ಮುಗಿಸಬೇಕು" ಎಂದಾಗ ಈ ಕೆಲಸ ಪಟಪಟನೆ ಮಾಡುವುದಿಂದ ಕೆಲವೊಮ್ಮೆ ಮೂರು ಗಂಟೆಗೆ ವರ್ಕ್ ಕಂಪ್ಲೀಟ್ ಆದ ಉದಾಹರಣೆಯೂ ಇದೆ.
ಕೆಲಸ ಮುಗಿದ ಬಳಿಕ ರುಡ್ ಸೆಟ್ ಬಳಿ ಇರುವ ಕ್ರಿಕೆಟ್ ಮೈದಾನ ಅಥವಾ ಗುರುಕುಲದ ಹಿಂಬದಿ ಇರುವ ವಾಲಿಬಾಲ್ ಮೈದಾನದಲ್ಲಿ ಆಡಿ, ಬಳಿಕ ಸ್ನಾನ ಮಾಡಿ, 7.30ಕ್ಕೆ ಭೋಜನ ಸೇವಿಸಿ ರಾತ್ರಿ 10.30ರವರೆಗೆ ಟಿವಿ ನೋಡಿದರೆ ಒಂದು ದಿನ ಮುಗಿದಂತೆ. ಕಾಲೇಜು ಸಮಯದಲ್ಲಿ ಶನಿವಾರ ಒಂದು ದಿನ ಮಾತ್ರ ಟೀವಿ ನೋಡಲು ಅವಕಾಶ. ಆದರೆ ಬ್ಯಾಚ್ ವರ್ಕ್ ಸಮಯದಲ್ಲಿ ಪ್ರತಿ ರಾತ್ರಿ ಟೀವಿ ನೋಡಬಹುದು.
ಆಡಿಕೆ ತೆಗೆಯುವುದು, ತೆಂಗಿನ ಸಿಪ್ಪೆ ಸುಲಿಯುವುದು, ತೋಟದ ಕಳೆ ತೆಗೆಯುವುದು, ಗಾರ್ಡನ್ ಕ್ಲೀನ್, ತೋಟಕ್ಕೆ ನೀರು ಹಾಕುವುದು, ಸ್ವಚ್ಛತಾ ಕಾರ್ಯಕ್ರಮ... ಹೀಗೆ ಒಂದಲ್ಲ ಒಂದು ಕೆಲಸ ಇರುತ್ತದೆ. ಆದರಲ್ಲೂ ಪಾಲಕರು ತೆಂಗಿನ ತೋಟಕ್ಕೆ ಕೆಲಸಕ್ಕೆ ಕಳುಹಿಸಿದರೆ ವಿದ್ಯಾರ್ಥಿಗಳಿಗೆ ಅದೇನೋ ಒಂದು ಖುಷಿ..
ಅಂತಿಮ ವರ್ಷದ ಡಿಗ್ರಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಬ್ಯಾಚ್ ವರ್ಕ್ ಇದ್ದರೆ ಉಳಿದವರಿಗೆ ಏಪ್ರಿಲ್, ಮೇ ಅವಧಿಯಲ್ಲಿ ಇರುತ್ತದೆ. ಆದರೆ ದೂರದ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳಿಗೆ ಒಂದು ರಿಯಾಯಿತಿ ಇರುತ್ತದೆ. ಅವರಿಗೆ ಪರೀಕ್ಷೆ ಮುಗಿದ ಕೂಡಲೇ ಕೆಲಸ ಮಾಡಬಹುದು, ಅಥವಾ ಕಾಲೇಜು ಆರಂಭವಾಗುವ 15 ದಿನ ಮೊದಲೇ ಬಂದು ಕೆಲಸ ಮಾಡಬಹುದು. ಉಜಿರೆ ಸಮೀಪದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ರಜೆ ಮಧ್ಯೆ ಬಂದು ಕೆಲಸ ಮಾಡಬೇಕಾಗುತ್ತದೆ. ಈ ಹಿಂದೆಯೇ ನಾನು ಹೇಳಿದಂತೆ ಗುರುಕುಲದ ಎನ್ನುವುದು ನಮ್ಮ ಎರಡನೇ ಮನೆ ಇದ್ದಂತೆ. ಮನೆಯಲ್ಲಿ ಹೆಚ್ಚು ಜನ ಇದ್ದರೇ ಮಾತ್ರ ಸಂಭ್ರಮ ಜೋರು. ಹೀಗಾಗಿ ಡಿಗ್ರಿ, ಪಿಯು ವಿದ್ಯಾರ್ಥಿಗಳು ಒಟ್ಟಾಗಿ ಕೆಲಸವನ್ನು ಎಂಜಾಯ್ ಮಾಡುತ್ತಾ, ಹರಾಟೆ ಹೊಡೆಯುತ್ತಾ, ಆಟ ಆಡುತ್ತಾ ಕಳೆದಾಗ ಬ್ಯಾಚ್ ವರ್ಕ್ ಹೇಗೆ ಪೂರ್ಣಗೊಂಡಿತು ಎನ್ನುವುದೇ ತಿಳಿಯುವುದಿಲ್ಲ.
ಹಾಸ್ಟೇಲ್ ಅಂದರೆ ಜಾತಿ ರಾಜಕೀಯ, ವಿದ್ಯಾರ್ಥಿ ವಿದ್ಯಾರ್ಥಿಗಳ ನಡುವೆ ಘರ್ಷಣೆ.... ಇತರ ಕಾರಣದಿಂದ ಸುದ್ದಿಯಾಗುತ್ತಿರುತ್ತದೆ. ಆದರೆ ಗುರುಕುಲದಲ್ಲಿ ಇವುಗಳಿಗೆ ಸಂಪೂರ್ಣ ನಿಷೇಧ. ಜಾತಿ ಬೇಧ ಮರೆತು, ಇಲ್ಲಿ ಎಲ್ಲ ಧರ್ಮದ ವಿದ್ಯಾರ್ಥಿಗಳು ಒಟ್ಟಾಗಿ ಓದುತ್ತಾರೆ, ಒಟ್ಟಾಗಿ ಉಣ್ಣುತ್ತಾರೆ, ಒಟ್ಟಾಗಿ ದುಡಿಯುತ್ತಾರೆ, ಒಟ್ಟಾಗಿ ನಲಿಯುತ್ತಾರೆ.
ಇಲ್ಲಿಗೆ ನಮ್ಮ ಸರಣಿ ಲೇಖನಕ್ಕೆ ಪೂರ್ಣ ವಿರಾಮ. ಲೇಖನಗಳನ್ನು ಓದಿ likeಸಿದ, commentಸಿದ,shareಸಿದ, ಕಮೇಂಟ್ ಲೈಕ್ ಶೇರ್ ಮಾಡದೇ ಓದಿದ ಎಲ್ಲರಿಗೂ ಧನ್ಯವಾದಗಳು.....
ಕಾಮೆಂಟ್‌ಗಳು