ತಮಿಳುನಾಡು ಬೈಕ್ ಟ್ರಿಪ್ ಭಾಗ -2 ಹೊಗೇನಕಲ್ ಪ್ರವಾಸ ಕಥನ


ಹೊಗೇನಕಲ್ ತಲುಪಿದ್ದೆ ತಡ ಸ್ಟಾಪ್, ಸ್ಟಾಪ್, ಸ್ಟಾಪ್... ಅಂತ ಹೇಳಿ ಒಂದು 12 ಮಂದಿ ಸದಸ್ಯರು ನಮ್ಮನ್ನು ಅಡ್ಡ ಹಾಕಿದ್ರು. ಪೊಲೀಸರು ಆದರೆ ಸಮವಸ್ತ್ರದಲ್ಲಿ ಇರುತ್ತಾರೆ. ಆದರೆ ಇವರು ಯಾರು ಖಾಕಿ ಯೂನಿ ಫಾರ್ಮ್ ನಲ್ಲಿ ಇರಲಿಲ್ಲ. ಬದಲಾಗಿ ಇವರು ನೀಲಿ ಸಮವಸ್ತ್ರ ಧರಿಸಿದ್ದರು. ಮೊದಲೇ ನಮಗೆ ತಮಿಳು‌ ಬರುವುದಿಲ್ಲ.‌ ಅಷ್ಟೇ ಅಲ್ಲದೇ ತಮಿಳುನಾಡು ಬೈಕ್ ಗಳನ್ನು ಬಿಟ್ಟು ನಮ್ಮ‌ ಬೈಕ್ ಗಳನ್ನು ಮಾತ್ರ ನಿಲ್ಲಿಸಿದ್ದು ನೋಡುವಾಗ ಭಯ ಆಯ್ತು. ಕರ್ನಾಟಕ, ತಮಿಳುನಾಡಿನ ಮಧ್ಯೆ ಕಿಚ್ಚು ಹತ್ತಿ ಏನಾದ್ರೂ ಹೆಚ್ಚು ಕಡಿಮೆ ಆಗಿದ್ಯಾ ಅಂತ ಅಂದುಕೊಂಡೆವು.
ಸಣ್ಣ ಪಟ್ಟಣ ಆದರೂ ಅಲ್ಲಿದ್ದ ಜನ ನಮ್ಮನ್ನೇ ನೋಡುತ್ತಿದ್ದರು. ಯಾಕೆ ಇವರು ಹೀಗೆ ವರ್ತಿಸುತ್ತಿದ್ದಾರೆ ಅನ್ನುವುದು ಗೊತ್ತೇ ಆಗಲಿಲ್ಲ. ಸ್ಥಳದಲ್ಲೇ ಒಂದೊಂದು ಬೈಕಿಗೆ ತಲಾ 10 ರೂ.ನಂತೆ ಪ್ರವೇಶ ಶುಲ್ಕ ಪಾವತಿಸಿ ಆಯ್ತು. ನಂತರ ಅಲ್ಲಿದ್ದವರು ಏನೋ ಮಾತನಾಡಿ ಕೊನೆಗೆ ಇಬ್ಬರು ನಮ್ಮ ಜೊತೆಗೆ ಓಡಿಕೊಂಡು ಬರುತ್ತಿದ್ದರು. ಯಾಕೆ ಇವರು ನಮ್ಮ ಜೊತೆ ಓಡಿಕೊಂಡು ಬರುತ್ತಿದ್ದಾರೆ ಎನ್ನುವುದು ನಮಗೆ ಅರ್ಥವೇ ಆಗಲಿಲ್ಲ.
ಒಂದು 100 ಮೀಟರ್ ದೂರ ಹೋದ ನಂತರ ಅವರಿಬ್ಬರು ನಮ್ಮನ್ನು ತಡೆದು ನಿಲ್ಲಿಸಿ ಇಲ್ಲಿ ಬೈಕ್ ಪಾರ್ಕ್ ಮಾಡಿ ಎಂದು ಹೇಳಿದರು‌. ಬೈಕ್ ಪಾರ್ಕ್ ಮಾಡಿದ ಬಳಿಕ ಇಬ್ಬರಲ್ಲಿ ಒಬ್ಬರು ನಮ್ಮನ್ನು ನೇರವಾಗಿ ಲಗೇಜ್ ಕೊಠಡಿಗೆ ಕರೆದುಕೊಂಡು ಹೋದರು. ಈ ವೇಳೆ‌‌ ನೀವು ಯಾರು ಎಂದು ಕೇಳಿದಾಗ, ನಾವು ನಿಮ್ಮನ್ನು ತೆಪ್ಪದಲ್ಲಿ ಕರೆದುಕೊಂಡು ಹೋಗುವ ಬೋಟ್ ಮ್ಯಾನ್ ಗಳು ಎಂದು ಹೇಳಿದರು.
ಎಲ್ಲ‌ ಲಗೇಜ್ ಗಳನ್ನು ಇಟ್ಟು ಟಿಕೆಟ್ ಕೌಂಟರ್ ಗೆ ಹೋದವು. ಒಂದು ಟಿಕೆಟ್ ಗೆ 750 ರೂ. ಒಂದು ತೆಪ್ಪದಲ್ಲಿ ಗರಿಷ್ಟ 4 ಮಂದಿಗೆ ಮಾತ್ರ ಪ್ರಯಾಣಿಸಲು ಅವಕಾಶ. ಹೀಗಾಗಿ 2 ಟಿಕೆಟ್ ತೆಗೆದುಕೊಂಡು ಕ್ಯೂ ನಲ್ಲಿ‌ ನಿಂತುಕೊಂಡೆವು. ನಾವು ನಿಂತಾಗ ದೊಡ್ಡ ಕ್ಯೂ ಇರಲಿಲ್ಲ. ಆದರೆ ನಿಂತು ನಿಮಿಷಗಳು‌ ಉರುಳುತ್ತಿದ್ದರೂ ಕ್ಯೂ ಮಾತ್ರ ಮುಂದೆ ಹೋಗುತ್ತಲೇ ಇರಲಿಲ್ಲ.
ಯಾಕೆ ಸಾಲು ಮುಂದಕ್ಕೆ ಹೋಗುತ್ತಿಲ್ಲ ಎಂದು ಗಮನಿಸಿದಾಗ ಫ್ಯಾಮಿಲಿ ಸದಸ್ಯರು ಇಲ್ಲಿಗೆ ಬಂದರೂ ಎಲ್ಲ ಸದಸ್ಯ ರು ಈ ಸರತಿ ಸಾಲಿನಲ್ಲಿ ನಿಲ್ಲುವುದಿಲ್ಲ ಎನ್ನುವುದು ಗೊತ್ತಾಯಿತು. ಎರಡು, ಮೂರು ಜನ ಮಾತ್ರ ನಿಲ್ಲುತ್ತಾರೆ‌. ಆದರೆ ಅವರ ಬಳಿ ನಾಲ್ಕೈದು ಟಿಕೆಟ್ ಇರುತ್ತದೆ. ಅವರು ಸರದಿ ಬಂದಾಗ ಎಲ್ಲರೂ ಹಾಜರಾಗುತ್ತಾರೆ. ಲೈಫ್ ಜಾಕೆಟ್ ಕೊಡುವ ಸ್ಥಳದಲ್ಲಿ ತೆಪ್ಪದಲ್ಲಿ ಹೋಗುವ ಮಂದಿಯ ತೂಕ ಮಾಡಲಾಗುತ್ತದೆ. ಒಂದು ತೆಪ್ಪದಲ್ಲಿ ನಾಲ್ಕು ಜನ ಹೋಗಬಹುದಾದರೂ ನಾಲ್ಕು ಜನರ ತೂಕ ಒಟ್ಟು ತೂಕ 350 ಕೆಜಿಗಿಂತ ಜಾಸ್ತಿ ಇರಬಾರದು. ತೂಕದ ಪ್ರಕ್ರಿಯೆ ಮುಗಿದ ಬಳಿಕ ಎಲ್ಲ‌‌ ಸದಸ್ಯರ ಹೆಸರನ್ನು ಬರೆಯಲಾಗುತ್ತದೆ. ನಂತರ ಸದಸ್ಯರ ಪೈಕಿ ಒಬ್ಬರ ಫೋನ್ ನಂಬರ್, ತೆಪ್ಪದಲ್ಲಿ ಕರೆದುಕೊಂಡು ಹೋಗುವ ಬೋಟ್ ಮ್ಯಾನ್ ಹೆಸರು ಬರೆದುಕೊಳ್ಳಲಾಗುತ್ತದೆ‌. ಬಳಿಕ ಒರಿಜಿನಲ್ ಪ್ರತಿಯನ್ನು ಇಟ್ಟುಕೊಂಡು, ಕಾರ್ಬನ್ ಪ್ರತಿಯನ್ನು ಬೋಟ್ ಮ್ಯಾನ್ ಗೆ ನೀಡಲಾಗುತ್ತದೆ.
ಸೋ, ನೀವು ಕುಟುಂಬದ ಸದಸ್ಯರ ಜೊತೆ ಹೊಗೇನಕಲ್ ಗೆ ಬಂದರೆ ಮೊದಲು ಬಂದ ವ್ಯಕ್ತಿಗಳು ಟಿಕೆಟ್ ತೆಗದುಕೊಳ್ಳುವುದು‌ ಉತ್ತಮ. ಶನಿವಾರ, ಭಾನುವಾರ, ರಜಾ ದಿನದಲ್ಲಿ ಮಾತ್ರ ಇಲ್ಲಿ ಪ್ರವಾಸಿಗರ ಸಂಖ್ಯೆ ಜಾಸ್ತಿ.‌ಉಳಿದ ದಿನ ಅಷ್ಟು ರಶ್ ಇರುವುದಿಲ್ಲವಂತೆ. ಅಂತು ಇಂತು ಒಂದು ಕಾಲು ಗಂಟೆ ನಿಂತು ಎಲ್ಲ ಪ್ರಕ್ರಿಯೆ ಮುಗಿದು, ಲೈಫ್ ಜಾಕೆಟ್ ಧರಿಸಿ ಭಾರತದ 'ನಯಾಗರ ಜಲಪಾತ' ಎಂದೇ ಕರೆಯಲ್ಪಡುವ ಹೊಗೇನಕಲ್ ಜಲಪಾತ ವೀಕ್ಷಿಸಲು ಎರಡು ತೆಪ್ಪ ಏರಿದೆವು.
ದೊಡ್ಡ ದೊಡ್ಡ ಬಂಡೆಗಳ ಮೇಲೆ ಅಪ್ಪಳಿಸಿದ ಕಾವೇರಿ ನದಿಯ ನೀರು ಹೊಗೆಯಂತೆ ಹೊರಹೊಮ್ಮುತ್ತದೆ. ಈ ಕಾರಣಕ್ಕೆ ಈ ಜಲಪಾತಕ್ಕೆ 'ಹೊಗೇನಕಲ್' ಹೆಸರು ಬಂದಿದೆಯಂತೆ. ತೆಪ್ಪದಲ್ಲಿ 50 ಮೀಟರ್ ದೂರವನ್ನು ಕ್ರಮಿಸಿ ನದಿಯ ಮತ್ತೊಂದು ದಂಡೆಯನ್ನು ತಲುಪಿತು. ಬೋಟ್ ಮ್ಯಾನ್ ಗಳು, ಇಲ್ಲಿ‌ ಇಳಿದು ನಡೆದುಕೊಂಡು ಮುಂದಕ್ಕೆ ಹೋಗಿ ಇಳಿಯಿರಿ ಅಲ್ಲಿ ನಾವು ನಿಮಗಾಗಿ ಕಾಯುತ್ತಿರುತ್ತೇವೆ ಎಂದು ಹೇಳಿದರು. ಅದರಂತೆ ನಾವು ಅಲ್ಲೇ ಫೋಟೋ ಗಳನ್ನು ಕ್ಲಿಕ್ಕಿಸಿ ಇಳಿದುಕೊಂಡು ಅವರು ಹೇಳಿದ ಸ್ಥಳಕ್ಕೆ ಬಂದೆವು.
ನಿಜವಾಗಿ ತೆಪ್ಪದ ಪ್ರಯಾಣ ಮಜಾ‌ ಸಿಗುವುದು ಇಲ್ಲಿಂದಲೇ. ಮೂರು ಮೂರು ಮಂದಿ ಕುಳಿತ ಬಳಿಕ ತೆಪ್ಪ ಹೊರಟಿತು.ಆರಂಭದಲ್ಲೇ ನಮ್ಮನ್ನು‌ ಜಲಪಾತದ ಬಳಿ ಕರೆದುಕೊಂಡು ಹೋಗಿ ನದಿಯ ಮಧ್ಯೆ ತೆಪ್ಪವನ್ನು ತಿರುಗಿಸಿದರು. ಮುಂದಕ್ಕೆ ಹೋದಂತೆ ತೆಪ್ಪದಲ್ಲೇ ತಿಂಡಿ‌‌‌ ತಂಪು ಪಾನೀಯ ಮಾರಾಟ ಮಾಡುವವರು ಸಿಕ್ಕಿದರು‌. ಆದರೆ ಇಲ್ಲಿ ದರ ಸ್ವಲ್ಪ‌ ಜಾಸ್ತಿ ಇರುತ್ತದೆ.‌ ಸ್ವಲ್ಪ‌‌ ದೂರ ಹೋದಂತೆ ನಾವೇ‌‌ ಹುಟ್ಟು ಹಾಕಿ ಸಂತೋಷ ಪಟ್ಟೆವು.
ಒಂದು ಒಂದು ಕಿ.ಮೀ ದೂರ ತೆಪ್ಪ ಹೋಗಿ ತಿರುಗಿದ ಮೇಲೆ ಬೋಟ್ ಮ್ಯಾನ್ ಜೊತೆ ನಮ್ಮ ಸಂಭಾಷಣೆ ಆರಂಭವಾಯಿತು. ಈ ವೇಳೆ ಯಾಕೆ ಕೆಲ ಬೋಟ್ ಮ್ಯಾನ್ ಗಳು ಹಳದಿ ಬಣ್ಣ ಯೂನಿಫಾರ್ಮ್ ಧರಿಸಿದ್ದಾರೆ ಎಂದಾಗ, ಅವರೆಲ್ಲ ಕರ್ನಾಟಕ ಗಡಿಯಿಂದ ಬಂದ ಪ್ರವಾಸಿಗರನ್ನು ಕರೆದುಕೊಂಡು ಬರುತ್ತಾರೆ. ನಾವು ತಮಿಳುನಾಡಿನಿಂದ ಬಂದವರನ್ನು ತೆಪ್ಪದಲ್ಲಿ ಕೂರಿಸುತ್ತೇವೆ‌. ನಮ್ಮನ್ನು ಸುಲಭವಾಗಿ ಗುರುತಿಸಲು ಶರ್ಟ್ ಬಣ್ಣ ಬದಲಾವಣೆ ಮಾಡಲಾಗಿದೆ ಎಂದು ಹೇಳಿದರು.
ನೀಲಿಬಣ್ಣದ ಅಂಗಿ ತೊಟ್ಟವರು ತುಂಬಾ ಜನ ಇದ್ದಾರೆ ಅಲ್ಲವೇ ಎಂದು ಕೇಳಿದಾಗ, ವಯಾ ತಮಿಳುನಾಡು ಮೂಲಕ ಬರುವ ಪ್ರವಾಸಿಗರ ಸಂಖ್ಯೆ ಜಾಸ್ತಿ. ಕರ್ನಾಟಕ‌ ಗಡಿಯಿಂದ ಬರುವವರ ಸಂಖ್ಯೆ ಕಡಿಮೆ. ಪ್ರಸ್ತುತ ನಾವು 416 ಮಂದಿ ಇದ್ದೇವೆ ಎಂದಾಗ, ದಿನಕ್ಕೆ ಎಷ್ಟು ಟ್ರಿಪ್ ಸಿಗುತ್ತೆ? ಎಷ್ಟು ಹಣ ಸಿಗುತ್ತೆ? ಬೋಟ್ ಮ್ಯಾನ್ ಗಳ ಸಂಖ್ಯೆ ಜಾಸ್ತಿ ಆಯ್ತು ಅಲ್ಲವೇ ಎಂದು ಮರು ಪ್ರಶ್ನೆ ಹಾಕಿದೆವು.
ಭಾನುವಾರ ಮತ್ತು ಶನಿವಾರ ಎರಡು ಟ್ರಿಪ್ ಸಿಗುತ್ತೆ. ನಮಗೆ ಲೆಕ್ಕದ ಪ್ರಕಾರ 600 ರೂ. ಕೊಡಬೇಕು. ಆದರೆ ಸಂಜೆ ಕೈಗೆ ಸಿಗುವುದು 400 ರೂ. ಮಾತ್ರ. ನಮ್ಮ ಸರ್ವಿಸ್ ಇಷ್ಟ ಆದರೆ ಜನ ದುಡ್ಡು ಕೊಡುತ್ತಾರೆ ಎಂದು ಹೇಳಿದಾಗ, ಆರಂಭದಲ್ಲಿ ಬೈಕನ್ನು ಅಡ್ಡ ಹಾಕಿ ಓಡಿಕೊಂಡು ಬಂದು ಪಾರ್ಕಿಂಗ್ ಜಾಗ ತೋರಿಸಿ, ಟಿಕೆಟ್ ಕೌಂಟರ್ ತನಕ ನಮ್ಮನ್ನು ಕರೆದುಕೊಂಡು ಬಂದಿದ್ದು ಯಾಕೆ ಎನ್ನುವುದರ ಗುಟ್ಟು ಗೊತ್ತಾಯಿತು. ಮಾತನ್ನು ಮುಂದುವರಿಸುತ್ತಿದ್ದ ಅವರು, ನನಗೆ ಲೈಸನ್ಸ್ ಸಿಕ್ಕಿ 10 ವರ್ಷ ಆಯಿತು. ಈಗ ಯಾರಿಗೂ ಲೈಸನ್ಸ್ ಕೊಡುವುದಿಲ್ಲ ಎಂದು ಹೇಳಿದರು.
ಈ ಉತ್ತರ ಬಂದ ಕೂಡಲೇ ಲೈಸೆನ್ಸ್ ಹೇಗೆ ನೀಡುತ್ತಾರೆ ಎನ್ನುವ ಮರು ಪ್ರಶ್ನೆಗೆ, ನನ್ನ ತಂದೆಯವರು ಈ ವೃತ್ತಿಯನ್ನು ಹಿಂದೆ ಮಾಡಿದ್ದರು. ಅಧಿಕಾರಿಗಳು ಪರೀಕ್ಷೆ ಮಾಡುತ್ತಾರೆ. ಆಳವಾಗಿರುವ ಪ್ರದೇಶದಲ್ಲಿ ಒಂದು ದಡದಿಂದ ಮತ್ತೊಂದು ದಡಕ್ಕೆ ಈಜಬೇಕಾಗುತ್ತದೆ ಮತ್ತು ತೆಪ್ಪ ಓಡಿಸಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ಪಾಸ್ ಆದರೆ ಲೈಸೆನ್ಸ್ ಸಿಗುತ್ತದೆ ಎಂದು ತಿಳಿಸಿದರು.
ಭಾರೀ ಆಳ ಇಲ್ಲಿ ಇದೆಯೇ ಎಂದಾಗ ಈಗ ಇಲ್ಲಿ ಅಂದಾಜು 50, 60 ಅಡಿ‌‌ ನೀರಿದೆ. ಮಳೆಗಾಲದಲ್ಲಿ ಈ 50 ಅಡಿ ಎತ್ತರದ ಕಲ್ಲುಗಳು ಯಾವುದು ಕಾಣುವುದಿಲ್ಲ. ಸಂಪೂರ್ಣ ಮುಳುಗಿರುತ್ತದೆ. ಮೆಟ್ಟೂರು ಡ್ಯಾಂ ನಲ್ಲಿ‌ ನೀರು ಕಡಿಮೆಯಾದರೆ ಇಲ್ಲಿ ಜಲಪಾತವನ್ನು ನೋಡಬಹುದು. ಮಳೆಗಾಲದಲ್ಲಿ‌ ಇಲ್ಲಿ ಬೋಟಿಂಗ್ ಇಲ್ಲ. ಜಲಪಾತದ ಮೇಲ್ಭಾಗದಲ್ಲಿ ಮಾತ್ರ ಇರುತ್ತದೆ ಎಂದು ಹೆಚ್ಚಿನ ಮಾಹಿತಿ ನೀಡಿದರು‌.
ಉತ್ತರ ಹೇಳುತ್ತಿದ್ದಂತೆ ಕುತೂಹಲಕ್ಕಾಗಿ, ಒಂದು ವೇಳೆ ಯಾರಾದ್ರೂ ತೆಪ್ಪದಿಂದ ನೀರಿಗೆ ಧುಮುಕಿದ್ರೆ ಏನ್ ಕಥೆ ಎಂದಾಗ ಅದಕ್ಕಾಗಿ ಲೈಫ್ ಜಾಕೆಟ್ ನೀಡಲಾಗಿದೆ. ಅಷ್ಟೇ ಅಲ್ಲದೇ ಬೋಟ್ ಹೋಗುವ ದಾರಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಯಾರೇ ಏನೇ ಮಾಡಿದರೂ ವಿಡಿಯೋ ಸಿಗುತ್ತೆ ಎಂದು ಉತ್ತರಿಸಿದರು. ನಂತರ, ಹೌದು ನೀವು ತಮಿಳುನಾಡಿನವರು. ಕನ್ನಡ ಹೇಗೆ ಬಂತು ಎಂದು ಪ್ರಶ್ನಿಸಿದ್ದಕ್ಕೆ, ಜನರ ಜೊತೆ ಮಾತನಾಡುತ್ತಾ ಕನ್ನಡ, ತೆಲುಗು, ಮಲೆಯಾಳಂ ಭಾಷೆ ಕಲಿತಿದ್ದೇವೆ ಎಂದು ಹೇಳಿದರು.
ತೆಪ್ಪ ದಡಕ್ಕೆ ಬಂತು. ಜಲಪಾತದ ಬಳಿ ನಮ್ಮನ್ನು ತಿರುಗಿಸಿ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದಕ್ಕೆ 100ರೂ. ನೀಡಿದೆವು. ಬೋಟ್ ಮ್ಯಾನ್ ಗಳು, ಪ್ರವಾಸಿಗರಿಂದ ಹಣ ನೀಡಿ ಎಂದು ಬೇಡಿಕೆ ಇಡಬಾರದು. ಒಂದು ವೇಳೆ‌ ಹಣ ನೀಡುವಂತೆ ಬೇಡಿಕೆ ಇಟ್ಟರೆ ದೂರು ನೀಡಿ ಎಂದು ಅಲ್ಲಿ ಬೋರ್ಡ್ ಹಾಕಲಾಗಿದೆ‌. ಆದರೆ ಪ್ರವಾಸಿಗರು ಬೋಟ್ ಮ್ಯಾನ್ ಗಳಿಗೆ ಹಣ ನೀಡಲೇ ಬಾರದು ಎಂದು ಬೋರ್ಡ್ ಹಾಕಿಲ್ಲ. ಹೀಗಾಗಿ ಅವರ ಸೇವೆ ಇಷ್ಟವಾದರೆ ಹಣ ನೀಡಬಹುದು‌.
ಬೋಟಿಂಗ್ ಬಿಟ್ಟರೆ ಹೊಗೇನಕಲ್ ಮಸಾಜ್ ಗೆ ಫೇಮಸ್. ಚೆನ್ನಾಗಿ ಎಣ್ಣೆ ಹಾಕಿ ಮಸಾಜ್ ಮಾಡ್ತಾರೆ. ರೇಟ್ ಎಷ್ಟು ಎಂದು ಕೇಳಿದ್ದಕ್ಕೆ 300, 500, 850 ರೂ. ಎಂದು ಹೇಳಿ ಬನ್ನಿ ಸಾರ್ ಎಂದು ಕರೆದ್ರು. ಮಸಾಜ್ ಮಾಡಿ ಇರುವ ಬಾಡಿ ಲಗಾಡಿ ಹೋಗದೇ ಇದ್ರೆ ಸಾಕು ಎಂದು ಮನಸ್ಸಿನಲ್ಲೇ ಭಾವಿಸಿ ಅಲ್ಲಿಂದ ನಾವು ಮುಂದಕ್ಕೆ ಹೋದೆವು. ಈ ವಾಕ್ಯವನ್ನು ತಮಾಷೆಗೆ ಹೇಳಿದ್ರೂ ಮಸಾಜ್ ಚೆನ್ನಾಗಿ ಮಾಡುತ್ತಾರಂತೆ‌. ಇದು ಇಲ್ಲಿ ಮಸಾಜ್ ಮಾಡಿಕೊಂಡವರ ಅಭಿಪ್ರಾಯ. ಮುಂದೆ ಹೋದರೆ ನದಿಯಲ್ಲಿ ಸ್ನಾನ ಮಾಡಬಹುದು. ತೂಗು ಸೇತುವೆಯ ಮೂಲಕ ನಡೆದರೆ ಜಲಪಾತ ನೋಡಬಹುದು.
ಹೊಗೇನಕಲ್ ಸುತ್ತಾಟ ಸಂಜೆ ನಾಲ್ಕು ಗಂಟೆ ಮುಕ್ತಾಯವಾಯಿತು. ಯೆರ್ಕಾಡಿನಿಂದ ಹೊಗೇನಕಲ್ ಇರುವ ದೂರ 110 ಕಿ.ಮೀ‌ . ಬೆಳಗ್ಗೆ 8 ಗಂಟೆಗೆ ತಿಂಡಿ ತಿಂದು ಹೊರಟರೂ ಹೊಗೇನಕಲ್ ತಲುಪಿದ್ದು ಮಧ್ಯಾಹ್ನ . ಯೆರ್ಕಾಡಿನಿಂದ ಸೇಲಂಗೆ ಹೋಗುವಾಗ ಆರಂಭದಲ್ಲೇ 20 ಹೇರ್ ಪಿನ್ ತಿರುವು ಸಿಗುತ್ತದೆ. ಎಂಜಾಯ್ ಮಾಡಬಹುದು. ಹೊಗೇನಕಲ್ ಬಳಿ ನಾನ್ ವೆಜ್ ಹೋಟೆಲ್ ಗಳಿಗೆ ಕೊರತೆ ಇಲ್ಲ. ವೆಜ್ ಸ್ವಲ್ಪ ಸಮಸ್ಯೆಯೇ. ಹೀಗಾಗಿ ಸಸ್ಯಾಹಾರಿಗಳು ಬರುವುದಿದ್ದರೆ ಮೊದಲೇ ತಿಂಡಿ/ ಮಧ್ಯಾಹ್ನದ ಊಟ ಮಾಡಿಕೊಂಡು ಬರುವುದು ಉತ್ತಮ.
ಹೊಗೇನಕಲ್ ಜಲಪಾತಕ್ಕೆ ಹೋಗಲು ಬೆಂಗಳೂರಿನಿಂದ ಎರಡು ಮಾರ್ಗಗಳಿವೆ. ಒಂದು ಬೆಂಗಳೂರಿನಿಂದ ಧರ್ಮಪುರಿ-ಪೆನ್ನಾಗರಂ ಮಾರ್ಗ 120 ಕಿ.ಮೀ. ಇನ್ನೊಂದು ಕರ್ನಾಟಕದಿಂದ ಬರುವುದಿದ್ದರೆ ಕೊಳ್ಳೇಗಾಲ-ಮಹದೇಶ್ವರಬೆಟ್ಟ-ಗೋಪಿನಾಥಂ ಮಾರ್ಗ. ಮಹದೇಶ್ವರಬೆಟ್ಟದಿಂದ ಹೊಗೇನಕಲ್ ಗೆ 47 ಕಿ.ಮೀ ದೂರ‌ವಿದೆ. ಬೆಂಗಳೂರಿನಿಂದ‌ ಬರುವ ಹೆಚ್ಚಿನ ಜನ ಆನೇಕಲ್ ಅಥವಾ ಹೊಸೂರು ಮಾರ್ಗವಾಗಿ ಇಲ್ಲಿಗೆ ಆಗಮಿಸುತ್ತಾರೆ.
ಹೊಗೇನಕಲ್ ನಂತರ ಬೈಕ್ ಏರಿ ಬೆಂಗಳೂರಿನತ್ತ ನಮ್ಮ ಪ್ರಯಾಣ ಹೊರಟಿತು. ಒಂದು 10 ಕಿ.ಮೀ ದೂರ ಕ್ರಮಿಸಿದಾಗ ಬಿಳಿಗುಂಡ್ಲು ಸಿಕ್ಕಿತು.‌ ಇದು ಒಂದು ಪ್ರವಾಸಿ ತಾಣವೇ. ನಮ್ಮ ಪ್ಲಾನ್ ನಲ್ಲಿ ಈ ಸ್ಥಳ ಇರಲಿಲ್ಲ ಮತ್ತು ಸಂಜೆ ಆದ ಹಿನ್ನೆಲೆಯಲ್ಲಿ ಬೇಗನೇ ಬೆಂಗಳೂರು ಸೇರುವ ಉದ್ದೇಶದಿಂದ ಈ ಸ್ಥಳಕ್ಕೆ ಭೇಟಿ ನೀಡಲಿಲ್ಲ.
ಕರ್ನಾಟಕ ತಮಿಳುನಾಡು ಮಧ್ಯೆ ನೀರಿನ ಗಲಾಟೆಯ ಸಂದರ್ಭದಲ್ಲಿ ಈ ಬಿಳಿಂಗುಡ್ಲು ಹೆಸರು ಹೆಚ್ಚಾಗಿ ಕೇಳಿಬರುತ್ತದೆ. ಕರ್ನಾಟಕದಿಂದ ಕಾವೇರಿ ನೀರು ತಮಿಳುನಾಡಿಗೆ ಎಷ್ಟು ಹರಿದಿದೆ ಎಂದು ಲೆಕ್ಕ ಹಾಕುವುದು ಇಲ್ಲಿಯೇ. ಇಲ್ಲಿಗೆ ಹೋಗದೇ ಇದ್ದರೂ ಮಾಧ್ಯಮಗಳಲ್ಲಿ ಪ್ರಕಟವಾಗಿರುವಂತೆ, ತಮಿಳುನಾಡಿನ ಭಾಗದಲ್ಲಿರುವ ಬಿಳಿಗುಂಡ್ಲುವಿನಲ್ಲಿ ಎಷ್ಟು ಪ್ರಮಾಣದ ನೀರು ಹರಿದಿದೆ ಎಂದು ಪತ್ತೆ ಮಾಡಲು ಕೇಂದ್ರ ಜಲ ಆಯೋಗದ ಅಧಿಕಾರಿಗಳು ವರ್ಷವಿಡಿ ನೀರಿನ ಲೆಕ್ಕಾಚಾರ ಹಾಕುತ್ತಾರೆ. ಪ್ರತಿದಿನ ಬೆಳಗ್ಗೆ 8ರಿಂದ 10ರವರೆಗೆ ಎರಡು ಗಂಟೆಗಳ ಕಾಲ 160 ಮೀಟರ್ ಪ್ರದೇಶದ 15 ನಿರ್ದಿಷ್ಟ ಸ್ಥಳಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ. 7 ಮಂದಿ ತೆಪ್ಪದ ಮೂಲಕ ಮೂಲಕ ಒಂದು ದಂಡೆಯಿಂದ ಮತ್ತೂಂದು ದಂಡೆಗೆ ಸಾಗಿ ತಮ್ಮ ಜೊತೆ ಇರುವ ಉಪಕರಣವನ್ನು ನೀರಿಗೆ ಬಿಡುತ್ತಾರೆ. ಈ ಮೂಲಕ ಪ್ರತಿ ಸೆಕೆಂಡ್‍ಗೆ ಎಷ್ಟು ನೀರು ಕರ್ನಾಟಕದಿಂದ ತಮಿಳುನಾಡಿಗೆ ಹೋಗುತ್ತಿದೆ ಎಂಬುದನ್ನು ಪತ್ತೆ ಮಾಡುತ್ತಾರೆ. ಈ ಸಿಬ್ಬಂದಿಯನ್ನು ಕರ್ನಾಟಕ, ತಮಿಳುನಾಡಿನ ಅಧಿಕಾರಿಗಳು ನೇರವಾಗಿ ಸಂಪರ್ಕಿಸುವಂತಿಲ್ಲವಂತೆ. ರಾಜ್ಯ ಸರ್ಕಾರಗಳು ಅಥವಾ ನ್ಯಾಯಾಲಯಗಳು ಕೇಳಿದರೆ ಮಾತ್ರ ಮಾಹಿತಿಯನ್ನು ನೀಡಲಾಗುತ್ತದೆ.
ಹೊಗೇನಕಲ್ ನಿಂದ ಬೆಂಗಳೂರಿಗೆ ಬರುವ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದು ಮುಕ್ಕಾಲು ಭಾಗ ಚೆನ್ನಾಗಿದೆ. 75% ರಸ್ತೆ ಅರಣ್ಯದಲ್ಲೇ ಹಾದು ಹೋಗುತ್ತದೆ. ದಾರಿ ಮಧ್ಯೆ ಆನೆಗಳು ಸಂಚರಿಸುವ ಸ್ಥಳ ಎಂದು ದೊಡ್ಡದಾಗಿ ಬೋರ್ಡ್ ಹಾಕಲಾಗಿದೆ. ಸಂಜೆ 7 ಗಂಟೆಯ ವೇಳೆಗೆ ಹೊಸೂರಿನಲ್ಲಿ ಕೊನೆಯದಾಗಿ ನಾವೆಲ್ಲ ಸೇರಿ ಅಲ್ಲಿಂದ ಹೈವೇ ಮೂಲಕ ಬೆಂಗಳೂರು ತಲುಪಿದೆವು.
ಎರಡು ದಿನ ಯಾವುದೇ ಸಮಸ್ಯೆ ಆಗದೇ ಪ್ರವಾಸ ಕಂಪ್ಲೀಟ್ ಆಗಲು ಕಾರಣ ಅಶ್ವಥ್. ಈ ಹಿಂದೆ ಎರಡು ಬಾರಿ ಈ ಪ್ರವಾಸ ಹೋಗಿದ್ದರಿಂದ ದಾರಿ ಸಮಸ್ಯೆ ಆಗಲಿಲ್ಲ. ಗೊಂದಲ ಮೂಡಿದ್ರೂ ಗೂಗಲ್ ಮ್ಯಾಪ್ ನೋಡಿ ದಾರಿ ಸರಿ ಇದೆಯೇ ಎಂದು ಚೆಕ್ ಮಾಡುತ್ತಿದ್ದೆವು‌. ಹೀಗಾಗಿ ನಮ್ಮೆಲ್ಲರ ವತಿಯಿಂದ Ashwath Kumar ಗೆ ದೊಡ್ಡ ನಮಸ್ಕಾರ.



















ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಿದ್ಧವನ ಗುರುಕುಲದ ಸವಿನೆನಪುಗಳು....

ಯೆರ್ಕಾಡ್ ಮತ್ತು ಹೊಗೇನಕಲ್ ಬೈಕ್ ಪ್ರವಾಸ