ಪುರಾಣ ಪ್ರಸಿದ್ಧ ಸಿದ್ಧರ ಬೆಟ್ಟಕ್ಕೆ ಟ್ರಕ್ಕಿಂಗ್..




'ಈ ಬಾರಿಯ ಪಿಕ್ ನಿಕ್ ನಿಜಗಲ್ಲು ಕ್ಷೇತ್ರಕ್ಕೆ, ಜೊತೆಗೆ ಇಲ್ಲಿ ಟ್ರಕ್ಕಿಂಗ್  ಇದೆ' ಎನ್ನುವ ಮಾಹಿತಿ ನೋಡಿದಾಗ ನನಗೆ ಖುಷಿಯೋ ಖುಷಿ. ಯಾಕೆಂದರೆ  ಸಮಾಜದ ಕಿರು ಪ್ರವಾಸದಲ್ಲಿ ಪ್ರತಿಬಾರಿ ಭಾಗವಹಿಸಬೇಕು ಎನ್ನುವುದು ನನ್ನ ಆಸೆ. ಆದರೆ ಕೆಲ ಕಾರಣಗಳಿಂದ ಕಳೆದ ಎರಡು ವರ್ಷದಿಂದ ಭಾಗವಹಿಸಲು ಆಗುತ್ತಿರಲಿಲ್ಲ. ಆದರೆ ಈ ಬಾರಿ ಕಿರು ಪ್ರವಾಸದಲ್ಲಿ ಭಾಗವಹಿಸಲೇಬೇಕು ಮೊದಲೇ  ನಿಶ್ಚಯಿಸಿಕೊಂಡಿದ್ದೆ. ಪ್ರವಾಸದ ಸ್ಥಳ ಅಂತಿಮವಾಗದಿದ್ದರೂ, ಪಿಕ್‌ ನಿಕ್‌ ಹೋಗುವ  ದಿನಾಂಕ ಒಂದು ತಿಂಗಳು ಮೊದಲೇ ಪತ್ರಿಕೆಯಲ್ಲಿ ಪ್ರಕಟಗೊಂಡ ಕಾರಣ ದಿನಾಂಕವನ್ನು ಮೊದಲೇ ರಿಸರ್ವ್‌ಮಾಡಿದ್ದೆ. ಅಂತಿಮವಾಗಿ  ಸ್ಥಳ ನಿಗದಿಯಾದ ಬಳಿಕ ಹೆಸರನ್ನು ನೊಂದಾಯಿಸಿ ನಾನು ಭಾಗವಹಿಸುವುದನನ್ನು ಖಚಿತಪಡಿಸಿದೆ.

ಫೆಬ್ರವರಿ 7ರ ಬೆಳ್ಳಂ ಬೆಳಗ್ಗೆ ನಮ್ಮ ಪ್ರವಾಸ ಆರಂಭವಾಯಿತು. ಆನಂದ್ ರಾವ್ ಸರ್ಕಲ್ ನಿಂದ ಮೂರು ಬಸ್, ತುಂಗಾ ನಗರ ಕಡೆಯಿಂದ ಒಂದುಬಸ್ ನಲ್ಲಿ  ನಮ್ಮ ಪ್ರಯಾಣ  ಹೊರಟಿತು. ಬೆಂಗಳೂರು 55 ಕಿ.ಮಿ ದೂರದಲ್ಲಿರುವ ಈ ನಿಜಗಲ್ಲು ಕ್ಷೇತ್ರಕ್ಕೆ ಬೆಳಗ್ಗೆ 10.15ಕ್ಕೆ ಬಸ್ ತಲುಪಿತು.  ಈ ಪ್ರವಾಸಕ್ಕೆ ಹೊರಟವರದಲ್ಲಿ ಬಹುತೇಕ ಮಂದಿ ಬೆಳಗ್ಗಿನ ಉಪವಾಸದಲ್ಲೇ ಹೊರಟಿದ್ದರು. ಹೀಗಾಗಿ
ತಾಳಹಾಕುತ್ತಿದ್ದ ಹೊಟ್ಟೆಗೆ ಆರಂಭದಲ್ಲೇ ಲಘು ಉಪಹಾರ ಸಿಕ್ಕಿತು.  ಮಕ್ಕಳು, ದೊಡ್ಡವರು  ಎಲ್ಲರೂ ಬೆಟ್ಟ ಹತ್ತಬೇಕು, ಹೀಗಾಗಿ ಹೊಟ್ಟೆ ಗಟ್ಟಿಯಾಗಬೇಕಲ್ಲ..? ಅದಕ್ಕಾಗಿ ನಮ್ಮ ತುಂಗಾ ನಗರದಲ್ಲಿರುವ 15ಕ್ಕೂ ಹೆಚ್ಚು  ಮನೆಗಳ ಮಹಿಳೆಯರು ಕೊಟ್ಟಗೆಯನ್ನು ಮಾಡಿದ್ದರು.  ಕೊಟ್ಟಗೆ ತಿಂದ ಮೇಲೆ ಕೇಳಬೇಕೆ ಹೊಟ್ಟೆ ಗಟ್ಟಿಯಾಯಿತು.

ಲಘು ಉಪಹಾರವಾದಬಳಿಕ ಕರ್ನಾಟಕದಲ್ಲೇ  ಅತಿ ದೊಡ್ಡ ಗುಹಾಂತರ ವೀರಭದ್ರ ಸ್ವಾಮಿಯನ್ನು ನೋಡಲು ಮೆಟ್ಟಿಲು ಹತ್ತಿದೇವು. ಆರಂಭದಲ್ಲಿ ಮುಕ್ತಿ ಗಣಪತಿಗೆ ಕೈ ಮುಗಿದು  ಗುಹಾಂತರ ದೇವಾಲಯಕ್ಕೆ ಪ್ರವೇಶಿಸಿದೇವು. ಹೊಯ್ಸಳರು ಈ ದೇವಾಲಯ ನಿರ್ಮಿಸಿದ್ದು 15554ರಲ್ಲಿ ಶಿವಯೋಗಿ ಮರುಳ ಸಿದ್ಧರು ಇಲ್ಲಿ ತಪಸ್ಸು ಮಾಡಿದ್ದರಂತೆ.  ಗುಹೆಯ ಒಳಗಡೆ ಪ್ರವೇಶ ಮಾಡಬೇಕಾದರೆ ಹೇಗೆ  ತಲೆಯನ್ನು ಬಗ್ಗಿಸಿ ಹೋಗುತ್ತೇವೋ ಅದೇ ರೀತಿಯಾಗಿ  ಇಲ್ಲಿ ಪ್ರವೇಶ ಮಾಡಿ ಶಿವಲಿಂಗದ ದರ್ಶನ ಮಾಡಿದೇವು.

ಗುಹಾಂತರ ದೇವಾಲಯದ ಹೊರಗಿನ ಆವರಣದಲ್ಲಿ ಉದ್ಧಾನ ವೀರಭದ್ರ ಸ್ವಾಮಿಯ ಏಕಶಿಲಾ ಮೂರ್ತಿ ಇದೆ. ಕರ್ನಾಟಕದ ಎರಡನೇ ಅತಿ ದೊಡ್ಡ ಏಕಶಿಲಾ ಮೂರ್ತಿಯಿದು. ಮೂರ್ತಿಯ ದರ್ಶನವಾದ ಬಳಿಕ ನಂದಿಯನ್ನು ನೋಡಲು ಮೇಲೆ ಹತ್ತಿದೇವು. ಇಲ್ಲಿಯೂ ಅಷ್ಟೇ  ನೀವು ತಲೆಯನ್ನು ಬಗ್ಗಿಸಿ ಮೆಟ್ಟಿಲು ಹತ್ತಬೇಕು. ಕಲ್ಲಿನ  ಮೇಲಿರುವ ವಿಶಾಲವಾದ ಜಾಗದಲ್ಲಿ ದೇವಾಲಯವಿದ್ದು ಅದರಲ್ಲಿ ನಂದಿಯ ವಿಗ್ರಹವಿದೆ.   ಫೋಟೋ ತೆಗೆಯಲು ವಿಶಾಲವಾದ ಸ್ಥಳವಾಗಿದ್ದ  ಕಾರಣ ಸಮಾಜದ ಮಂದಿ ಸಾಕಷ್ಟು ಫೋಟೋಗಳನ್ನು ಕ್ಕಿಕ್ಕಿಸತೊಡಗಿದರು.

ವೀರಭದ್ರನ ದರ್ಶನವವಾದ ಬಳಿಕ ನಮ್ಮ ಇಂದಿನ ಪ್ರವಾಸದ ಕೇಂದ್ರ ಬಿಂದು  ಸಿದ್ಧರ ಬೆಟ್ಟಕ್ಕೆ ಟ್ರಕ್ಕಿಂಗ್  ಆರಂಭವಾಯಿತು. ಈ ಬೆಟ್ಟಕ್ಕೆ ನಿಜಗಲ್ ಬೆಟ್ಟ, ಸುವರ್ಣಗಿರಿ ಎಂದು ಕರೆಯುತ್ತಾರೆ. ದೇವಾಲಯದಿಂದ ಒಂದು  ಕಿ.ಮೀ ನಡೆದು ಬೆಟ್ಟ ಹತ್ತಬೇಕು. ಈ ಬೆಟ್ಟ ಹತ್ತುವುದಕ್ಕೂ ಮೊದಲು ಒಂದು  ಪುಷ್ಕರಿಣಿ ಸಿಗುತ್ತದೆ. ಪುಷ್ಕರಿಣಿ ಕೈ ಕಾಲು  ತೊಳೆದು ಬೆಟ್ಟ ಹತ್ತಲು ಆರಂಭಿಸಿದೇವು.

ಸಮುದ್ರ ಮಟ್ಟದಿಂದ2650 ಅಡಿ ಎತ್ತರದಲ್ಲಿ ಈ ಬೆಟ್ಟ ಇದೆ. ಈ ಬೆಟ್ಟಕ್ಕೆ ಹೋಗಲು ಎರಡು ದಾರಿಗಳಿದ್ದು, ಒಂದು ಬೆಟ್ಟವನ್ನು ಹಾಗೇ ಹತ್ತಿಕೊಂಡು ಹೋಗುವುದು. ಇನ್ನೊಂದು  ಮೆಟ್ಟಿಲುಗಳ ಮೂಲಕ ಹತ್ತಿಕೊಂಡು ಹೋಗುವುದು. ಬೆಟ್ಟವನ್ನು ಹಾಗೆಯೇ ಹತ್ತಿಕೊಂಡು ಹೋಗುವುದು ಸುಲಭವೇ ಆದರೂ ಒಂದು ಕಡೆ ಕೈಯನ್ನು ಬಂಡೆಯ ಮೇಲೆ ಹಿಡಿದು ಹೋಗಬೇಕಾಗುತ್ತದೆ. ಈ  ಒಂದು ಹಂತವನ್ನು ದಾಟಿದರೇ ಸುಲಭವಾಗಿ ಬೆಟ್ಟ ಏರಬಹುದು. ಅಂತು ಇಂತು ಸಾಧನೆ ಮಾಡಿ, ಹತ್ತಲು ಕಷ್ಟ ಪಡುವವರಿಗೆ ಕೈ ಹಿಡಿದು ಸಹಾಯ ಮಾಡಿ ಬೆಟ್ಟವನ್ನು ಏರಿದೇವು.

ಈ ಬೆಟ್ಟದಲ್ಲಿ ಋಷಿಗಳು ತಪಸ್ಸನ್ನು ಆಚರಿಸಿದ್ದಾರೆ ಎನ್ನುವುದಕ್ಕೆ ಕುರುಹು  ಎಂಬಂತೆ  ಇಲ್ಲಿ ಗುಹೆಗಳಿವೆ.  ಇಲ್ಲಿ ಸಿದ್ದೇಶ್ವರ  ಸಮಾಧಿಯ ಮೇಲೆ ಲಿಂಗ ಸ್ಥಾಪಿಸಿದ್ದಾರೆ.  ಸಮುದ್ರ ಮಟ್ಟದಿಂದ 2 ಸಾವಿರ ಅಡಿ ಎತ್ತರ, ಸುತ್ತಲು ಕಲ್ಲು ಇದ್ದರೂ ಈ ಲಿಂಗದ ಸಮೀಪ ನೀರಿನ ಚಿಲುಮೆ ಇದೆ.   ನದಿ ಮೂಲ, ಋಷಿಮೂಲಗಳನ್ನು ನಾವು ಪ್ರಶ್ನಿಸುವಂತಿಲ್ಲ. ಹೇಗೆ ಕಾವೇರಿ ಉಗಮ ಸ್ಥಾನ ತಲಕಾವೇರಿಯ ಬಹ್ಮಗಿರಿ ಬೆಟ್ಟದಲ್ಲಿ ಇದೆಯೋ ಅದೇ ರೀತಿ ಸುವರ್ಣಮುಖಿ ನದಿಯ ಉಗಮ ಸ್ಥಾನ ಈ ನೀರಿನ ಚಿಲುಮೆಯಂತೆ.
ನೀರಿನಲ್ಲಿ ಔಷಧೀಯ ಗುಣಗಳು ಇದ್ದು, ಈ ನೀರಿನಲ್ಲಿ ಸ್ನಾನ ಮಾಡಿದರೆ ರೋಗ ರುಜಿನಗಳು ಮಾಯವಾಗುತ್ತದೆ ಎನ್ನುವ ನಂಬಿಕೆ ಇದೆ.

ಈ ನೀರಿನಲ್ಲಿ ಅಂತ ವಿಶೇಷತೆ ಏನಿರಬಹುದು  ಎಂದು ನೀವು ಕೇಳಬಹುದು. ಅದಕ್ಕೂ ಒಂದು ಪುರಾಣ ಕಥೆಯಿದೆ.    ರಾಮ ರಾವಣರ ಯುದ್ಧದ ವೇಳೆ ಲಕ್ಷ್ಮಣ ಮೂರ್ಚೆ ಹೋದಾಗ ಹನುಮಂತ ಸಂಜೀವಿನಿ ಪರ್ವತವನ್ನು ಎತ್ತಿಕೊಂಡು ಬರುತ್ತಾನೆ. ಸಂಜೀವಿನಿ  ಪರ್ವತದ  ಒಂದು ತುಣುಕು ಇಲ್ಲಿ  ಬಿದ್ದ ಕಾರಣ ಈ ಜಾಗ ಈಗ ವೈವಿಧ್ಯಮ ಔಷಧ ಸಸಿಗಳ ತಾಣವಾಗಿ ಪರಿವರ್ತನೆಯಾಗಿದೆ. ಜೊತೆಗೆ ನೀರಿಗೂ ಆಯುರ್ವೇದಿಕ್ ಶಕ್ತಿಯೂ ಇದೆಯಂತೆ.ಹೀಗಾಗಿ  ಈ ನೀರಿನಲ್ಲಿ ಸ್ನಾನ ಮಾಡಲು ಭಕ್ತರು ಬೆಟ್ಟ ಹತ್ತುತ್ತಿದ್ದಾರೆ.

ಗುಹೆಯನ್ನು ನೋಡಿದ ಮೇಲೆ ಮತ್ತೆ ಬೆಟ್ಟ ಹತ್ತಿದೇವು.  ಈ ಬೆಟ್ಟದ ಮೇಲ್ಭಾಗದಲ್ಲಿ ಕೋಟೆಯೊಂದು ಸಿಗುತ್ತದೆ.  16ನೇ ಶತಮಾನದ ಆರಂಭದಲ್ಲಿ ಮಧುಗಿರಿಯನ್ನು ಆಳುತ್ತಿದ್ದ ಇಮ್ಮಡಿ ಚಿಕ್ಕಪ್ಪ ಗೌಡನ ಸೇನಾನಿಯಾಗಿದ್ದ ಕುರಂಗನಾಯಕ ಕಟ್ಟಿಸಿದ ಕೋಟೆ ಇದು.  ಒಮ್ಮೆ ಈತನ ಪಟ್ಟದ ಆನೆಯ ಕಣ್ಣು ಕುರುಡಾಯಿತಂತೆ.  ಎಷ್ಟೇ ಔಷಧಿಗಳನ್ನು ನೀಡಿದರೂ ಕಣ್ಣು ಮಾತ್ರ ಕುರುಡಾಗಿಯೇ ಇತ್ತು. ಚಿಂತಾಕ್ರಾಂತನಾಗಿದ್ದ ಸೇನಾನಿಗೆ ಯಾರೋ ಒಬ್ಬರು ಸಿದ್ಧರ ಬೆಟ್ಟದಲ್ಲಿ ಆನೆಯನ್ನು ಬಿಟ್ಟು ನೋಡಿ, ಕುರುಡಾಗಿರುವ ಆನೆಗೆ ಮರಳಿ ಕಣ್ಣು ಬರಬಹುದು ಎಂದು ಸಲಹೆ ನೀಡಿದ್ದರಂತೆ. ಈ ಮಾತಿಗೆ ಬೆಲೆ ನೀಡಿ ಕೊನೆಯ  ಪ್ರಯತ್ನ ಎಂಬಂತೆ ಆನೆಯನ್ನು ಈ ಬೆಟ್ಟದಲ್ಲಿ ಬಿಡಲಾಯಿತು.

ಅರ್ಧ ವರ್ಷಗಳ ಕಾಲ ಇಲ ಇಲ್ಲಿನ ಸೊಪ್ಪುಗಳನ್ನು ತಿಂದ ಬಳಿಕ ಕಣ್ಣು ಮರಳಿ ಬಂತಂತೆ. ಹೀಗಾಗಿ ಇಲ್ಲಿ  ಬೆಟ್ಟ ಹತ್ತುವಾಗ ಬಲಬದಿಯ ಗಿಡದ ಎಲೆಗಳನ್ನು, ಇಳಿಯುವಾಗ ಎಡಬದಿಯ ಮರಗಿಡಗಳ ಎಲೆಯನ್ನು 48ದಿನಗಳ ಕಾಲ ತಿನ್ನುತ್ತಾ ಬಂದರೆ ಯಾವುದೇ ರೋಗಗಳು ವಾಸಿಯಾಗುತ್ತದೆ ಎನ್ನುವ ನಂಬಿಕೆ ‌ಇದೆ.

ಈಗ ಈ ಸಿದ್ಧನ ಬೆಟ್ಟ ಸರ್ವಧರ್ಮದ ಕೇಂದ್ರವೂ ಹೌದು. ಈ ಬೆಟ್ಟದಲ್ಲಿ ಯಾರೋ ಒಬ್ಬರು ಸೂಫಿಯೊಬ್ಬರು ಪ್ರಾರ್ಥನೆ  ಮಾಡಿ ಹೋಗಿದ್ದರಂತೆ. ಹೀಗಾಗಿ ಇಲ್ಲಿ ಮುಸ್ಲಿಂ ಧರ್ಮ ಒಂದು ಪ್ರಾರ್ಥನ ಮಂದಿರವು ಇದೆ. ಈಗ ಇಲ್ಲಿ ಭಕ್ತಾಧಿಗಳು ಪ್ರಾಣಿ ಬಲಿಯನ್ನು ನೀಡುವ ಮೂಲಕ ತಮ್ಮ  ಹರಕೆಯನ್ನು ಈಡೇರಿಸುವ ಸ್ಥಳವಾಗಿದೆ.

ಈ ಬೆಟ್ಟದ ಇನ್ನೊಂದು ಮುಖ್ಯ ವಿಶೇಷ ಏನೆಂದರೆ ಇಲ್ಲಿ ಕಾಗೆಗಳು ಇಲ್ಲ.  ಅದಕ್ಕೂ ಒಂದು ಪುರಾಣ ಕಥೆಯಿದೆ. ಇಂದ್ರನ ಮಗನ  ಜಯಂತ ಮುನಿಯೊಬ್ಬರ ಶಾಪದಿಂದ ಕಾಗೆಯಾಗುತ್ತಾನೆ.  ತನ್ನ ತಪ್ಪಿನ ಅರಿವಾಗಿ ಜಯಂತ ಈ ಶಾಪ ವಿಮೋಚನೆ ಹೇಗೆಂದು ಕೇಳಿದಾಗ, ರಾಮನ ಪಾದಸ್ಪರ್ಶ ಯಾವಾಗ ಆಗುತ್ತದೋ ಆಗ ನಿನ್ನ ಶಾಪ ವಿಮೋಚನೆ ಎಂದು ಅನುಗ್ರಹಿಸುತ್ತನೆ. ಶಾಪದ ಫಲವಾಗಿ ಜಯಂತ ಕಾಕಾಸುರ ಹೆಸರಿನ ರಾಕ್ಷಸನಾಗಿ ಜನ್ಮ ತಾಳಿದ್ದ.

ವನವಾಸ ಆರಂಭದಲ್ಲಿ ರಾಮ,ಲಕ್ಷ್ಮಣರು ಸೀತೆಯೊಂದಿಗೆ ಚಿತ್ರಕೂಟ ಪರ್ವತದಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಕಾಕಾಸುರ  ಸೀತೆಯ ಚೆಲುವನ್ನು ನೋಡಿ ಮೋಹಗೊಂಡು ಕಾಗೆಯ ರೂಪ ಧರಿಸಿ ಆಕೆಯ ಭುಜದ ಮೇಲೆ  ಕುಳಿತನು. ಕಾಗೆ ಕುಳಿತದ್ದನ್ನು ನೋಡಿ ಭಯಗೊಂಡ  ಸೀತೆ ರಾಮನನ್ನು ಗಟ್ಟಿಯಾಗಿ ಹಿಡಿದುಕೊಂಡಳು. ಈ ಕಾಕಾಸುರನಿಗೆ ಬುದ್ಧಿಕಲಿಸಲು ರಾಮ ಒಂದು ದರ್ಭೆಯನ್ನು ಮಂತ್ರಿಸಿ ಕಾಕಾಸುರ ಮೇಲೆ ಪ್ರಯೋಗಿಸಿದನು.  ತಪ್ಪಿಸಿಕೊಳ್ಳಲು ಮೂರು ಲೋಕದಲ್ಲಿ ಕಾಕಾಸುರ ಅಡಗಿ ಕುಳಿತರೂ ಈ ದರ್ಭೆ  ಬೆನ್ನೆಟ್ಟಿಕೊಂಡು ಬರುತ್ತಲೇ ಇತ್ತು. ಕೊನೆಗೆ ಆತನಿಗೆ ರಾಮನಿದ್ದಲ್ಲಿಗೆ ಬಂದು ಕಾಲಿಗೆ ಅಡ್ಡ ಬಿದ್ದ.  ಈ ವೇಳೆ ರಾಮ ಕಾಕಸುರನ ಒಂದು ಕಣ್ಣನ್ನು ತೆಗೆದು ಇನ್ನೊಂದು ಕಣ್ಣಿನಿಂದ ಎರಡೂ ಬದಿಯೂ ಕಾಣುವಂತೆ ಅನುಗ್ರಹಿಸಿದನು. ಅಂದಿನಿಂದ  ಕಾಗೆಗಳಿಗೆ ಒಂದೇ ಕಣ್ಣು ಕಾಣತೊಡಗಿತು.  ಅಷ್ಟೇ ಅಲ್ಲದೇ ಇನ್ನು ಮುಂದೆ ಈ ಪ್ರದೇಶದ ಸಮೀಪ ಎಲ್ಲಿಯೂ ಸುಳಿಯಕೂಡದು ಎಂದು ಅಜ್ಞಾಪಿಸುತ್ತಾನೆ.  ಹೀಗಾಗಿ ಈ ಬೆಟ್ಟದಲ್ಲಿ ಇಂದಿಗೂ ಕಾಗೆಗಳು ಕಾಣಿಸುವುದಿಲ್ಲ.

ಇಷ್ಟೆಲ್ಲ ವಿಶೇಷತೆಗಳಿರುವ ಬೆಟ್ಟದ ಮೇಲ್ಭಾಗದಲ್ಲಿ ಹೋಗಿ ಫೋಟೋಗಳನ್ನು  ಮಟಮಟ ಮಧ್ಯಾಹ್ನದಲ್ಲಿ ಕ್ಲಿಕ್ಕಿಸಿ ನಿಧಾನವಾಗಿ  ಬೆಟ್ಟವನ್ನು ಇಳಿಯತೊಡಗಿದೆವು.  ಮೆಟ್ಟಿಲುಗಳಲ್ಲಿ ವೇಗವಾಗಿ ಇಳಿದು ಭೋಜನ ಶಾಲೆಯನ್ನು ಪ್ರವೇಶಿಸುತ್ತಿದ್ದಂತೆ ಮಧ್ಯಾಹ್ನದ ಊಟ ತಯಾರಾಗಿತ್ತು.  ಎಲ್ಲ ಬಾಂಧವರ ಊಟವಾದ ಬಳಿಕ ಸಭೆಯ ಹಿರಿಯರಾದ ಶಿವರಾವ್ ಮತ್ತು ಕೃಷ್ಣಾನಂದ ಅವರು  ನಮ್ಮ ಸಮಾಜ ಹೇಗೆ ಬೆಳೆಯಬೇಕು, ಈ ಹಿಂದಿನ ಪ್ರವಾಸದ ಬಗ್ಗೆ ಮಾತನಾಡಿದರು. ಬಳಿಕ ಸಮಾಜ ವಿವಿಧ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮನಡೆಯಿತು. ಇದರ  ಜೊತೆ ಪ್ರತಿವರ್ಷ ದಂತೆ ಇದೇ ಮೊದಲ ಬಾರಿಗೆ ಪ್ರವಾಸಕ್ಕೆ ಬಂದಿರುವ ಬಂಧುಗಳು ತಮ್ಮ ಪರಿಚಯ  ಹೇಳಿಕೊಂಡರು. ನಂತರ ಪ್ರವಾಸಕ್ಕೆ ಆಗಮಿಸಿದ ನವ ಜೋಡಿಗಳ ಪರಿಚಯವು  ನಡೆಯಿತು.

ಈ ಎಲ್ಲ ಕಾರ್ಯಕ್ರಮಗಳು ಮುಗಿದಾಗ ಸಮಯ ಸಂಜೆ 3.45. ಸಾಂಸ್ಕೃತಿಕ ಕಾರ್ಯಕ್ರಮಗಳು ಮುಗಿದ ಕೂಡಲೇ ಸಂಜೆಯ ಲಘು ಉಪಾಹಾರವನ್ನು ಸೇವಿಸಿ ಬಸ್  ಹತ್ತಿದ್ದೇವು.  ಮುಖ್ಯ ರಸ್ತೆ ಪ್ರವೇಶಿಸುತ್ತಿದ್ದಂತೆ ಬಸ್ ನಲ್ಲಿ  ಅಂತ್ಯಕ್ಷರಿ ಆರಂಭವಾಯಿತು. 1980 ಮಾಡೆಲ್‌ ನಿಂದ ಹಿಡಿದು 2016 ಲೇಟೆಸ್ಟ್  ಮಾಡೆಲ್‌ ವರೆಗಿನ ಹಾಡುಗಳು ಹಾಡುತ್ತಾ ಬಂದ ಕಾರಣ ಬೆಂಗಳೂರು ಸಿಟಿ ಬಂದದ್ದೆ ಗೊತ್ತಾಗಲಿಲ್ಲ. ಬೆಂಗಳೂರು ನಗರದಲ್ಲಿ  ಈಗಾಗಲೇ ವಾಯುಮಾಲಿನ್ಯ ಜಾಸ್ತಿ ಆಗಿದೆ. ಹೀಗಾಗಿ ಈ ಮಾಲಿನ್ಯದ  ಜೊತೆ ನಮ್ಮ ಶಬ್ಧ ಮಾಲಿನ್ಯ ಸೇರಿ ಕಿರಿಕಿರಿ ಆಗುವುದು  ಬೇಡ ಎಂದು ತೀರ್ಮಾನಿಸಿ ಸಿಟಿ ಬಂದಾಗ ಅಂತ್ಯಕ್ಷರಿ ನಿಲ್ಲಿಸಿ 'ಕಾಂಕ್ರಿಟ್ ಕಾಡು'ಗಳನ್ನು ವೀಕ್ಷಿಸಲು ಆರಂಭಿಸಿದೇವು. ಸುಮಾರು ೬ ಗಂಟೆಯ ವೇಳೆಗೆ ಮೂರು ಬಸ್‌ಗಳು  ಆರಂಭದಲ್ಲಿ ಹೊರಟಿದ್ದ ಆನಂದ್ ರಾ‌ವ್ ಸರ್ಕಲ್‌  ತಲುಪಿತು.

ಬೆಂಗಳೂರಿನಲ್ಲಿ ಪ್ರವಾಸಕ್ಕೆ ಜಾಗ ಹುಡುಕುವುದು ಕಷ್ಟ. ಅದರಲ್ಲೂ ಎಲ್ಲ ವಯಸ್ಸಿನವರಿಗೂ ಹಿತವಾಗುವ ಜಾಗ ಹುಡಕುವುದು ಮತ್ತೊಂದು ಕಷ್ಟ. ಇನ್ನು ಜಾಗ ಹುಡುಕಿದರೂ ಆ ಜಾಗ ಸಮಾಜದ ಬಾಂಧವರಿಗೆ ಇಷ್ಟವಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಈ ಎಲ್ಲ ಕಷ್ಟ ಇಷ್ಟಗಳ ನಡುವೆ ಅಚ್ಚುಕಟ್ಟಾಗಿ ಪೌರಾಣಿಕ ಹಿನ್ನೆಲೆಯ  ಅದರಲ್ಲೂ ಟ್ರಕ್ಕಿಂಗ್ ಗೆ ಯೋಗ್ಯವಾದ ಸ್ಥಳವನ್ನು ಆರಿಸಿ ಪ್ರವಾಸವನ್ನು ಆಯೋಜನೆ ಮಾಡಿದ ಹಿರಿಯರಿಗೆ ಧನ್ಯವಾದಗಳು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆಂಧ್ರ ಪ್ರವಾಸ ಕಥನ - ಲೇಪಾಕ್ಷಿ ದೇವಾಲಯ

ತಮಿಳುನಾಡು ಬೈಕ್ ಟ್ರಿಪ್ ಭಾಗ -2 ಹೊಗೇನಕಲ್ ಪ್ರವಾಸ ಕಥನ

ಸಿದ್ಧವನ ಗುರುಕುಲದ ಸವಿನೆನಪುಗಳು....