ಟಿಆರ್‌ಪಿ ಟಿಆರ್‌ಪಿ ಏರುಪೇರಾಗುತ್ತೆ ಚಾನೆಲ್‌ ಬಿಪಿ...


"ಎಷ್ಟು ತೋರಿಸ್ತೀರಿ, ಹಾಕಿದ್ದನ್ನೇ ಹಾಕ್ತೀರಾ? ಬೆಳಗ್ಗೆಯಿಂದ ನೋಡ್ತಾ ಇದ್ದೇನೆ. ಎಲ್ಲ ಚಾನೆಲ್‌ ಗಳಿಗೆ ಬೇರೆ ಕೆಲ್ಸ ಇಲ್ವಾ? ಅದು ಬಿಟ್ರೆ ಬೇರೆ ಸುದ್ದಿಗಳೇ ಇಲ್ವಾ?"
ಆಪ್ತರೊಬ್ಬರು ನನಗೆ ಮೆಸೇಜ್ ಮಾಡಿ ಬೈದಿದ್ದು ಹೀಗೆ. ಇದಕ್ಕೆ ನಾನು "ನಿಮಗೆ ಬೇರೆ ಕೆಲ್ಸ ಇಲ್ವಾ? ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನೋಡಬೇಕು ಅಂತಾ ಹೇಳಿದ್ದು ಯಾರು? ರಿಮೋಟ್ ನಿಮ್ ಕೈಯಲ್ಲಿ ಇದೆ. ಚಾನೆಲ್ ಚೇಂಜ್‌ ಮಾಡಿ ನೆಮ್ಮದಿಯಾಗಿರಿ" ಅಂತ ರಿಪ್ಲೈ ಮಾಡಿದೆ. ಈ ಮೆಸೇಜ್‌ಗೆ ಸ್ನೇಹಿತರು ಮತ್ತೆ ರಿಪ್ಲೈ ಮಾಡಲೇ ಇಲ್ಲ.
"ಟಿಆರ್‌‌ಪಿ, ಟಿಆರ್‌ಪಿ.. ಈ ಟಿಆರ್‌ಪಿಗಾಗಿ ಕನ್ನಡ ಸುದ್ದಿ ಚಾನೆಲ್‌‌ಗಳು ಏನು ಬೇಕಾದ್ರೂ ಮಾಡುತ್ತವೆ. ಪತ್ರಿಕೋದ್ಯಮವನ್ನು ಹಾಳು ಮಾಡಿದ್ದೇ ಈ ಟಿವಿ ವಾಹಿನಿಗಳು. ಕೆಲಸಕ್ಕೆ ಬಾರದ ಮನೆಹಾಳು ವಿಚಾರವನ್ನು ತೋರಿಸಿ ಸಾಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿರುವ ಚಾನೆಲ್‌‌ಗಳಿಗೆ ಧಿಕ್ಕಾರ" ಈ ರೀತಿಯ ಮೆಸೇಜ್‌ಗಳಿರುವ ಪೋಸ್ಟ್‌‌ಗಳು ಫೇಸ್‌‌ಬುಕ್‌, ವಾಟ್ಸಪ್‌‌ನಲ್ಲಿ ಹರಿದಾಡುವುದು ಈಗ ಸಾಮಾನ್ಯ. ಆದರೆ ಯಾರೆಲ್ಲ ಟಿಆರ್‌ಪಿ ವಿಚಾರದ ಬಗ್ಗೆ ಮಾತನಾಡುತ್ತಾರೋ ಅವರಲ್ಲಿ ಹಲವು ಮಂದಿಗೆ ಟಿಆರ್‌ಪಿ ಅಂದರೆ ಏನು ಎನ್ನುವುದೇ ಗೊತ್ತಿಲ್ಲ. ನನಗೂ ಸಂಪೂರ್ಣವಾಗಿ ಟಿಆರ್‌ಪಿ ಅಂದರೆ ಏನು ಎನ್ನುವುದು ಗೊತ್ತಿಲ್ಲ. ಆದರೆ ಕೆಲ ವರ್ಷಗಳಿಂದ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಸ್ವಲ್ಪ ಸ್ವಲ್ಪ ತಿಳಿಯುತ್ತಿದೆ. ತಿಳಿದಿದ್ದನ್ನು ಹೇಳುವ ಪ್ರಯತ್ನ ನನ್ನದು.
ಟಿಆರ್‌‌ಪಿ ವಿಚಾರ ತಿಳಿದುಕೊಳ್ಳುವ ಮೊದಲು ಪೇಪರ್‌‌‌ ವಿಚಾರಕ್ಕೆ ಬರೋಣ. ಒಂದು ಪೇಪರ್‌ ಮಾರುಕಟ್ಟೆಯಲ್ಲಿ ಎಷ್ಟು ಸೇಲಾಗುತ್ತಿದೆ ಎನ್ನುವುದನ್ನು ಎಬಿಸಿ(ಆಡಿಟ್ ಬ್ಯುರೋ ಆಫ್‌ ಸರ್ಕ್ಯೂಲೇಷನ್‌‌) ಸಂಸ್ಥೆ ಹೇಳುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಮುದ್ರಣವಾದ ಪ್ರತಿಗಳಲ್ಲಿ ಎಷ್ಟು ಮಾರಾಟವಾಗುತ್ತಿದೆ. ಯಾವ ದಿನ ಹೆಚ್ಚು ಮಾರಾಟವಾಗುತ್ತದೆ ಎನ್ನುವ ಮಾಹಿತಿ ಪೇಪರ್‌ ಕಂಪೆನಿಗಳಿಗೆ ಸಿಗುತ್ತದೆ. ಹೀಗಾಗಿ ಈ ಮಾನದಂಡದ ಆಧಾರವಾಗಿ ಅವರು ಜಾಹೀರಾತು ದರವನ್ನು ನಿಗದಿ ಪಡಿಸುತ್ತಾರೆ. ಮತ್ತು ಉಳಿದ ಪೇಪರ್‌‌‌‌ಗೂ ನಮಗೂ ಎಷ್ಟು ಅಂತರವಿದೆ ಎನ್ನುವುದನ್ನು ತಿಳಿದುಕೊಳ್ಳುತ್ತಾರೆ.
ಡಿಜಿಟಲ್‌ ಕ್ಷೇತ್ರಕ್ಕೆ ಬಂದರೆ ನಿಮಗೆ ಪಕ್ಕಾ ಮಾಹಿತಿ ಸಿಗುತ್ತದೆ. ಗೂಗಲ್‌ ಅನಾಲಿಟಿಕ್ಸ್, ಚಾರ್ಟ್ ಬೀಟ್ ... ಇನ್ಯಾವುದೋ ಟೂಲ್‌ ಇದ್ದಲ್ಲಿ ನಿಮ್ಮ ವೆಬ್‌ಸೈಟ್‌‌‌ಗೆ ಪ್ರತಿದಿನ ಎಷ್ಟು ಜನ ಬರುತ್ತಾರೆ? ಎಲ್ಲಿಂದ ಬರುತ್ತಾರೆ? ಒಂದು ಸುದ್ದಿಯನ್ನು ಎಷ್ಟು ಜನ ಓದಿದ್ದಾರೆ? ಈಗ ನಿಮ್ಮ ಸೈಟ್‌‌ನಲ್ಲಿ ಎಷ್ಟು ಜನ ಇದ್ದಾರೆ? ಫೇಸ್‌ಬುಕ್‌ , ಟ್ವಿಟ್ಟರ್‌ ಮೂಲಕ ಎಷ್ಟು ಜನ ಬಂದಿದ್ದಾರೆ? ಯಾವ ಬ್ರೌಸರ್‌ನಿಂದ ಬಂದಿದ್ದಾರೆ?... ಇತ್ಯಾದಿ ಮಾಹಿತಿಗಳನ್ನು ಕ್ಷಣ ಕ್ಷಣದಲ್ಲಿ ನೀಡುತ್ತಲೇ ಇರುತ್ತದೆ. ಅಷ್ಟೇ ಏಕೆ ಅಲೆಕ್ಸಾ ತಾಣಕ್ಕೆ ಹೋದಲ್ಲಿ ನಿಮ್ಮ ವೆಬ್‌ಸೈಟ್‌ ವಿಶ್ವಮಟ್ಟದಲ್ಲಿ ಎಷ್ಟನೇ ಸ್ಥಾನದಲ್ಲಿದೆ? ಭಾರತದಲ್ಲಿ ಎಷ್ಟನೇ ತಾಣದಲ್ಲಿ ಎನ್ನುವ ನಿಖರ ಮಾಹಿತಿಯನ್ನು ನೀಡುತ್ತದೆ. ಇವುಗಳು ನೀಡುವ ಮಾನದಂಡದ ಆಧಾರದಲ್ಲಿ ನಿಮ್ಮ ವೆಬ್‌ಸೈಟ್‌‌ನ ಭವಿಷ್ಯ ನಿಂತಿರುತ್ತದೆ.
ಪ್ರತಿವಾರ ಬರುವ ಟಿಆರ್‌ಪಿ ರೇಟಿಂಗ್‌‌ನ ಆಧಾರದಲ್ಲಿ ಟಿವಿಗಳ ಭವಿಷ್ಯ ನಿಂತಿರುತ್ತದೆ. ಪ್ರಾಣಿ, ಕ್ರೀಡೆ, ಸಿನಿಮಾಗಳನ್ನೇ ತೋರಿಸುವ ಪೇಯ್ಡ್ ಚಾನೆಲ್‌ಗಳಿಗೆ ಟಿಆರ್‌‌ಪಿ ಅಷ್ಟೇನು ದೊಡ್ಡ ಮಟ್ಟದ ಸಮಸ್ಯೆ ಇಲ್ಲ. ಜನ ಬೇಕಾದ್ರೆ ಹಣ ನೀಡಿ ಚಾನೆಲ್‌ ವೀಕ್ಷಣೆ ಮಾಡುತ್ತಾರೆ. ಆದರೆ ಸಮಸ್ಯೆ ಇರುವುದು ಪ್ರಾದೇಶಿಕ ವಾಹಿನಿಗಳಲ್ಲಿ. ಪ್ರಾದೇಶಿಕ ವಾಹಿನಿಗಳಿಗೆ ಟಿಆರ್‌ಪಿಯೇ ಮಾನದಂಡ. ಪ್ರತಿ ವಾರ ಟಿಆರ್‌ಪಿ ನೀಡೋ ಸಂಸ್ಥೆಗಳು ನೀಡುವ ರೇಟಿಂಗ್‌‌ ಆಧಾರದಲ್ಲಿ ಈ ವಾಹಿನಿಗಳು ಕಾರ್ಯ‌ನಿರ್ವ‌ಹಿಸುತ್ತಿರುತ್ತವೆ.
ಟಿಆರ್‌ಪಿ ರೇಟಿಂಗ್‌ ನೀಡುವ ಸಂಸ್ಥೆಗಳು ಮಹಾನಗರ, ನಗರ, ಗ್ರಾಮೀಣ ಭಾಗದಲ್ಲಿ ಕೇಬಲ್‌ ಹಾಕಿರುವ ಮನೆಗಳಲ್ಲಿ ಕೆಲ ಮನೆಗಳನ್ನು ಆರಿಸಿಕೊಂಡು ಪಿಪಲ್ಸ್‌ ಮೀಟರ್‌ ಎನ್ನುವ ಒಂದು ಸಾಧನವನ್ನು ಅಳವಡಿಸುತ್ತವೆ. ಈ ಸಾಧನ ಒಂದು ದಿನದಲ್ಲಿ ಆ ಮನೆಯವರು ಯಾವ ಸಮಯದಲ್ಲಿ ಯಾವ ಕಾರ್ಯಕ್ರಮವನ್ನು ನೋಡುತ್ತಾರೆ ಎನ್ನುವುದನ್ನು ದಾಖಲಿಸುತ್ತದೆ. ಇದೇ ರೀತಿ ರಾಜ್ಯದಲ್ಲಿ ಎಲ್ಲೆಲ್ಲಿ ಈ ಸಾಧನಗಳನ್ನು ಅಳವಡಿಕೆಯಾಗಿದೆಯೋ ಅಲ್ಲೂ ದಾಖಲಾಗುತ್ತಿರುತ್ತದೆ. ಈ ಸಾಧನಗಳಲ್ಲಿ ದಾಖಲಾದ ಎಲ್ಲ ಮಾಹಿತಿಗಳನ್ನು ಕ್ರೋಢಿಕರಿಸಿ ಲೆಕ್ಕ ಹಾಕಿ ಅಂತಿಮವಾಗಿ ವಾರದಲ್ಲಿಒಂದು ದಿನ(ಗುರುವಾರ, ರಾಜ ದಿನವಿದ್ದಲ್ಲಿ ಮರು ದಿನ) ಚಾನೆಲ್‌ಗಳ ಟಿಆರ್‌ಪಿಯನ್ನು ಬಿಡುಗಡೆ ಮಾಡುತ್ತದೆ.
ಕರ್ನಾಟಕದಲ್ಲಿ 4 ಸಾವಿರ ಮನೆಯಲ್ಲಿ ದಾಖಲಾದ ಡೇಟಾಗಳನ್ನು ನೋಡಿ ಸಂಪೂರ್ಣ ರಾಜ್ಯದ ಜನತೆಗೆ ಈ ಕಾರ್ಯಕ್ರಮ ಇಷ್ಟವಾಗಿದೆ ಎಂದು ಹೇಗೆ ಹೇಳುತ್ತಿರಿ. ಶುದ್ಧ ಬೋಗಸ್‌ ರಿಪೋರ್ಟ್. ಇದು ಅವೈಜ್ಞಾನಿಕ ವಿಧಾನ ಎಂದು ನೀವು ಕೇಳಬಹುದು. ಈ ಪ್ರಶ್ನೆಗೆ ನನ್ನ ಬಳಿ ಖಂಡಿತವಾಗಿಯೂ ಉತ್ತರ ಇಲ್ಲ. ಆದರೆ ಇದನ್ನು ನೀವು ನಂಬಲೇಬೇಕು. ಯಾಕೆಂದರೆ ಈಗ ಬಹಳಷ್ಟು ಅಧ್ಯಯನಗಳನ್ನು ಸಮೀಕ್ಷೆ ಮಾಡಿ ಕೈಗೊಳ್ಳುತ್ತಾರೆ. ಉದಾಹರಣೆಗೆ ಕನ್ನಡ ಚಲನಚಿತ್ರಗಳ ಬಗ್ಗೆ ಸಂಶೋಧನೆ ಮಾಡುತ್ತೀರಿ ಎಂದು ಇಟ್ಟುಕೊಳ್ಳೋಣ. ಈ ಸಂಶೋಧನಗೆ ಕನ್ನಡ ಚಲನ ಚಿತ್ರ ವೀಕ್ಷಿಸುವ ರಾಜ್ಯದ ಎಲ್ಲ ಜನರಿಗೆ ಪ್ರಶ್ನೆಗಳನ್ನು ಕಳುಹಿಸದೇ ವಯಸ್ಸು, ಲಿಂಗ, ಶೈಕ್ಷಣಿಕ ಅರ್ಹತೆ, ಇತ್ಯಾದಿ ಮಾನದಂಡಗಳನ್ನು ಸಿದ್ಧಪಡಿಸಿ ಸೆಲೆಕ್ಟ್ ಮಾಡಿ ವ್ಯಕ್ತಿಗಳಿಗೆ ಪ್ರಶ್ನೆ ನೀಡಿ ಅಧ್ಯಯನ ಕೈಗೊಂಡು ಕೊನೆಗೆ ಫಲಿತಾಂಶ ನೀಡುತ್ತೀರಿ. ಹೀಗಾಗಿ ನೀವು ಟಿಆರ್‌ಪಿ ಶುದ್ಧ ಅವೈಜ್ಞಾನಿಕ ಎಂದು ಹೇಳಿದರೆ ಈ ರೀತಿಯಾಗಿ ಸ್ಯಾಂಪಲ್‌‌ಗಳನ್ನು ತೆಗೆದು ಅಧ್ಯಯನ ಮಾಡುವ ಸಮೀಕ್ಷೆಗಳು ತಪ್ಪು ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಹೀಗಾಗಿಇದನ್ನು ನೀವು ಹೇಗೆ ಒಪ್ಪಿದ್ದೀರೋ ಹಾಗೇ ನಾವು ಟಿಆರ್‌ಪಿಯನ್ನು ಒಪ್ಪಿದ್ದೇವೆ.
ಭಾರತದಲ್ಲಿ ಚುನಾವಣೆ ಒಂದು ಹೊರತು ಪಡಿಸಿ ಬೇರೆ ಯಾವುದೇ ವಿಧಾನದಿಂದ ಸಂಪೂರ್ಣವಾಗಿ ಒಂದು ರಾಜ್ಯದ ಎಲ್ಲ ಜನರ ಅಭಿಪ್ರಾಯವನ್ನು ಸಂಗ್ರಹಿಸಲು ಸಾಧ್ಯವಿಲ್ಲ. ಹೀಗಾಗಿ ಖಾಸಗಿ ಸಂಸ್ಥೆ ಗಳು ನೀಡುವ ಡೇಟಾವನ್ನು ಒಪ್ಪದೇ ಬೇರೆ ವಿಧಿ ಇಲ್ಲ.
ವೆಬ್‌ಸೈಟ್‌ ಥರ ಟಿಆರ್‌ಪಿ ಡೇಟಾ ಕ್ಷಣ ಕ್ಷಣದಲ್ಲಿ ಸಿಗುವುದಿಲ್ಲ. ಹಿಂದಿನ ವಾರ ಪ್ರಸಾರವಾದ ಕಾರ್ಯಕ್ರಮಗಳಿಗೆ ಮುಂದಿನ ಗುರುವಾರ ಬರುತ್ತದೆ. ಆದರೆ ಇಂದೇ ನೀವು ಈ ಕಾರ್ಯಕ್ರಮಗಳಿಗೆ ಪಕ್ಕಾ ಟಿಆರ್‌ಪಿ ಹೇಗೆ ಬರುತ್ತದೆ ಎಂದು ಹೇಗೆ ಊಹಿಸುತ್ತೀರಿ? ವಿಶೇಷವಾಗಿ ಸೆಲೆಬ್ರಿಟಿ ಅಥವಾ ಸೆನ್ಸೆಷನಲ್‌ ವಿಚಾರ ಬಂದಾಗ ಯಾಕೆ ಬೆಳಗ್ಗೆಯಿಂದ ಸಂಜೆವರೆಗೆ ಪ್ರಸಾರ ಮಾಡುತೀರಿ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಇದಕ್ಕೂ ಉತ್ತರವಿದೆ. ಈ ಹಿಂದಿನ ಟಿಆರ್‌ಪಿ ಡೇಟಾಗಳೇ ಇದಕ್ಕೆ ಮಾನದಂಡ. ಈ ಮಾನದಂಡದ ಆಧಾರಲ್ಲಿ ಕಾರ್ಯಕ್ರಮಗಳು ಸಿದ್ಧಗೊಳ್ಳುತ್ತದೆ.
ಕರ್ನಾಟಕ ಫೈರಿಂಗ್‌ ಸ್ಟಾರ್ ಹುಚ್ಚ ವೆಂಕಟ್‌ ಅವರು ಬಿಗ್‌ ಬಾಸ್‌ ಮನೆ ಹೋಗುವ ಮೊದಲು, ಮನೆಯಲ್ಲಿದ್ದ ವೇಳೆ, ಮನೆಯಿಂದ ಔಟಾದ ಮೇಲೂ ಚಾನೆಲ್‌‌ಗಳು ಹೆಚ್ಚಾಗಿ ವೆಂಕಟ್ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದರು. ಈ ವೇಳೆಯೂ ಮೀಡಿಯಾಗಳ ಮೇಲೆ ಟಿಆರ್‌ಪಿ ವಿಷಯವನ್ನು ಇಟ್ಟುಕೊಂಡು ಟೀಕಾ ಪ್ರಹಾರ ಮುಂದುವರೆದಿತ್ತು. ಯಾಕೆ ಈಗ ವಿಚಾರವನ್ನು ಪ್ರಸ್ತಾಪ ಮಾಡಿದ್ದು ಎಂದರೆ, ಈ ಟಿಆರ್‌ಪಿ ಮಾಹಿತಿ ಎಲ್ಲರಿಗೂ ಸಿಗುವುದಿಲ್ಲ. ಹೀಗಾಗಿ ಇದುವರೆಗೆ ನಾನು ನಿಮಗೆ ಹೇಳಿದ್ದು ಅರ್ಥವಾಗದೇ ಇದ್ದಲ್ಲಿ ನೀವೇ ಒಂದು 'ಟಿಆರ್‌ಪಿ ಪರೀಕ್ಷೆ' ಮಾಡಬಹುದು. ಯೂ ಟ್ಯೂಬ್‌ಗೆ ಹೋಗಿ "ಹುಚ್ಚ ವೆಂಕಟ್‌" ಎಂದು ಟೈಪ್‌ ಮಾಡಿ. ಈ ವೇಳೆ ಬಹಳಷ್ಟು ವಿಡಿಯೋಗಳಿರುವ ಪೇಜ್‌ಗಳು ಓಪನ್‌ ಆಗುತ್ತದೆ. ನಂತರ ವಿಡಿಯೋಗಳನ್ನು ಎಷ್ಟು ಜನ ವೀಕ್ಷಿಸಿದ್ದಾರೆ ಎನ್ನುವುದನ್ನು ನೋಡಿ. ಕೆಲವು ವಿಡಿಯೋಗಳು ಲಕ್ಷಕ್ಕೂ ಅಧಿಕ ವ್ಯೂ ಆಗಿದ್ದರೆ, ಬಹುತೇಕ ವಿಡಿಯೋಗಳು ೧೦ ಸಾವಿರಕ್ಕೂ ಅಧಿಕ ವ್ಯೂ ಆಗಿರುವುದು ನಿಮಗೆ ತಿಳಿಯುತ್ತದೆ.
ಈ ಟೆಸ್ಟ್ ಮಾಡಿದ ಬಳಿಕ ವಿವಿಧ ವಾಹಿನಿಗಳಲ್ಲಿ ಬರುವ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳ ಹೆಸರನ್ನು ಟೈಪಿಸಿ. ಎಷ್ಟು ಜನ ಈ ವಿಡಿಯೋಗಳನ್ನು ನೋಡಿದ್ದಾರೆ ಎನ್ನುವುದು ನಿಮಗೆ ತಿಳಿಯುತ್ತದೆ. ಈ ಎರಡು ಪರೀಕ್ಷೆ ಮಾಡುವಾಗಲೂ ಗೂಗಲ್‌ ಮಾಲೀಕತ್ವದ ಯೂ ಟ್ಯೂಬ್‌ ಕಂಪೆನಿ ಇರುವುದು ಅಮೆರಿಕದಲ್ಲಿ, ಈ ಕಂಪೆನಿ ಚಾನೆಲ್ ಪರವಾಗಿ ಕೆಲಸ ಮಾಡಿ ವಿಡಿಯೋಗಳ ವ್ಯೂಗಳ ಸಂಖ್ಯೆಯನ್ನು ಹೆಚ್ಚು ಮಾಡುವುದಿಲ್ಲ ಎನ್ನುವ ಕನಿಷ್ಟ ಜ್ಞಾನ ನಿಮ್ಮಲ್ಲಿ ಇರುತ್ತದೆ ಎನ್ನುವುದನ್ನು ನಾನು ಬಲ್ಲೆ.
ನಮ್ಮದು ಪ್ರಜಾಪ್ರಭುತ್ವ ದೇಶ. ಜನರೇ ಪ್ರಭುಗಳು. ಜನ ಬಹುಮತ ಯಾರಿಗೆ ಇರುತ್ತದೋ ಅವರು ಗೆಲ್ಲುತ್ತಾರೆ. ಇದು ವಾಹಿನಿಗಳಿಗೂ ಅನ್ವಯವಾಗುತ್ತದೆ. ಕಾರ್ಯಕ್ರಮ ಒಳ್ಳೆಯದೋ ಕೆಟ್ಟದ್ದೋ 100ರಲ್ಲಿ 70ಮಂದಿಗೆ ಇಷ್ಟವಾಗಿ 30 ಮಂದಿಗೆ ಇಷ್ಟವಾಗುವುದಿಲ್ಲ ಎಂದರೆ ಅದು ನಮ್ಮ ತಪ್ಪಲ್ಲ. ಒಂದು ವೇಳೆ ನಮ್ಮದೇ ಕೆಟ್ಟದ್ದು ಅಂತಾನೆ ಇಟ್ಟುಕೊಳ್ಳೋಣ. ಹಾಗಾದರೆ ನೋಡುವ 70 ಮಂದಿ ಕೆಟ್ಟವರೇ? ಅವರಿಗೂ ತಿಳುವಳಿಕೆ ಇಲ್ಲವೇ? ಈ ಪ್ರಶ್ನೆಯನ್ನು ನಾವು ಕೇಳುವಂತಿಲ್ಲ. ಕೇಳಿದ್ರೆ ನಾವು ಅಪರಾಧಿಗಳು.
ಸೆನ್ಸೆಶನಲ್‌ ಟಾಪಿಕ್‌ಗಳು ಎಲ್ಲ ಮಾಧ್ಯಮಗಳಲ್ಲಿ ರಾರಾಜಿಸುತ್ತಿರುವಾಗ ನನಗೆ ವೆನಿಲ್ಲಾ ಬೆಳೆ ನೆನಪಾಗುತ್ತದೆ. ವೆನಿಲ್ಲಾ ಬೆಳೆ ಆರಂಭದಲ್ಲಿ ಕ್ಲಿಕ್‌ ಆದ ವೇಳೆ 1 ಮೀಟರ್‌ ಉದ್ದದ ವೆನಿಲ್ಲಾ ಬಳ್ಳಿಗೆ 100, 200ರೂ. ಇತ್ತು. ಬೆಳೆ ಬೆಳೆಯುವ ವೇಳೆ ತೋಟಕ್ಕೆ ಜನ ಬೇರೆ ಕಾವಲು ಇರುತ್ತಿದ್ದರು. ಇನ್ನು ಇಷ್ಟು ಹೂವನ್ನು ಬೆಳಗ್ಗೆ ಪರಾಗಸ್ಪರ್ಷ ಮಾಡಿದರೆ ಇಂತಿಷ್ಟು ಹಣ ಸಹ ಸಿಗುತಿತ್ತು. ಆ ಸಮಯದಲ್ಲಿ ವೆನಿಲ್ಲ ಬೆಳೆದವರಿಗೆ ಭರ್ಜರಿ ಹಣ ಸಿಕ್ಕಿತ್ತು. ಆದರೆ ನಂತರ ವೆನಿಲ್ಲಾ ಏನಿಲ್ಲ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಇದನ್ನೇ ನಾವು ವಾಹಿನಿಗಳಿಗೂ ಅಪ್ಲೈ ಮಾಡಿದರೆ ಈ ಸೆನ್ಸೇಶನ್‌ ಟಾಪಿಕ್‌‌ಗಳು ವಾಹಿನಿಗಳಿಗೆ ಈಗ ವೆನಿಲ್ಲಾ ಬೆಳೆ ಇದ್ದಂತೆ. ಟಿಆರ್‌‌ಪಿ ಮಾರುಕಟ್ಟೆಯಲ್ಲಿ ಈ ಟಾಪಿಕ್‌ಗಳಿಗೆ ಭರ್ಜರಿ ಬೆಳೆ ಇದೆ. ಹೀಗಾಗಿ ವಾಹಿನಿಗಳಿಗೆ ಇಂಥ ಟಾಪಿಕ್ ಸಿಕ್ಕಿದಾಗ ಒಮ್ಮೆಲೆ ಮಾರಾಟ ಮಾಡುತ್ತವೆ. ಎಲ್ಲರಿಗೂ ಈ ಟಾಪಿಕ್‌ ಲಾಭ ತಂದು ಕೊಟ್ಟರೂ ಮುಂದಿನ ವಾರ ಒಂದು ವಾಹಿನಿಗೆ ಭರ್ಜರಿ ಲಾಭವನ್ನು ತಂದು ಕೊಟ್ಟಿರುತ್ತದೆ. ಆದರೆ ಈ ರೀತಿಯ ಟಾಪಿಕ್‌ಗಳಿಗೆ ಯಾವಾಗಲೂ ಮಾರುಕಟ್ಟೆ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮುಂದೆ ಬೀಳಲುಬಹುದು. ಆದರೆ ಜನ ಬದಲಾಗುವವರೆಗೂ ಈ ಟಾಪಿಕ್‌‌ಗೆ ಟಿಆರ್‌‌ಪಿ ಮಾರುಕಟ್ಟೆಯಲ್ಲಿ ಯಾವಾಗಲೂ ಭರ್ಜರಿ ಬೇಡಿಕೆ ಇದ್ದೆ ಇರುತ್ತದೆ.
ಚಾನೆಲ್‌‌ಗಳ ಕೆಟ್ಟ ಕಾರ್ಯಕ್ರಮಗಳನ್ನು ಹೇಗೆ ಭಯಂಕರ ಪದಗಳಿಂದ ಟೀಕಿಸುತ್ತೀರೋ ಅದೇ ರೀತಿಯಾಗಿ ವಾಹಿನಿಗಳ ಉತ್ತಮ ಕಾರ್ಯಕ್ರಮದ ಬಗ್ಗೆ ನೀವು ಬರೆಯುವುದಿಲ್ಲ ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡುವುದಿಲ್ಲ ಯಾಕೆ? ಉತ್ತಮ ಕಾರ್ಯಕ್ರಮಗಳ ವಿಡಿಯೋವನ್ನು ನೋಡುವುದಿಲ್ಲ ಯಾಕೆ? ಈ ಪ್ರಶ್ನೆಗಳನ್ನು ಕೇಳಿದರೆ ಉತ್ತರ ಕೊಡುವವರ ಸಂಖ್ಯೆ ತುಂಬಾ ಕಡಿಮೆ.
ಈಗ ನಮ್ಮ ಬರವಣಿಗೆಯನ್ನು ಮುಗಿಸುವ ಸಮಯ. ಈ ಮೇಲೆ ಟಿಆರ್‌ಪಿಗೆ ಸಂಬಂಧಪಟ್ಟಂತೆ ಹೇಳಿರುವ ಸಣ್ಣ ವಿಚಾರ. ಪಬ್ಲಿಕ್‌ ಟಿವಿ ಮುಖ್ಯಸ್ಥರಾದ ಎಚ್‌.ಆರ್‌.ರಂಗನಾಥ್ ಸರ್‍ ಅವರು ಚೆಕ್‌ಬಂದಿಯಲ್ಲಿ ಟಿಆರ್‌ಪಿ ವಿಚಾರ ಚರ್ಚೆ ನಡೆಸಿ ಜನರಿಗೆ ಈ ಹಿಂದೆಯೇ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ವೆಂಕಟ್‌ ಸೀಸನ್‌‌ಲ್ಲಿ ಈ ಚರ್ಚೆ ನಡೆದಿದ್ದು ಟಿಆರ್‌ಪಿಯನ್ನು ಹೇಗೆ ಅಳೆಯುತ್ತಾರೆ? ಯಾವ ಕಾರ್ಯಕ್ರಮಗಳಿಗೆ ಎಷ್ಟೆಷ್ಟು ಟಿಆರ್‌ಪಿ ಬರುತ್ತದೆ? ಚಾನೆಲ್‌‌ಗಳ ಸಂಕಟ ಏನು? ಜನ ಏನು ಮಾಡಬೇಕು? ಇತ್ಯಾದಿ ಮಾಹಿತಿಗಳನ್ನು ವಿವರವಾಗಿ ವಿವರಿಸಿದ್ದು ಈ ಕೊಂಡಿಯನ್ನು https://goo.gl/RN9N59 ಕ್ಲಿಕ್‌ ಮಾಡಿದರೆ ವೀಕ್ಷಿಸಬಹುದು.
ಅಷ್ಟೇ ಆದರೂ ನಾವು ದೊಡ್ಡವರು ಅಲ್ಲವೇ ಅಲ್ಲ. ರಿಮೋಟ್‌ ಕಂಟ್ರೋಲ್‌‌‌ ಇರುವುದು ನಿಮ್ಮ ಕೈಯಲ್ಲಿ. ಯಾವುದು ನಿಮ್ಮ ದೃಷ್ಟಿಯಲ್ಲಿ ಕೆಟ್ಟದು ಅಂತ ಅನಿಸುತ್ತದೋ ಕೂಡಲೇ ರಿಮೋಟ್‌ ಕಂಟ್ರೋಲ್‌ನಲ್ಲಿ‌ ಒಂದೊಂದು ನಂಬರ್‌ ಬದಲಾಯಿಸಿದ್ರೆ ಆಯಿತಪ್ಪ ಅರ್ಧ ಸಮಸ್ಯೆ ಅಲ್ಲೇ ಪರಿಹಾರ ಆಗುತ್ತದೆ. ಆದರೆ ದುರಂತ ಏನೆಂದರೆ ಬಹಳಷ್ಟು ಜನ ವೀಕ್ಷಿಸಿಕೊಂಡೆ ಕಾರ್ಯಕ್ರಮದ ಬಗ್ಗೆ ಬೈತಾರೆ ಇವರಿಗೆ ಏನು ಹೇಳೋಣ?
ಟಿಆರ್‌ಪಿ ಬಗ್ಗೆ ಯಾರು ಬೇಕಾದರೂ ಮಾತನಾಡಬಹುದು. ಈ ಟಿಆರ್‌ಪಿ ವಿಚಾರ ಒಂದು ಅಕ್ಷಯ ಪಾತ್ರೆ ಇದ್ದಂತೆ. ಇಲ್ಲಿ ಒಂದು ಅಗಳು ಅನ್ನ ಇದರಲ್ಲಿ ಸಿಗುವುದಿಲ್ಲ. ಕೈ ಹಾಕಿದ್ರೆ ಮೃಷ್ಟಾನ್ನ ಭೋಜನಕ್ಕೆ ಆಗುವಷ್ಟು ಆಹಾರ ಸಿಗುತ್ತದೆ. ಹೀಗಾಗಿ ಟಿಆರ್‌ಪಿ ಬಗ್ಗೆ ಬೆಳಗ್ಗೆಯಿಂದ ಸಂಜೆವರೆಗೆ ಚರ್ಚೆ ಮಾಡಿದ್ರೂ ನಮ್ಮ ಜ್ಞಾನ ವೃದ್ಧಿಸಬಹುದೇ ಹೊರತು ಅಂತಿಮವಾಗಿ ಯಾರದ್ದು ಸರಿ ಯಾರದ್ದು ತಪ್ಪು ಎಂದು ತೀರ್ಪು ನೀಡಲು ಸಾಧ್ಯವಿಲ್ಲ.
ಕೊನೆಯಲ್ಲಿ ಈರ್ ದಾನೆ ಇದೇನ್ ತೂಪಿನಿ.
ಏರೆಗಾವುಯೇ ಈ ಚಾನೆ‌ಲ್‌ ಕಿರಿಕಿರಿ.... ಚಂದನ, ಡಿಡಿ ನ್ಯಾಷನಲ್‌ ಉಂಡು.... ರಗಳೆ ಇಜ್ಜಿ.....


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆಂಧ್ರ ಪ್ರವಾಸ ಕಥನ - ಲೇಪಾಕ್ಷಿ ದೇವಾಲಯ

ತಮಿಳುನಾಡು ಬೈಕ್ ಟ್ರಿಪ್ ಭಾಗ -2 ಹೊಗೇನಕಲ್ ಪ್ರವಾಸ ಕಥನ

ಸಿದ್ಧವನ ಗುರುಕುಲದ ಸವಿನೆನಪುಗಳು....