ಯೆರ್ಕಾಡ್ ಮತ್ತು ಹೊಗೇನಕಲ್ ಬೈಕ್ ಪ್ರವಾಸ

(ಕುಟುಂಬದ ಸ್ನೇಹಿತರಾದ ರಾಕೇಶ್, ಶ್ರೀಶಾಂತ್, ಅಶ್ವಥ್, ಅನಂತ ಪ್ರಜ್ವಲ್, ಅಭಿಷೇಕ್ ಮತ್ತು ನಾನು ತಮಿಳುನಾಡಿನಲ್ಲಿರುವ ಯೆರ್ಕಾಡ್ ಮತ್ತು ಹೊಗೇನಕಲ್ ಬೈಕ್ ನಲ್ಲಿ ಹೋಗಿದ್ವಿ. ಮುಂದೆ ಯಾರಾದರೂ ಇಲ್ಲಿಗೆ ಪ್ರವಾಸ ಹೋಗಲು ಪ್ಲಾನ್ ಹಾಕಿದ್ರೆ ಅವರಿಗೆ ನೆರವಾಗಬಹುದು ಎನ್ನುವ ಉದ್ದೇಶದಿಂದ ಈ ಪ್ರವಾಸ ಕಥನ ಬರೆದಿದ್ದೇನೆ. ಜೊತೆಗೆ ಕೆಲ ಭಯಂಕರ ಅನುಭವಗಳು ಅಗಿದೆ.ಅವುಗಳನ್ನು ಇಲ್ಲಿ ಸೇರಿಸಿದ್ದೇನೆ. ಸ್ವಲ್ಪ ದೀರ್ಘವಾಗಿದೆ.)
ಗಂಗಾವತಿ ಪ್ರಾಣೇಶ್ ಅವರು ಹಾಸ್ಯ ಕಾರ್ಯಕ್ರಮದಲ್ಲಿ ಕೋಶ ಓದಬೇಕು. ದೇಶ ಸುತ್ತಬೇಕು ಅಂತ ಹೇಳ್ತಾ ಇರ್ತಾರೆ. ವಿದ್ಯಾರ್ಥಿಗಳಾಗಿದ್ದಾಗ ನಾವು 'ಸಿಕ್ಕಾಪಟ್ಟೆ' ಕೋಶ ಓದಿದ್ದರಿಂದ ಸುತ್ತಲು ಆಗಿರಲಿಲ್ಲ. ಹೀಗಾಗಿ ಈಗ ದೇಶ ಸುತ್ತುವ ಸಲುವಾಗಿ ನಾವು ಬೈಕಿನಲ್ಲಿ ತಮಿಳುನಾಡು ಸುತ್ತುವ ಪ್ಲಾನ್ ಮಾಡಿದ್ವಿ. ಆದರೆ ಅದಕ್ಕೆ ಮುಹೂರ್ತ ಕೂಡಿಬಂದಿರಲಿಲ್ಲ. ಕೊನೆಗೆ ಈ ಮುಹೂರ್ತ ಕೂಡಿಬಂತು. ಯೆರ್ಕಾಡ್ ಮತ್ತು ಹೊಗೆನಕಲ್ ಟ್ರಿಪ್ ಹೋಗುವ ಪ್ಲಾನ್ ರೆಡಿ ಮಾಡಿದೆವು.
ಬೆಳಗ್ಗೆ ಬೇಗನೇ ಬೆಂಗಳೂರು ಬಿಟ್ಟು ಯೆರ್ಕಾಡ್ ತಲಪುವುದು. ಅಲ್ಲಿರುವ ಪ್ರವಾಸಿ ತಾಣಗಳನ್ನು ಸಂಜೆ ನೋಡಿ ರಾತ್ರಿ ಅಲ್ಲಿಯೇ ಉಳಿದು ಮರುದಿನ ಹೊಗೇನಕಲ್ ಗೆ ಬರೋದು ಇದು ನಮ್ಮ ಪ್ಲಾನ್. ಈ ಪ್ಲಾನ್ ಪ್ರಕಾರವಾಗಿ ಪ್ರಜ್ವಲ್ ನಾವು ನಿಗದಿಪಡಿಸಿದ 'ಸಮಯ'ಕ್ಕೆ ಸರಿಯಾಗಿ ಬಂದ ಕಾರಣ ಬೆಳಗ್ಗೆ ಏಳು ಗಂಟೆಗೆ ಎಲೆಕ್ಟ್ರಾನಿಕ್ ಸಿಟಿ ಟೋಲ್ ಗೇಟ್ ನಿಂದ ಯೆರ್ಕಾಡಿಗೆ ಪ್ರಯಾಣ ಆರಂಭಿಸಿದೆವು.
ಎಲೆಕ್ಟ್ರಾನಿಕ್ ಸಿಟಿ ಟೋಲ್ ಗೇಟ್ ನಿಂದ 220ಕಿ.ಮೀ ದೂರದಲ್ಲಿರುವ ಯೆರ್ಕಾಡ್‍ಗೆ ಹೋಗಲು ಎರಡು ದಾರಿಗಳಿವೆ. ಒಂದು ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಸೇಲಂ ವರೆಗೆ ಹೋಗಿ ಅಲ್ಲಿಂದ ಯೆರ್ಕಾಡ್‍ಗೆ ಹೋಗುವುದು. ಸಾಧಾರಣವಾಗಿ ಕಾರಿನಲ್ಲಿ ಹೋಗುವ ಮಂದಿ ಈ ದಾರಿಯನ್ನು ಹೆಚ್ಚು ಬಳಸುತ್ತಾರೆ. ಎರಡನೇ ದಾರಿ ಕರೀಂ ಮಂಗಲಂ-ಮೊರಾಪ್ಪುರ್- ಹರೂರ್- ಕುಪ್ಪನೂರು ಮೂಲಕ ಯೆರ್ಕಾಡ್ ತಲುಪುವುದು.
ಬೈಕ್ ನಲ್ಲಿ ಹೋಗುವ ಕಾರಣ ನಾವು ಎರಡನೇ ಮಾರ್ಗವನ್ನು ಆರಿಸಿಕೊಂಡೆವು. ಈ ಮಾರ್ಗ ಸುಮಾರು 100 ಕಿ.ಮೀ ರಾಷ್ಟ್ರೀಯ ಹೆದ್ದಾರಿಯಲ್ಲೇ ಹೋಗುತ್ತದೆ. ನಂತರ ಧರ್ಮಪುರಿ ಯಿಂದ ಎರಡು ಕಿ.ಮೀ ಮುಂದಕ್ಕೆ ಹೋಗಿ ಅಲ್ಲಿ ಎಡಕ್ಕೆ ತಿರುಗಿದಾಗ ರಾಜ್ಯ ಹೆದ್ದಾರಿ ಸಿಗುತ್ತದೆ. ಯೆರ್ಕಾಡ್‍ಗೆ ಹೋಗಲು ಈ ರಸ್ತೆಯನ್ನು ನೀವು ಆರಿಸಿಕೊಂಡಿದ್ದರೆ ಪೆಟ್ರೋಲ್ ಮೊದಲೇ ತುಂಬಿಸಿಕೊಳ್ಳಿ. 70 ಕಿ.ಮೀ ಯಾವುದೇ ಪೆಟ್ರೋಲ್ ಸಿಗಲ್ಲ.
ಈ ರಸ್ತೆ ಕಲ್ರಯಣ್ ಅರಣ್ಯದ ಮೂಲಕ ಹಾದು ಹೋಗುತ್ತೆ. ಕಾರಿನಲ್ಲಿ ಈ ಮಾರ್ಗದಲ್ಲಿ ಹೋಗಲು ಸಾಧ್ಯವಿಲ್ಲ ಎಂದು ನಾನು ಹೇಳಲಾರೆ. ಅದರೆ ಸ್ವಲ್ಪ ರಿಸ್ಕ್ ಜಾಸ್ತಿ. ದೊಡ್ಡ ದೊಡ್ಡ ಗುಂಡಿಗಳು, ಡಾಂಬರ್ ಕಿತ್ತು ಹೋದ ರಸ್ತೆ ಇಲ್ಲಿದೆ. ಕಾಫಿ ತೋಟ, ಅರಣ್ಯದಲ್ಲಿ ಹಾದು ಹೋಗುವ ಈ ರಸ್ತೆಯಲ್ಲಿ ಬಸ್ ಸೌಲಭ್ಯ ಇಲ್ಲ. ಲಾರಿ ಸಂಚಾರ ಸಹ ವಿರಳ. ತುಂಬಾ ತಿರುವುಗಳಿರುವ ಘಟ್ ಸೆಕ್ಷನ್ ನಲ್ಲಿ ಒಂದು 20 ಕಿ.ಮೀ. ದೂರವನ್ನು 1, 2, 3 ಗೇರ್ ನಲ್ಲಿ ಆಟ ಆಡಿ ಕ್ರಮಿಸಬೇಕಾಗುತ್ತದೆ.
ಬೆಳಗ್ಗೆ ಏಳು ಗಂಟೆಗೆ ನಾವು ಪ್ರಯಾಣ ಆರಂಭಿಸಿದರೂ ಬೆಳಗ್ಗೆಯ ತಿಂಡಿ, 'ಪ್ರಕೃತಿ' ಸೌಂದರ್ಯ ವೀಕ್ಷಿಸಲು ಪ್ರತಿ 50 ಕಿ.ಮೀಗೆ ಬ್ರೇಕ್, ಆ ಬ್ರೇಕ್‍ನಲ್ಲಿ ಫೋಟೋ ಸೆಶನ್, ಮಧ್ಯೆ ಟೀ ವಿರಾಮ, ಘಾಟಿ ರಸ್ತೆಯಲ್ಲಿ ಫೋಟೋ ಸೆಶನ್ ನಿಂದಾಗಿ ಮಧ್ಯಾಹ್ನ 1 ಗಂಟೆಗೆ ಯೆರ್ಕಾಡ್ ನಲ್ಲಿರುವ ಆಕಾರ್ಶ್ ರೆಸಾರ್ಟ್ ತಲುಪಿದೆವು.
ಸಮುದ್ರ ಮಟ್ಟದಿಂದ 4,970 ಅಡಿ ಎತ್ತರ ದಲ್ಲಿರುವ ಯೆರ್ಕಾಡ್ ನಲ್ಲಿ ಮಳೆಗಾಲದಲ್ಲಿ ಮಳೆ ಜಾಸ್ತಿ, ಚಳಿಗಾಲದಲ್ಲಿ ಬೆಳಗ್ಗೆ ಮತ್ತು ರಾತ್ರಿ ಚಳಿ ಸ್ವಲ್ಪ ಜಾಸ್ತಿ, ಸೆಪ್ಟಂಬರ್, ಅಕ್ಟೋಬರ್ ನಲ್ಲಿ ಬೆಳಗ್ಗೆ 10 ಗಂಟೆಯವರೆಗೂ ಮಂಜು ಸುರಿಯುತ್ತಿರುತ್ತದೆಯಂತೆ. ಪ್ರವಾಸಿ ವೆಬ್ ಸೈಟ್ ಗಳ ಪ್ರಕಾರ ಹನಿಮೂನಿಗೆ ಇದು ಬೆಸ್ಟ್ ಸ್ಥಳವಂತೆ. ಇಂತಿಪ್ಪ ಈ ಸ್ಥಳದಲ್ಲಿ ಸಿಂಗಲ್ ಗಳಾದ ನಾವು ಲ್ಯಾಂಡ್ ಆದೆವು.
ಫ್ರೆಶ್ ಅಪ್ ಆಗಿ ನಮ್ಮ ಪ್ರಯಾಣ ಹೋಟೆಲ್ ನತ್ತ ಹೋಯಿತು. ಮೆನುಗಳನ್ನು ನೋಡುವಾಗಲೇ ಪ್ರವಾಸಿಗರ ಜೇಬಿಗೆ ಭರ್ಜರಿ ಕತ್ತರಿ ಅನ್ನೋದು ಗೊತ್ತಾಯಿತು. ಆದರೆ ಏನು ಮಾಡುವುದು ಅನಿವಾರ್ಯ. ಮಧ್ಯಾಹ್ನದ ಬ್ಯಾಟಿಂಗ್ ಮುಗಿಸಿದ ಬಳಿಕ ಮೂರು ಕಿ.ಮೀ ದೂರದಲ್ಲಿರುವ ಕಿಳಿಯೂರ್ ಜಲಪಾತಕ್ಕೆ ಪ್ರಯಾಣ ಸಾಗಿತು.
ಈ ಜಲಪಾತ ವೀಕ್ಷಿಸಲು ಒಂದು ಕಿ.ಮೀ ನಡೆಯಬೇಕು. ಅದರಲ್ಲೂ ಒಂದು ಅರ್ಧ ಕಿ.ಮೀ ಮೆಟ್ಟಿಲುಗಳ ಮೂಲಕವೇ ಇಳಿಯಬೇಕು. ನನ್ನಂಥ young and energetic ಬಾಡಿ ಹೊಂದಿರುವ ವ್ಯಕ್ತಿಗಳಿಗೆ ಇಳಿಯುವುದು ಕಷ್ಟವಾಗಲಾರದು. ಆದರೆ ಸ್ವಲ್ಪ ದಪ್ಪ ಇರೋ ಮಂದಿಗೆ ಇಳಿಯುವುದು ಸುಲಭವಾದರೂ ಮತ್ತೆ ಹತ್ತಬೇಕಾದರೆ ಕಷ್ಟ ಪಡಬೇಕಾದಿತು. ಅದರೆ ಅದಕ್ಕೆ ಚಿಂತೆ ಮಾಡುವ ಅಗತ್ಯ ಇಲ್ಲ. ಮೆಟ್ಟಿಲುಗಳ ಎರಡು ಬದಿಗಳಲ್ಲಿ ಕಬ್ಬಿಣದ ಸ್ಟೇರ್ ಕೇಸ್ ಹಾಕಲಾಗಿದೆ. ಸೋ, ಅದನ್ನು ಹಿಡಿದುಕೊಂಡು 'ಲೀಲಾಜಾಲ'ವಾಗಿ ಏರಬಹುದು.
ಯೆರ್ಕಾಡ್ ಅಸುಪಾಸು ಬಹಳಷ್ಟು ಪ್ರವಾಸಿ ತಾಣಗಳಿದ್ದು,(ಈ ತಾಣಗಳ ಮಾಹಿತಿ ಇರುವ ಫೋಟೋ ಅಪ್ಲೋಡ್ ಮಾಡಿದ್ದೇನೆ) ನಂತರ ನಾವು ಪಗೋಡಾ ಪಾಯಿಂಟ್ ಹೋಗಲು ಬೈಕ್ ಏರಿದ್ವಿ. ನಾವು ಆರು ಬೈಕಿನಲ್ಲಿ ಬಂದಿದ್ದರೂ ಅಲ್ಲಿ ಮೂರು ಬೈಕ್ ನಲ್ಲಿ ಸುತ್ತಾಟ ಆರಂಭಿಸಿದೆವು. ಪಗೋಡಾ ಪಾಯಿಂಟ್ ಗೆ ಹೋಗಬೇಕಾದರೆ ಯೆರ್ಕಾಡ್ ಸರ್ಕಲ್ ಗೆ ಬಂದು ನಂತರ ಎಡಕ್ಕೆ ತಿರುಗಿ ಬೆಟ್ಟ ಏರಬೇಕು. ಹೀಗಾಗಿ ನಾವು ಬೈಕಿನಲ್ಲಿ ಜೋಶ್ ನಲ್ಲಿ ಬರುತ್ತಿದ್ದಾಗ ಪೊಲೀಸರು ಸಿಗಬೇಕೇ?
ಪೊಲೀಸರನ್ನು ನೋಡಿ ನಮ್ಮ ಉತ್ಸಾಹ ಮಂಜುಗಡ್ಡೆಯ ನೀರಿನಂತೆ ಕರಗಿಹೋಗಿ‌ ಸರ್ಕಲ್ ಸ್ವಲ್ಪ ಹಿಂದೆ ಬೈಕ್ ಪಾರ್ಕ್ ಮಾಡಿದೆವು. ಈಗ ಏನ್ ಮಾಡುವುದು ತಿಳಿಯದೇ ಬೆಂಗಳೂರಿನವರಾದ ನಾವು ಲೆಕ್ಕ ಹಾಕಲು ಆರಂಭಿಸಿದೆವು. ಮುಂದುಗಡೆ ಸವಾರರಿಗೆ ಮಾತ್ರ ಹೆಲ್ಮೆಟ್ ಕಡ್ಡಾಯ, ಸೋ ಮೂರು ಮಂದಿಗೆ ದಂಡ ಹಾಕಿದ್ರೆ 900 ರೂ. ಒಂದು ವೇಳೆ ಇಲ್ಲಿ ಕಾಣಿಕೆ ನೀಡಿದ್ರೂ ಮುಂದೆ ಮತ್ತೆ ದೇಣಿಗೆ ನೀಡುವಂತೆ ಪೊಲೀಸರು ಅಡ್ಡ ಹಾಕಿದ್ರೆ ಎನ್ನುವ ಮತ್ತೊಂದು ಪ್ರಶ್ನೆಯೂ ಹುಟ್ಟಿಕೊಂಡಿತು. ನಮ್ಮೆಲ್ಲರ ತಲೆ ಗಿರ್ರನೆ ತಿರುಗಿ ಲೇಟ್ ಆದ್ರೂ ಪರ್ವಾಗಿಲ್ಲ ಒಂದು ಕಿ.ಮೀ ದೂರದಲ್ಲಿ ರೂಮಿಗೆ ಹೋಗಿ ಹೆಲ್ಮೆಟ್ ತರುವ ನಿರ್ಧಾರ ಮಾಡಲಾಯಿತು.
ನಾವು ಮಧ್ಯಾಹ್ನ ಬಂದಾಗ ಪೊಲೀಸರು ಯಾರು ಇರಲಿಲ್ಲ. ಅಷ್ಟೇ ಅಲ್ಲದೇ ಸವಾರರು ಹೆಲ್ಮೆಟ್ ಹಾಕದೇ ಹೋಗುತ್ತಿದ್ದರು. ಹೀಗಾಗಿ ನಾವು ಹೆಲ್ಮೆಟ್ ಹಾಕದೇ ಬೈಕ್ ಏರಿದ್ದೆವು. ನಾವು ಅಲ್ಲೇ ನಿಂತಿದ್ದಾಗ ಯೆರ್ಕಾಡ್ ಪೊಲೀಸರ ತಮಿಳುನಾಡು ಪ್ರೇಮವೂ ಬಹಿರಂಗವಾಯಿತು. ಪೊಲೀಸರು ಹೆಲ್ಮೆಟ್ ಹಾಕದೇ ಇರುವ TN ಬೈಕ್ ಗಳು ಬಿಟ್ಟರೆ KA, KL ಬೈಕ್ ಗಳನ್ನು ಅಡ್ಡ ಹಾಕುವುದು ಗೊತ್ತಾಯಿತು. ಒಟ್ಟಿನಲ್ಲಿ ಯಾವುದೇ ನಗರ, ಅದರಲ್ಲೂ ಹೊರ ರಾಜ್ಯಕ್ಕೆ ಬೈಕಿನಲ್ಲಿ ಹೋದಾಗ ಅಲ್ಲಿ ಹೆಲ್ಮೆಟ್ ಧರಿಸಿಯೇ ಸುತ್ತಾಡಬೇಕು ಎನ್ನುವ ಪಾಠವನ್ನು ನಾವು ಕಲಿತೆವು.
ಕೊನೆಗೆ ಇಬ್ಬರು ಆಟೋದಲ್ಲಿ ಹೋಗಿ ನಂತರ ಬೈಕಿನಲ್ಲಿ ಹೆಲ್ಮೆಟ್ ತಂದ ಬಳಿಕ ಪಗೋಡ ಪಾಯಿಂಟ್ ವೀಕ್ಷಿಸಲು ತೆರಳಿದೆವು. ಅದನ್ನು ವೀಕ್ಷಿಸಿದ ಬಳಿಕ ಕಿಲಿಯೂರ್ ಗ್ರಾಮದಲ್ಲಿರುವ ಮತ್ತೊಂದು ವ್ಯೂ ಪಾಯಿಂಟ್ ನೋಡಲು ಹೋದೆವು. ಬೈಕಿನಲ್ಲಿ ಆದರೆ ನೀವು ಕೊನೆಯವರೆಗೆ ಹೋಗಬಹುದು. ಆದರೆ ಮಣ್ಣಿನ ರಸ್ತೆ ಅಷ್ಟು ಚೆನ್ನಾಗಿ ಇಲ್ಲದ ಕಾರಣ ಕಾರಿನಲ್ಲಿ ಹೋದರೆ ಅರ್ಧದ ವರೆಗೆ ಹೋಗಿ ನಂತರ ಪಾರ್ಕ್ ಮಾಡಿ ಅರ್ಧ ಕಿ.ಮೀ ನಡೆದು ಸ್ಥಳವನ್ನು ತಲುಪಬೇಕಾಗುತ್ತದೆ.
ಊರಿನವರೇ ಆಗಿದ್ದ ಕಾರಣ ನಾವು ತುಳು ಭಾಷೆಯಲ್ಲೇ ಮಾತನಾಡುತ್ತಿದ್ದೆವು. ಈ ಸ್ಥಳ ವೀಕ್ಷಿಸುತ್ತಿದ್ದಾಗ ಅಲ್ಲಿಗೆ ದಂಪತಿ ಆಗಮಿಸಿದ್ರು. ಈ ಸಂದರ್ಭದಲ್ಲಿ ಪತಿ, ನೀವು ಊರಿನವರಾ, ನಾನು ಕುಂದಾಪುರದವನು. ನೀವು ಮಧ್ಯಾಹ್ನ ಹೋಟೆಲ್ ನಲ್ಲಿ ಮಾತನಾಡುವುದನ್ನು ನೋಡಿದಾಗ ಗೊತ್ತಾಯಿತು ಎಂದು ಕೇಳಿದರು. ಅಂತು ತುಳುವಿನಿಂದಾಗಿ ಅವರ ಪರಿಚಯ ಆಗಿ ಆ ಸ್ಥಳಕ್ಕೆ ಗುಡ್ ಬೈ ಹೇಳಿ ಮತ್ತೆ ಯೆರ್ಕಾಡ್ ಗೆ ಬಂದಾಗ ಸಂಜೆ 6.30.
ನಗರದ ಮಧ್ಯದಲ್ಲೇ ದೊಡ್ಡ ಕೆರೆ ಇದೆ. ಇದಕ್ಕೆ ಭೇಟಿ ನೀಡಬೇಕು ಎನ್ನುವ ಪ್ಲಾನ್ ಇತ್ತು. ಇಲ್ಲಿ ಬೋಟಿಂಗ್ ಮಾಡಬಹುದು.ಆದರೆ ಸಮಯದ ಅಭಾವ ಮತ್ತು ಸಂಜೆಯೇ ಕತ್ತಲು ಕವಿದ ಕಾರಣ ಈ ಭೇಟಿಯನ್ನು ಕ್ಯಾನ್ಸಲ್ ಮಾಡಿ ರೆಸಾರ್ಟ್ ಸೇರಿದೆವು. ಹೋಟೆಲ್ ಆಹಾರ ನಮ್ಮ ನಿರೀಕ್ಷೆಯ ಮಟ್ಟದಲ್ಲಿ ಇರದೇ ಇದ್ದಿದ್ದು ಮತ್ತು ಸಿಕ್ಕಾಪಟ್ಟೆ ರೇಟ್ 'ಕಡಿಮೆ' ಇರುವುದನ್ನು ನೋಡಿ ಇದು ನಮ್ಮ ರೇಂಜಿಗೆ ಆಗದ ಕಾರಣ ರೆಸಾರ್ಟ್ ನಲ್ಲೇ ರಾತ್ರಿ ಮೃಷ್ಟಾನ್ನ ಸಸ್ಯಾಹಾರ ಭೋಜನ ಮಾಡಿ Sleeping Mode ಗೆ ಜಾರಿದೆವು.
ನಮ್ಮಲ್ಲಿ ಕೆಲವರಿಗೆ ಬಿಗ್ ಬಾಸ್ ನೋಡುವ ಹುಚ್ಚು ಇತ್ತು. ಆದ್ರೆ ಏನ್ ಮಾಡುವುದು ರೂಮ್ ನಲ್ಲಿರುವ ಕೇಬಲ್ ಸಂಪರ್ಕದಲ್ಲಿ ಉದಯ ಬಿಟ್ಟರೆ ಬೇರೆ ಯಾವುದೇ ಕನ್ನಡ ಟಿವಿ ಇಲ್ಲವೇ ಇಲ್ಲ. ಆದರೂ ನಮಗೆ ಸಮಸ್ಯೆ ಆಗಲೇ ಇಲ್ಲ. ಜಿಯೋಗೆ ಅಲ್ಲಿ ಜೀವ ಇದ್ದ ಕಾರಣ ಜಿಯೋ ಟಿವಿ ಮೂಲಕ ಬ್ಲೂ ಟೂತ್ ಸ್ಪೀಕರ್ ಹಾಕಿ ಎಲಿಮಿನೇಶನ್ ರೌಂಡ್ ನೋಡಿದೆವು. 'Home Theater' ನಲ್ಲಿ ನೋಡಿದ ಅನುಭವ ಆಯ್ತು!.


















ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆಂಧ್ರ ಪ್ರವಾಸ ಕಥನ - ಲೇಪಾಕ್ಷಿ ದೇವಾಲಯ

ತಮಿಳುನಾಡು ಬೈಕ್ ಟ್ರಿಪ್ ಭಾಗ -2 ಹೊಗೇನಕಲ್ ಪ್ರವಾಸ ಕಥನ

ಸಿದ್ಧವನ ಗುರುಕುಲದ ಸವಿನೆನಪುಗಳು....