ನಾನು ಓದಿದ ಶಾಲೆಗೆ 100ರ ಸಂಭ್ರಮ!


(ಡಿಸೆಂಬರ್  28, 2014ರಲ್ಲಿ ಫೇಸ್ ಬುಕ್ ನಲ್ಲಿ ಪ್ರಕಟಿಸಿದ ಪೋಸ್ಟ್)
ನಾನು ಕಲಿತ ಸಂಪಾಜೆಯ ಪ್ರಾಥಮಿಕ ಶಾಲೆ ಈ ವರ್ಷ ಶತಮಾನೋತ್ಸವ ಸಂಭ್ರಮದಲ್ಲಿದೆ. ನೂರರ ಸಂಭ್ರಮದಲ್ಲಿರುವ ಈ ಶಾಲೆಯಲ್ಲಿ ಕಲಿತ 89ನೇ ಬ್ಯಾಚ್ ನಮ್ಮದು. ಸ್ಟುಡೆಂಟ್‌ ಲೈಫ್‌ ಇಸ್ ಗೋಲ್ಡನ್ ಲೈಫ್ ಅಂತ ಹೇಳುತ್ತಾರೆ. ಈ ವಾಕ್ಯಕ್ಕೆ ಕರೆಕ್ಟ್ ಆಗಿ ಸೂಟ್ ಆಗಿ ನನ್ನ ಲೆಕ್ಕದಲ್ಲಿ ಪ್ರಾಥಮಿಕ ಶಾಲೆ ಲೈಫು. ಇಲ್ಲಿ ಆಗುವಷ್ಟು ಸಿಹಿ ನೆನಪುಗಳು ಬೇರೆ ಎಲ್ಲಿಯೂ ಆಗುವುದಿಲ್ಲ.
ನಾವು ಮಾಡುವ ಕಿತಾಪತಿಗಳು, ಅದಕ್ಕೆ ಶಿಕ್ಷಕರ ಪೆಟ್ಟುಗಳು ಇದು ಒಂದು ಕಡೆಯಾದರೆ, ಆಟಗಳು,ಸಾಂಸ್ಕೃತಿಕ ಕಾರ್ಯಕ್ರಮಗಳು,ಪ್ರವಾಸ ... ಹೀಗೆ 'ಗೋಲ್ಡನ್ ಲೈಫು' ಪಟ್ಟಿ ಮುಂದುವರೆಯುತ್ತಾ ಹೋಗುತ್ತದೆ. ನಮ್ಮ ಸಮಯದಲ್ಲಿ ಈಗ ಇರುವಂತೆ ಇರುವ ಅಂಥ ಕಠಿಣ ನಿಯಮಗಳೇನು ಇರಲಿಲ್ಲ. ತಪ್ಪು ಮಾಡಿದ್ರೆ ಪೆಟ್ಟು ಗ್ಯಾರಂಟಿ. ನನಗೆ ಈಗಲೂ ನೆನಪಿದೆ. 'ಸಮುದಾಯದತ್ತ ಶಾಲೆ' ಆರಂಭಗೊಂಡದ್ದು ನಮ್ಮ ಅವಧಿಯಲ್ಲಿ. ಈ ಸಮಯದಲ್ಲಿ ತರಗತಿ ಟೀಚರ್‍ ಗಳೊಂದಿಗೆ ಮಧ್ಯಾಹ್ನ ೨.೩೦ರಿಂದ ಸಾಧಾರಣ ೪.೩೦ರವರೆಗೆ ಪೋಷಕರ ಮಕ್ಕಳೊಂದಿಗೆ ಮಾತುಕತೆ. ಹುಡುಗರ ಪೋಷಕರಂತೂ "ಟೀಚರ್‍ ನೀವು ಹೊಡೆಯುವುದು ಕಡಿಮೆಯಾಗಿದೆ. ಸರಿಯಾಗಿ ಹೊಡೆಯಿರಿ, ನೀವು ಏನು ಚಿಂತೆ ಮಾಡಬೇಡಿ. ಮನೆಯಲ್ಲಿ ನಮ್ಮ ಮಾತು ಕೇಳುವುದೇ ಇಲ್ಲ' ಎಂದು ಪೋಷಕರೇ ಟೀಚರ್‌ ಗಳಿಗೆ ಹೊಡೆಯುವಂತೆ ಉತ್ತೇಜನ ನೀಡುತ್ತಿದ್ದರು. ಈಗ ಇದು ಉಲ್ಟಾ ಆಗಿದೆ..!
ಶಾಲೆಯ ವಾರ್ಷಿಕೋತ್ಸವ ಅಂದರೆ ಮಕ್ಕಳಿಗೆ ಮಾತ್ರ ಸಂಭ್ರಮ ಅಲ್ಲ. ಹಳೆಯ ವಿದ್ಯಾರ್ಥಿಗಳಿಗೂ ಸಂಭ್ರಮ. ಮಧ್ಯರಾತ್ರಿಯವರೆಗೂ ಶಾಲೆಯ ವಿದ್ಯಾರ್ಥಿಗಳಿಂದ ಕಾರ್ಯಕ್ರಮವಾದರೆ ಬಳಿಕ ಬೆಳಗ್ಗೆಯವರೆಗೂ ಹಳೆಯ ವಿದ್ಯಾರ್ಥಿಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮ ಇರುತಿತ್ತು. ಇದಕ್ಕಾಗಿ ಒಂದು ತಿಂಗಳಿನಿಂದಲೇ ಪೂರ್ವ ತಯಾರಿ ಆರಂಭವಾಗುತಿತ್ತು. ಬೆಳಗ್ಗೆ ಎರಡು ಪಿರಿಯಡ್‌ ಆದರೆ ಮತ್ತೆ ಪ್ರಾಕ್ಟೀಸ್ ನಡೆಯುತಿತ್ತು. ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಇಲ್ಲದ ವಿದ್ಯಾರ್ಥಿಗಳಿಗೆ ಗ್ರೌಂಡ್‌ ನಲ್ಲಿರುತ್ತಿದ್ದರೆ, ಸಾಂಸ್ಕೃತಿಕ ಕಾರ್ಯಕ್ರಮಲ್ಲಿ ಇರುವವರಿಗೆ ತರಗತಿಯಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ಯಕ್ಷಗಾನ, ನಾಟಕ, ಕೋಲಾಟ, ನೃತ್ಯ ಪ್ರಾಕ್ಟೀಸ್ ನಡೆಯುತ್ತಿತ್ತು. ಎಲ್ಲಾ ವಿದ್ಯಾರ್ಥಿಗಳಿಗೆ ಅವಕಾಶ ಇತ್ತಾದರೂ ಏಳನೇಯ ತರಗತಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ವೇದಿಕೆಗೆ ಬಂದು ಕಾರ್ಯಕ್ರಮ ನೀಡಲೇಬೇಕೆಂದು ನಮ್ಮ ಟೀಚರ್‍ ಗಳು ಒತ್ತಾಯ ಮಾಡುತ್ತಿದ್ದರು.
ನಾವು ಕಲಿಯುವಾಗ ಇದ್ದ ಶಾಲೆಗೂ ಈಗ ಈ ಇರುವ ಶಾಲೆಗೂ ತುಂಬಾ ಬದಲಾಗಿದೆ. ಸಂಪಾಜೆ ಯಕ್ಷೋತ್ಸವದಿಂದಾಗಿ ಆಟದ ಮೈದಾನ ವಿಸ್ತಾರಗೊಂಡಿದೆ. ನಮ್ಮ ಸಮಯದಲ್ಲಿ ಶಾಲೆಯಲ್ಲಿ ದೈಹಿಕ ಶಿಕ್ಷಕರು ಯಾರು ಇರಲಿಲ್ಲ. ಆದರೆ ದೈಹಿಕ ಶಿಕ್ಷಕರು ಇಲ್ಲದಿದ್ದರೂ ದೈಹಿಕ ಶಿಕ್ಷಕರ ಪಾಠವನ್ನು ಹೇಳಿಕೊಡುತ್ತಿದ್ದವರು ದಾಮೋದರ್‍ ಮಾಸ್ತರ್‍ ಅವರು. ಅವರೇ ಸೂಪರ್‍ ಆಗಿ ಶಟ್ಲ್‌, ಬ್ಯಾಡ್ಮಿಂಟನ್, ಕ್ರಿಕೆಟ್ ಆಡುವ ಮೂಲಕ ನಮಗೆ ಹೇಳಿಕೊಡುತ್ತಿದ್ದರು.
ವಾರ್ಷಿಕ ಕ್ರೀಡಾಕೂಟದ ಸಮಯದಲ್ಲಿ ನನ್ನ ಫೇವರೇಟ್ ಓಟ ಅಡೆತಡೆ ಓಟ. ಯಾಕಂದರೆ ನಮ್ಮ ಶಾಲೆಯ ಕೆಳಗಿನ ಆಟದ ಮೈದಾನ ಚಿಕ್ಕಾದಾಗಿದ್ದರಿಂದ ೨೦೦ ಮೀಟರ್‍ track ಇರಲಿಲ್ಲ. ೧೦೦ ಮೀಟರ್‍ ಮಾತ್ರವೇ ಇತ್ತು.ಓಟದ ಸ್ಪರ್ಧೆಯ ಸಮಯಲ್ಲಿ ನೂರು ಮೀಟರ್‍ ಸುತ್ತಲೂ ಓಡದೇ ಇರುವ ಮಕ್ಕಳು ವೃತ್ತಕಾರದಲ್ಲಿ ಕುಳಿತುಕೊಳ್ಳಬೇಕಿತ್ತು. ಇಲ್ಲೇ ೧೦೦, ೨೦೦, ೪೦೦, ೮೦೦ ಮೀಟರ್‍ ಓಟ ನಡೆಯುತಿತ್ತು.
ಎಲ್ಲ ಅಥ್ಲೆಟಿಕ್ಸ್ ಸ್ಪರ್ಧೆ ಮುಗಿದು ಕೊನೆಗೆ ಅಡೆತಡೆ ಓಟ ನಡೆಯುತಿತ್ತು. ಅದು ಹೇಗೆಂದರೆ ಸಮಾನ ಎತ್ತರದ ಹತ್ತು ಬೆಂಚ್‌ಗಳನ್ನು ಇಟ್ಟು ಈ ಸ್ಪರ್ಧೆ ಆಗುತಿತ್ತು. ತರಗತಿಯ ಘಟಾನುಘಟಿ ಕ್ರೀಡಾಪಟುಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರಕ್ಕಿಂತ ಹೆಚ್ಚು ಬಹುಮಾನ ಬಂದರೆ ಅವರಿಗೆ ಉಳಿದ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಈ ಸ್ಪರ್ಧೆಗೆ ಕಲವೇ ಕೆಲ ಮಂದಿ, ಕಾಲು ಉದ್ದ ಇದ್ದ ಮಕ್ಕಳು ಮಾತ್ರ ಭಾಗವಹಿಸುತ್ತಿದ್ದರು. ಹೀಗಾಗಿ ಈ ಸ್ಪರ್ಧೆ ನನಗೆ ಅನುಕೂಲವಾಗಿ, ನನ್ನ ಶರೀರಕ್ಕೆ ಹೊಂದಿಕೆಯಾದ ಕಾರಣ ನನಗೆ ಬಹುಮಾನ ಬರುತಿತ್ತು. ಶಟ್ಲ್‌ ಬ್ಯಾಡ್ಮಿಂಟನ್ ಮತ್ತು ಅಡೆತಡೆ ಓಟ ಬಿಟ್ಟರೇ ಉಳಿದ ಕ್ರೀಡೆಯಲ್ಲಿ ನಮ್ಮದು ಶೂನ್ಯ ಸಾಧನೆ.
ಇನ್ನು ನಮ್ಮ ಶಾಲೆಯ ಪ್ರವಾಸದ ಬಗ್ಗೆ ಹೇಳಲೇಬೇಕು. ನಾಲ್ಕನೇಯ ತರಗತಿಯ ವಿದ್ಯಾರ್ಥಿಗಳಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಹೆಚ್ಚಾಗಿ ಮಡಿಕೇರಿ ,ಮಂಗಳೂರು, ಅಪರೂಪಕ್ಕೆ ಒಮ್ಮೆ ಮೈಸೂರು ಪ್ರವಾಸ. ಮಕ್ಕಳ ಸಂಖ್ಯೆ ಕಡಿಮೆ ಆದರೆ ಒಂದೇ ದಿನ ಪ್ರವಾಸ. ಮಂಗಳೂರು ಕಡೆ ಆಯೋಜನೆ ಮಾಡಿದರೆ ಮಧ್ಯಾಹ್ನ ಮತ್ತು ರಾತ್ರಿಯ ಊಟ ತೀರ್ಥಕ್ಷೇತ್ರದಲ್ಲಿ ಉಚಿತವಾಗಿ ಆಗುತ್ತದೆ.. ಮಕ್ಕಳಿಗೆ ಖರ್ಚು ಕಡಿಮೆಯಾಗುತ್ತದೆ. ಹೀಗಾಗಿ ಮಂಗಳೂರಿಗೆ ಜಾಸ್ತಿ ಪ್ರವಾಸ. ಕೊಡಗು ಜಿಲ್ಲೆಯ ಗಡಿಯಲ್ಲಿ ನಮ್ಮ ಶಾಲೆ ಇದ್ದದ್ದರಿಂದ ರೈಲು ಬಿಡುವ ಭಾಗ್ಯ ಸಿಕ್ಕಿದರೂ, ನೋಡುವ ಭಾಗ್ಯ ಸಿಗದ ಕಾರಣ ಮಗಳೂರು ರೈಲ್ವೆ ನಿಲ್ದಾಣವು ನಮ್ಮ ಪ್ರವಾಸದ ಸಂದರ್ಭದಲ್ಲಿ ಭೇಟಿ ನೀಡುವ ಒಂದು ಸ್ಥಳವಾಗಿತ್ತು.
ಈ ಪ್ರವಾಸ ಎಂದು ಹೇಳಿದಾಗ ನೆನಪಾಯಿತು. ಪ್ರವಾಸ ದಿನ ನಿಗದಿಯಾದ ಬಳಿಕ ಒಂದು ಚೀಟಿಯಲ್ಲಿ ಪ್ರವಾಸಕ್ಕೆ ಜಯವಾಗಲಿ ಎಂದು ಬರೆಯಲು ಆರಂಭವಾಗುತ್ತದೆ. ಆದರಲ್ಲೂ ಅತಿ ಹೆಚ್ಚು ' ಜೈ' ಎಂದು ಯಾರು ಬರೆದಿದ್ದಾರೆ ಎನ್ನುವುದಕ್ಕೆ ನಮ್ಮಲ್ಲೇ ಬೇರೆ ಆಂತರಿಕ ಸ್ಪರ್ಧೆ ನಡೆಯುತಿತ್ತು. ಈ 'ಜೈ' ಎಂದು ಬರೆಯುವ ಸಂಪ್ರದಾಯ ಯಾವ ಶಾಲೆಯಲ್ಲಿ ಯಾರು ಆರಂಭ ಮಾಡಿದ್ದು ಗೊತ್ತಿಲ್ಲ. ನಮ್ಮ ಶಾಲೆಯಲ್ಲಿ ನಾವು ಇರುವ ವರೆಗೂ ನಿರಂತರವಾಗಿ ಮುಂದುವರೆದಿತ್ತು.
ನಮ್ಮ ಈ ಎಲ್ಲ ಕಿತಾಪತಿಗಳ ನಡುವೆಯೂ ಶಾಲೆಗೆ ಒಂದು ಉತ್ತಮವಾದ ಕೆಲಸ ಮಾಡಲು ನಮ್ಮ ಬ್ಯಾಚ್ ನ ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕಿತ್ತು. ಪ್ರಸ್ತುತ ಶಾಲೆಯ ಮೇಲೆ ಇರುವ ತೆಂಗಿನ ತೋಟ ಆರಂಭವಾದಾಗ ನಾನು ಐದನೇ ತರಗತಿಯಲ್ಲಿದ್ದೆ. ಈ ತೆಂಗಿನ ತೋಟಕ್ಕೆ ಪ್ರತಿದಿನ ಬೆಳಗ್ಗೆ ೮.೩೦ ರಿಂದ ೯. ೧೫ರವರೆಗೆ ಐದು,ಆರು, ಏಳನೇಯ ತರಗತಿ ವಿದ್ಯಾರ್ಥಿಗಳು ನೀರು ಹಾಕಬೇಕಿತ್ತು. ನೀರು ಹಾಕಿಸುವ ಜವಾಬ್ದಾರಿಯನ್ನು ದಾಮೋದರ ಮಾಸ್ತರ್‌ ನೋಡಿಕೊಳ್ಳುತ್ತಿದ್ದರು. ಗಟ್ಟಿ ಮುಟ್ಟಾಗಿ ಇರುವ ನಾಲ್ಕು ಜನ ಹಿರಿಯ ವಿದ್ಯಾರ್ಥಿಗಳು ಬಾವಿಯಿಂದ ಕೊಡಪಾನ(ಬಿಂದಿಗೆ) ಎಳೆದು ಕೊಡುತ್ತಿದ್ದರು. ಈ ಕೊಡಪಾನವನ್ನುಎರಡು ಎರಡು ವಿದ್ಯಾರ್ಥಿಗಳು ಕೈ ಹಿಡಿದು ಪಾಸ್‌ ಪಾಸ್ ಮಾಡಿಕೊಂಡು ತೋಟದ ತೆಂಗಿನ ಸಸಿಗಳಿಗೆ ಹಾಕುತ್ತಿದ್ದೇವು.ಈಗ ನಾವು ನೀರು ಹಾಕಿ ಬೆಳೆಸಿದ ಸಸಿಗಳು ದೊಡ್ಡದಾಗಿದ್ದು ಈಗ ಫಲ ನೀಡುತ್ತಿದೆ.
ನಮಗೆ ಪಾಠ ಹೇಳಿಕೊಡಲು ಉತ್ತಮವಾದ ಟೀಚರ್‍ ಗಳಿದ್ದರು. ಒಂದು ಮತ್ತು ಎರಡನೇ ತರಗತಿಗೆ ಮುಕಾಂಬಿಕಾ ಟೀಚರ್‍, ಮೂರನೇ ತರಗತಿಗೆ ಯಶೋಧಾ ಟೀಚರ್‍ ಇವರು ಹಿಂದಿ, ಕನ್ನಡ ಪಾಠ ಮಾಡುತ್ತಿದ್ದರು. ಇಂಗ್ಲಿಷ್,ಗಣಿತವನ್ನು ದಾಮೋದರ್‍ ಮಾಸ್ತರ್‍ ಹೇಳಿಕೊಡುತ್ತಿದ್ದರು. ಹಿಂದಿಗೆ ಸಾವಿತ್ರಿ ಟೀಚರ್‍, ವಿಜ್ಞಾನವನ್ನು ಸವಿತಾ ಟೀಚರ್‍ ಹೇಳಿಕೊಡುತ್ತಿದ್ದರೆ, ಸಮಾಜ ವಿಜ್ಞಾನವನ್ನು ಶಶಿಕಲಾ ಟೀಚರ್‍ ಕಲಿಸಿಕೊಡುತ್ತಿದ್ದರು. ಇವರಿಗೆ ಈಗ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಮುಂದೊಂದು ದಿನ ಶಿಕ್ಷಕರ ದಿನಾಚರಣೆಯ ದಿನ ಇವರ ಬಗ್ಗೆ ಬರೆಯುತ್ತೇನೆ.
ಒಟ್ಟಿನಲ್ಲಿ ನಮಗೆ ಕಲಿಸಿ ನಮ್ಮನ್ನು ಬೆಳೆಸಿದ ಶಾಲೆಗೆ ನೂರು ವರ್ಷ. ಶಿಕ್ಷಣ ಇಲಾಖೆ ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಕೈಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದನ್ನು ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿಸಿ ಆದೇಶಿಸಿದೆ. ಈ ಭಾಗ್ಯ ನಮ್ಮ ಶಾಲೆಗೆ ಸಿಕ್ಕಿದೆ. ಹೀಗಾಗಿ ನಾಳೆ ಈ ಹೊಸ ಹೈ ಸ್ಕೂಲ್ ಉದ್ಘಾಟನೆಯಾಗಲಿದೆ.
ದಾಖಲೆಗಳಲ್ಲಿ ಇದ್ದಂತೆ ನಮ್ಮ ಶಾಲೆ ಜುಲೈ ೧೧,೧೯೧೨ರಂದು ಎಲಿಮೆಂಟರಿ ಶಾಲೆಯಾಗಿ ಆರಂಭಗೊಂಡು ೧೯೬೧ರಲ್ಲಿ ಊರ ಮಹನೀಯರ ಪ್ರಯತ್ನದಿಂದಾಗಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಯಾಯಿತು. ಹೀಗಾಗಿ ೨ ವರ್ಷದ ಹಿಂದೆಯೇ ನೂರನೇ ವರ್ಷದ ಆಚರಣೆಯಾಗಬೇಕಿತ್ತು. ಆದರೆ ಕೆಲ ಕಾರಣಗಳಿಂದ ಇದು ಸಾಧ್ಯವಾಗಿರಲಿಲ್ಲ. ಆದರೆ ಈಗ ಆಚರಣೆಯಾಗುತ್ತಿದೆ. ಒಟ್ಟು ೧೦೨ ವರ್ಷ ಪೂರ್ಣಗೊಳಿಸಿದ ಶಾಲೆಯಲ್ಲಿ ವಿದ್ಯಾರ್ಥಿಯಾಗಿ ಕಲಿಯುವ ಭಾಗ್ಯ ಸಿಕ್ಕಿತ್ತಲ್ಲ ಎನ್ನುವ ಸಂತೋಷ ನನಗಿದೆ.
ಇಲ್ಲಿರುವದು ಆರನೇ ತರಗತಿಯಲ್ಲಿದ್ದಾಗ ಕ್ಲಿಕ್ಕಿಸಿದ ಫೋಟೋ ಇದು. ನಾವಿರುವಾಗ ವಾರದಲ್ಲಿ ಎರಡು ದಿನ ಸೋಮವಾರ ಮತ್ತು ಶುಕ್ರವಾರ ಮಾತ್ರ ಯೂನಿಫಾರ್ಮ್.ಹೀಗಾಗಿ ಯೂನಿಫಾರ್ಮ್‌ ಇಲ್ಲದ ದಿನದ ಸಡನ್ ಆಗಿ ಫೋಟೋ ಗ್ರಾಫರ್‍ ಬಂದು ಫೋಟೋ ತೆಗೆದದ್ದು. ಫೋಟೋಗೆ ಹೇಗೆ ಪೋಸ್ ಕೊಡಬೇಕು ಎಂದು ಗೊತ್ತಿಲ್ಲದೇ ನಮ್ಮದೇ ಭಂಗಿಯಲ್ಲಿ ಕೆಲವರು ನಿಂತು ಫೋಸ್‌ ಕೊಟ್ಟಿದ್ದಾರೆ.





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಿದ್ಧವನ ಗುರುಕುಲದ ಸವಿನೆನಪುಗಳು....

ತಮಿಳುನಾಡು ಬೈಕ್ ಟ್ರಿಪ್ ಭಾಗ -2 ಹೊಗೇನಕಲ್ ಪ್ರವಾಸ ಕಥನ

ಯೆರ್ಕಾಡ್ ಮತ್ತು ಹೊಗೇನಕಲ್ ಬೈಕ್ ಪ್ರವಾಸ