ಆಂಧ್ರ ಪ್ರವಾಸ ಕಥನ 3 - ಬೇಲುಂ ಗುಹೆ

ಗುಹೆಯಲ್ಲಿ ಆದಿಮಾನವರು ವಾಸವಾಗಿದ್ದರಂತೆ, ಗೆಡ್ಡೆ ಗೆಣಸು ತಿಂದು ಬದುಕಿದ್ದರಂತೆ. ಮುನಿಗಳು‌ ತಪಸ್ಸು ಮಾಡಿದ್ದರಂತೆ.ಹೀಗೆ ಅಂತೆ ಕಂತೆಗಳ ಕಥೆಗಳನ್ನು ಕೇಳಿದ್ದ ನಾನು ಇದೂವರೆಗೂ ಯಾವುದೇ ಗುಹೆಯನ್ನು ಹೊಕ್ಕಿರಲಿಲ್ಲ. ವಿಡಿಯೋಗಳನ್ನು ನೋಡಿದಾಗ ಹೀಗೆಲ್ಲ ಇರುತ್ತಾ ಅಂತ ಭಾವಿಸಿದ್ದ ನನಗೆ ಈ ಬಾರಿಯ ಪ್ರವಾಸದಲ್ಲಿ ಗುಹೆಯನ್ನು ಪ್ರವೇಶಿಸುವ ಭಾಗ್ಯ ಸಿಕ್ಕಿತ್ತು.
ಬೇಲುಂ ಗುಹೆ ನಾವು ಭೇಟಿ ನೀಡಿದ ಮೂರನೇ ಸ್ಥಳ. 10 ಮೀಟರ್ ನಿಂದ ಪ್ರಾರಂಭವಾಗಿ 30 ಮೀಟರ್ ಆಳದವರೆಗೆ ಸುಮಾರು 1.5. ಕಿಮೀ.ದೂರವನ್ನು ಗುಹೆಯಲ್ಲಿ ಸಂಚರಿಸಬಹುದು.ಆರಂಭದಲ್ಲಿ ವಿಶಾಲವಾಗಿರುವ ಸುರಂಗದ ದಾರಿಯಲ್ಲಿ ಸಾಗುತ್ತಾ ಹೋದಂತೆ ಇಕ್ಕಟ್ಟಾಗುತ್ತದೆ. 'Young and Evergreen Hero' ಆಗಿರುವ ನನ್ನಂತವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ದಪ್ಪ ಇದ್ದವರಿಗೆ ಕೆಲವು ಕಡೆ ಸಂಚರಿಸಲು ಕಷ್ಟವಾಗಬಹುದು.

ಮೇಲೆ ಹತ್ತಲು ಮತ್ತು ಕೆಳಗೆ ಇಳಿಯಲು ಸಣ್ಣ ಕಬ್ಬಿಣದ ಮೆಟ್ಟಿಲುಗಳಿವೆ. ನುಸುಳಿಕೊಂಡು ಹೋಗಬೇಕಾಗುತ್ತದೆ‌. ಗುಹೆಯಲ್ಲಿ ಸಂಪೂರ್ಣ ಕತ್ತಲು ಇರುವ ಕಾರಣ ಬೆಳಕಿನ ವ್ಯವಸ್ಥೆ ಇದೆ. ಬೆಳಕಿನ ವ್ಯವಸ್ಥೆಯನ್ನು ನೋಡಿಕೊಂಡು ಮುಂದೆ ಸಾಗಬಹುದು.
ಸ್ವಲ್ಪ ದೂರ ಹೋದಂತೆ ಗುಹೆ ಮೂರು‌ ಭಾಗವಾಗಿ ಕವಲೊಡೆದಿದೆ. ಒಂದು ಸಣ್ಣ ರೂಮ್, ಇನ್ನೊಂದು ಮಂಟಪ, ಮತ್ತೊಂದು ನೀರಿನ ಬಾವಿ ಇರುವ ಪಾತಾಳ ಗಂಗಾ ಎಂಬ ಜಾಗಕ್ಕೆ ಹೋಗುತ್ತದೆ‌. ಇದರಲ್ಲಿ ಪಾತಾಳ ಗಂಗಾ ಜಾಗಕ್ಕೆ ಹೋಗಲು ಸ್ವಲ್ಪ ಕಷ್ಟ ಪಡಬೇಕಾಗುತ್ತದೆ.
ಮೆಟ್ಟಿಲುಗಳನ್ನು ಇಳಿದು, ಕಿರಿದಾದ ಜಾಗದಲ್ಲಿ ಸಂಚರಿಸಬೇಕು. ದಾರಿಯಲ್ಲಿ ಹೋಗಲು ಎಷ್ಟು ಬೆಳಕು ಬೇಕೋ ಅಷ್ಟು ಬೆಳಕು ಮಾತ್ರ ಇದೆ. ಪಾತಾಳ ಗಂಗಾದಲ್ಲಿ ಕೆಳಗಡೆ ನೀರಿನ‌ ಬಾವಿ ಇದ್ದರೆ ಮೇಲುಗಡೆ ಶಿವಲಿಂಗವಿದೆ. ಮಳೆಗಾಲದಲ್ಲಿ ನೀರು ತುಂಬಿ ಗುಹೆಯ ದಾರಿಯವರೆಗೆ ಹರಿಯುತ್ತದೆಯಂತೆ. ನಾವು ಹೋದಾಗ ಶಿವಲಿಂಗದ ಕೆಳಗಡೆಯೇ ನೀರು ಇತ್ತು.
ಕೆಳಗಡೆ ಹೋದಾಗ ಆಮ್ಲಜನಕ ಕಡಿಮೆ ಆಗುತ್ತದೆ ಅಲ್ಲವೇ ಎನ್ನುವ ಪ್ರಶ್ನೆಗೆ ಗುಹೆಯ ದಾರಿಗೆ ಮೇಲಿನಿಂದಲೇ ಗಾಳಿಯನ್ನು ಫ್ಯಾನ್ ಮೂಲಕ ಪೂರೈಸಲಾಗುತ್ತದೆ. ಹೀಗಾಗಿ ಉಸಿರಾಟದ ಸಮಸ್ಯೆ ಆಗುವುದಿಲ್ಲ. ಸ್ವಲ್ಪ ಮಣ್ಣಿನ ವಾಸನೆ ಬರುತ್ತದೆ ಅಷ್ಟೇ.
ಗುಹೆ ಬೆಳಕಿಗೆ ಬಂದ ಸಮಯದಲ್ಲಿ ಕ್ರಿ.ಪೂ.4500ರ ಅವಧಿಯ ಪಾತ್ರೆಗಳು ಸಿಕ್ಕಿದೆಯಂತೆ. ಅಷ್ಟೇ ಅಲ್ಲದೇ ಇಲ್ಲಿ ಜೈನ ಮುನಿಗಳು ವಾಸವಾಗಿದ್ದರು ಎಂದು ಗುಹೆಗೆ ಸಂಬಂಧಿಸಿದ ಕರಪತ್ರದಲ್ಲಿ ಮಾಹಿತಿಯಿದೆ.

ಪ್ರವಾಸಿಗರಿಗೆ ಸಲಹೆ:
ಎಂದಿನಂತೆ ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಜಾಸ್ತಿ. ಬೆಳಗ್ಗೆ 10 ಗಂಟೆಗೆಯಿಂದ ಸಂಜೆ 5.30ರವರೆಗೆ ಗುಹೆಯನ್ನು ವೀಕ್ಷಿಸಬಹುದು‌. ಶಾಲಾ ಮಕ್ಕಳು ಜಾಸ್ತಿ ಇಲ್ಲಿಗೆ ಬರುತ್ತಾರೆ. ಹೀಗಾಗಿ ಆರಂಭದಲ್ಲೇ ವೀಕ್ಷಣೆ ಮಾಡುವುದು ಉತ್ತಮ. ಯಾಕೆಂದರೆ ಜನ ಜಾಸ್ತಿಯಾದಂತೆ ಕಿರಿದಾದ ಜಾಗದಲ್ಲಿ ಸಂಚರಿಸಲು ಕಷ್ಟವಾಗಬಹುದು. ಸ್ಥಳ ವೀಕ್ಷಿಸಲು ಒಂದೇ ದಾರಿ ಇರುವ ಕಾರಣ ಒಳಗಡೆ ಟ್ರಾಫಿಕ್ ಜಾಮ್ ಆಗಬಹುದು. ಇದರಿಂದಾಗಿ ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ನಿಂತು ವೀಕ್ಷಣೆ ಮಾಡಲು ಸಾಧ್ಯವಿಲ್ಲ. 10 ಗಂಟೆಯ ಒಳಗಡೆ ನಮ್ಮ ಬೈಕುಗಳು ಲ್ಯಾಂಡ್ ಆಗಿತ್ತು. ಹೀಗಾಗಿ ನಮಗೆ ಸುತ್ತಾಡಲು ಯಾವುದೇ ಸಮಸ್ಯೆ ಆಗಲಿಲ್ಲ.

ಕಾರಿನಲ್ಲಿ ಬಂದರೆ ಏನು ಸಮಸ್ಯೆ ಇಲ್ಲ. ಬೈಕಿನಲ್ಲಿ ಪ್ರವಾಸ ಮಾಡಿದರೆ ಲಗೇಜ್ ಬ್ಯಾಗ್ ಇಡಲು ಜಾಗ ಇಲ್ಲ. ಹೀಗಾಗಿ ಬ್ಯಾಗ್ ಗಳನ್ನು ಹೊತ್ತುಕೊಂಡೇ ಒಳಗಡೆ ಸಂಚರಿಸಬೇಕು(ನಾವು ಅಲ್ಲಿಯ ಸಿಬ್ಬಂದಿಗೆ ಲಗೇಜ್ ಇಡಲು ವ್ಯವಸ್ಥೆ ಮಾಡಿದರೆ ಬಹಳ ಸಹಾಯವಾಗುತ್ತದೆ ಎಂದು ಸಲಹೆ ಕೊಟ್ಟಿದ್ದೇವೆ. ಮುಂದೆ ಈ ಸಲಹೆ ಕಾರ್ಯರೂಪಕ್ಕೆ ಬಂದರೂ ಬರಬಹುದು)

ಈ ಗುಹೆಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಗೈಡ್ ಮೂಲಕ ತಿಳಿಯಬಹುದು‌. ವಯಸ್ಕರಿಗೆ 65ರೂ. ಟಿಕೆಟ್ ಇದೆ. ಬೆಂಗಳೂರಿನಿಂದ 280 ಕಿ.ಮೀ., ಅನಂತಪುರದಿದ 80 ಕಿ.ಮೀ ದೂರದಲ್ಲಿ ಬೇಲುಂ ಗುಹೆಯಿದೆ‌.
ಬೇಲುಂನಿಂದ ಅನಂತಪುರಕ್ಕೆ ಬಂದು, ಹೈದರಾಬಾದ್ ಹೈವೇ ಏರಿ ಬೆಂಗಳೂರಿಗೆ ಬರುವಾಗ ದಾರಿ ಮಧ್ಯೆ ಕೊರಿಯಾದ KIA ಆಟೋಮೊಬೈಲ್ ಕಂಪನಿಯ ಉತ್ಪಾದನಾ ಘಟಕ ಕಾಣಸಿಗುತ್ತದೆ. ದೇಶದ ಮೊದಲ ಘಟಕ ಇದಾಗಿದ್ದು 535‌ ಎಕ್ರೆ ಜಾಗದಲ್ಲಿ ತಲೆ ಎತ್ತಿದೆ. 2019ರ ಮಧ್ಯದ ಅವಧಿಯಲ್ಲಿ ಎಸ್ ಯುವಿ ಕಾರು ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ‌. ರಸ್ತೆಯಿಂದಲೇ ಈ ಘಟಕವನ್ನು ನೋಡಿ ಮುಂದಕ್ಕೆ ಹೋಗಬಹುದು.
ನಮ್ಮ ಪ್ರವಾಸ ಯಶಸ್ವಿಯಾಗಲು ಇಬ್ಬರು ಕಾರಣ. ಆಫ್ ಲೈನ್ ಜಿಪಿಎಸ್ ಮೂಲಕ ಎಲ್ಲಿಯೂ ದಾರಿ ತಪ್ಪದಂತೆ ಸರಿಯಾಗಿ ಮಾರ್ಗ ತೋರಿಸಿದ ವ್ಯಕ್ತಿ ರಾಕೇಶ್. ಈ ಮೂರು ಸ್ಥಳಕ್ಕೆ ಮೊದಲೇ ಹೋಗಿ ಪ್ಲಾನ್ ರೆಡಿ ಮಾಡಿದ್ದು ಅಶ್ವಥ್ ಬೆಟ್ಟಂಪಾಡಿ. ಹೀಗಾಗಿ ಇಬ್ಬರಿಗೂ ದೊಡ್ಡ ಧನ್ಯವಾದಗಳು. ಜೊತೆಗೆ ಪ್ರವಾಸ ಕಥನದ ಪೋಸ್ಟ್ ಓದಿ ಲೈಕಿಸಿ, ಕಮೆಂಟಿಸಿದ ನಿಮಗೂ ದೊಡ್ಡ ನಮಸ್ಕಾರ.







ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಿದ್ಧವನ ಗುರುಕುಲದ ಸವಿನೆನಪುಗಳು....

ತಮಿಳುನಾಡು ಬೈಕ್ ಟ್ರಿಪ್ ಭಾಗ -2 ಹೊಗೇನಕಲ್ ಪ್ರವಾಸ ಕಥನ

ಯೆರ್ಕಾಡ್ ಮತ್ತು ಹೊಗೇನಕಲ್ ಬೈಕ್ ಪ್ರವಾಸ