ಆಂಧ್ರ ಪ್ರವಾಸ ಕಥನ- ಗಂಡಿಕೋಟ



ನದಿ, ಕಣಿವೆ, ಕಲ್ಲುಬಂಡೆಗಳು, ಕೋಟೆ, ಉಗ್ರಾಣ, ಪುಷ್ಕರಿಣಿ, ಸುರ್ಯೋದಯ, ಸೂರ್ಯಾಸ್ತಮಾನ, ಬೋಟಿಂಗ್,  ದೇವಾಲಯ, ಮಸೀದಿ  ಎಲ್ಲವನ್ನು ಒಂದೇ ಕಡೆ ನೋಡಬೇಕೇ? ಹಾಗಾದರೆ ನೀವು ಕಡಪ ಜಿಲ್ಲೆಯಲ್ಲಿರುವ ಗಂಡಿಕೋಟ ಸ್ಥಳಕ್ಕೆ ಹೋಗಬೇಕು‌.

'Grand Canyon of India' ಎಂದೇ ಹೆಸರಾಗಿರುವ ಇಲ್ಲಿ ಪೆನ್ನಾರ್ ನದಿ ಹರಿಯುತ್ತಿದ್ದು ಸುತ್ತಲು ಕಣಿವೆ ಇದೆ.  ನೀರು ಹತ್ತಿರದಲ್ಲೇ ಇರುವ ಕಾರಣ ವಿಜಯನಗರದ  ಸಾಮಂತ ರಾಜನಾಗಿದ್ದ ಕುಮಾರ ತಿಮ್ಮಾ ಇಲ್ಲಿ ಕೋಟೆ ಕಟ್ಟಿದ್ದು ಈಗಲೂ ನೋಡಬಹುದು.



ಕೋಟೆಯಲ್ಲಿ ಏನಿದೆ?
50 ಅಡಿ ಎತ್ತರ, ಸುಮಾರು 7-8 ಕಿ‌‌ಮೀ ಸುತ್ತಳತೆಯ ಗಟ್ಟಿಯಾದ ರಕ್ಷಣಾ ಗೋಡೆಯಿದೆ. ಕಲ್ಲುಗಳನ್ನು ಬೆಲ್ಲ ಮತ್ತು ಸುಣ್ಣ ಬಳಸಿ ಕಟ್ಟಲಾಗಿದೆ. ಪ್ರವೇಶದ್ವಾರ ದಾಟಿ ಮುಂದೆ ಹೋದರೆ ಮದ್ದುಗುಂಡು ಸಂಗ್ರಹಾಗಾರ, ಉಗ್ರಾಣಗಳು, ಜೈಲು, ಮಾಧವ ಮತ್ತು ರಂಗನಾಥ ದೇವಾಲಯ, ರಾಣಿ ಮಹಲ್, ಪುಷ್ಕರಣಿ, ಚಾರ್ ಮೀನಾರ್, ಜುಮ್ಲಾ ಮಸೀದಿ ಇದೆ‌.

ಮೇಲೆ ತಿಳಿಸಿದ ಜೊತೆ ಜನರನ್ನು ಹೆಚ್ಚು ಸೆಳೆಯುವುದು ಇಲ್ಲಿನ ಕಲ್ಲು ಬಂಡೆಗಳು ಮತ್ತು ಕಣಿವೆಗಳು.ಸುರ್ಯೋದಯ ಮತ್ತು ಸುರ್ಯಾಸ್ತಮಾನ ಎರಡನ್ನು ಕಣ್ತುಂಬಿಕೊಳ್ಳುವ ಕಾರಣ ಇಲ್ಲಿಗೆ ಪ್ರವಾಸಿಗರು‌ ಹೆಚ್ಚಾಗಿ ಬರುತ್ತಾರೆ. ಫೋಟೋಗ್ರಫಿಗೆ ಬೇಕಾದ ಎಲ್ಲ ಪೂರಕ ಅಂಶಗಳು ಒಂದೇ ಕಡೆ ಸಿಗುವ ಕಾರಣ ಫೋಟೋಗ್ರಾಫರ್ ಗಳು  ಸಹ ಜಾಸ್ತಿ ಸಂಖ್ಯೆಯಲ್ಲಿ ಬರುತ್ತಾರೆ.

ಎಲ್ಲವೂ ಚೆನ್ನಾಗಿದ್ದರೂ ಇಲ್ಲಿ  ರಾತ್ರಿ ತಂಗಲು ಹೆಚ್ಚಿನ ವ್ಯವಸ್ಥೆ ಇಲ್ಲ.  ಹರಿತಾ ಹೋಟೆಲ್ ನವರ  12  ಎಸಿ ರೂಮ್ ಬಿಟ್ಟರೆ ಬೇರೆ  ರೂಮ್ ಇಲ್ಲ. ರೂಮ್ ಸಿಗದೇ ಇದ್ದರೂ ಟೆಂಟ್ ನಲ್ಲಿ ಮಲಗಲು ವ್ಯವಸ್ಥೆ ಇದೆ. ಹರಿತಾ ಮೂಲಕ ಮೊದಲೇ ಬುಕ್ ಮಾಡಿ ತಿಳಿಸಿದರೆ ಟೆಂಟ್ ಹಾಕಿ ಮಲಗಲು ಅವರೇ ವ್ಯವಸ್ಥೆ ಮಾಡಿಕೊಡುತ್ತಾರೆ.

ಟೆಂಟ್ ಹಾಕಿ ಕೊಟ್ಟರೂ ದೊಡ್ಡ ಸಮಸ್ಯೆ ಏನೆಂದರೆ ಹತ್ತಿರ‌ ಎಲ್ಲೂ ಟಾಯ್ಲೆಟ್ ಮತ್ತು ಬಾಥ್ ರೂಮ್ ಇಲ್ಲ. ನಿಮಗೆ ಈ ಸೇವೆ ಬೇಕಿದ್ದ ಲ್ಲಿ 800 ಮೀಟರ್ ದೂರ ಇರುವ ಹರಿತಾ ಹೋಟೆಲ್ ಗೆ ಹೋಗಬೇಕು. ಎಸಿ ರೂಮ್ ಗಳಿಗೆ ಹೋಲಿಸಿದರೆ ಟೆಂಟ್  ಚೀಪ್.  ಓರ್ವನಿಗೆ 1,100 ರೂ. ಆಗುತ್ತದೆ. ಇದರಲ್ಲಿ ಸಂಜೆಯ ತಿಂಡಿ, ರಾತ್ರಿಯ ಊಟ, ಬೆಳಗ್ಗೆ ತಿಂಡಿಯೂ ಬರುತ್ತದೆ. ರಾತ್ರಿ ಊಟ ಟೆಂಟ್ ಇದ್ದ ಸ್ಥಳಕ್ಕೆ ಬರುತ್ತದೆ. ನಿಮಗೆ ಸಸ್ಯಾಹಾರ ಬೇಕೋ, ಮಾಂಸಾಹಾರ ಬೇಕೋ ಎನ್ನುವುದನ್ನು ಮೊದಲೇ ತಿಳಿಸಬೇಕಾಗುತ್ತದೆ. ಸಂಜೆ ಮತ್ತು ಬೆಳಗ್ಗಿನ ತಿಂಡಿ ಹರಿತಾ ಹೋಟೆಲ್ ನಲ್ಲಿ ಮಾಡಬೇಕಾಗುತ್ತದೆ.


ಸಲಹೆ ಏನು?
ಸೂರ್ಯ ಮುಳುಗುವ ಮುನ್ನ ಇಲ್ಲಿಗೆ ಬರಬೇಕು.ಹರಿತಾದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಎರಡು ಬಾಥ್ ರೂಮ್, ಎರಡು ಟಾಯ್ಲೆಟ್ ಇದೆ. ಹೀಗಾಗಿ ಟೆಂಟ್ ನಲ್ಲಿ ಮಲಗಿದವರು ಬೆಳಗ್ಗೆ ಬೇಗ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿದರೆ ಉತ್ತಮ. ಲೇಟಾಗಿ ಎದ್ದರೆ ಈ ಕೆಲಸಕ್ಕೂ ಕ್ಯೂ  ನಿಂತುಕೊಳ್ಳಬೇಕಾಗುತ್ತದೆ‌‌.‌ ಬೆಳಗ್ಗೆ 4.30 ಕ್ಕೆ ಎದ್ದು ಮೊದಲಿಗರಾಗಿ ಎಂಟ್ರಿ ಕೊಟ್ಟ ಕಾರಣ ನಮಗೆ ಯಾವುದೇ ಸಮಸ್ಯೆ ಆಗಲಿಲ್ಲ.

ಇಲ್ಲಿ ಯಾವುದೇ ಎಟಿಎಂ, ಪೆಟ್ರೋಲ್ ಬಂಕ್ ಇಲ್ಲ‌. ಅಂಗಡಿಗಳಲ್ಲಿ ಕ್ಯಾಶ್ ಲೆಸ್ ವ್ಯವಹಾರ ನಡೆಯುವುದಿಲ್ಲ.  ಹೀಗಾಗಿ ವ್ಯವಹಾರಕ್ಕೆ ಕೈಯಲ್ಲಿ ನಗದು ಹಣ ಇಟ್ಟುಕೊಳ್ಳುವುದು ಅನಿವಾರ್ಯ.  ಟೆಂಟ್ ಒಳಗಡೆ ಲೈಟ್ ವ್ಯವಸ್ಥೆ ಇಲ್ಲ. ಟಾರ್ಚ್ ಇಟ್ಟುಕೊಳ್ಳುವುದು ಉತ್ತಮ.

ಲೇಪಾಕ್ಷಿಯಿಂದ ಗಂಡಿಕೋಟೆಗೆ  ಹೆದ್ದಾರಿ ಮೂಲಕ ಸಾಗಿದರೆ
ಗೂಗಲ್ ಮ್ಯಾಪ್ ನಲ್ಲಿ  185 ಕಿ‌ಮೀ ತೋರಿಸುತ್ತದೆ. ನಾವು ಗೂಗಲ್ ಮ್ಯಾಪ್ ಅವಲಂಬಿಸಿದರೂ ಕೆಲವು ಕಡೆ ಹೆದ್ದಾರಿ ಬಿಟ್ಟು 'Trust Google'  ಅಂತ ಹೇಳಿ ಹಳ್ಳಿಯ ರಸ್ತೆಯಲ್ಲಿ ಸಂಚರಿಸಿದ್ದೇವೆ. ದಾರಿ ತಪ್ಪಿಲ್ಲ, 25 ಕಿ.ಮೀ ಉಳಿತಾಯವಾಗಿದೆ.  ಬೈಕಿನಲ್ಲಿ ಹೋಗುವಷ್ಟು ರಸ್ತೆ ಉತ್ತಮವಾಗಿತ್ತು. ಕಾರಿನಲ್ಲಿ ಸಂಚಾರ ಕಷ್ಟ. ಲಾರಿ ಬಂದರೆ ಕಾರನ್ನು ಮಣ್ಣಿನ ರಸ್ತೆಗೆ ಇಳಿಸಬೇಕಾಗುತ್ತದೆ.

ಎಲ್ಲ ಕಡೆ ನೆಟ್ ವರ್ಕ್ ಇಲ್ಲ.  ಜನ ವಸತಿ ಸಹ ಕಡಿಮೆ. ಹೀಗಾಗಿ ಗೂಗಲ್ ಜಿಪಿಎಸ್  ರೂಟ್  ಮ್ಯಾಪನ್ನು ಮೊದಲೇ ಡೌನ್ ಲೋಡ್ ಮಾಡಿಟ್ಟರೆ ಯಾವುದೇ ಸಮಸ್ಯೆ ಇಲ್ಲದೇ ಗಂಡಿಕೋಟವನ್ನು ತಲುಪಬಹುದು.















ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಿದ್ಧವನ ಗುರುಕುಲದ ಸವಿನೆನಪುಗಳು....

ತಮಿಳುನಾಡು ಬೈಕ್ ಟ್ರಿಪ್ ಭಾಗ -2 ಹೊಗೇನಕಲ್ ಪ್ರವಾಸ ಕಥನ

ಯೆರ್ಕಾಡ್ ಮತ್ತು ಹೊಗೇನಕಲ್ ಬೈಕ್ ಪ್ರವಾಸ