ಆಂಧ್ರ ಪ್ರವಾಸ ಕಥನ - ಲೇಪಾಕ್ಷಿ ದೇವಾಲಯ

ಕರ್ನಾಟಕದ ಗಡಿ ರಾಜ್ಯಗಳನ್ನು ಬೈಕಿನಲ್ಲಿ ಸುತ್ತುವ ಒಂದು ಮಹತ್ವಾಕಾಂಕ್ಷೆಯ ಯೋಜನೆಯನ್ನು ನಾವು ಹಾಕಿಕೊಂಡಿದ್ದು ಕಳೆದ ಬಾರಿ ತಮಿಳುನಾಡಿನಲ್ಲಿರುವ ಯೆರ್ಕಾಡ್ ಮತ್ತು ಹೊಗೆನಕಲ್ ಗೆ ಹೋಗಿದ್ವಿ. ಈ ಬಾರಿ ಯಾವ ಕಡೆ ಎಂದು ಪ್ಲಾನ್ ಮಾಡುವಾಗ ಹೊಳೆದದ್ದೆ ಆಂಧ್ರ. ನಾವು ಐದು ಮಂದಿ ಜೈ ಎಂದಿದ್ದೆ ತಡ ಮೂರು ತಿಂಗಳ ಹಿಂದೆ ಫಿಕ್ಸ್ ಆಗಿದ್ದ ನವೆಂಬರ್ 10 ರ ಬೆಳಗ್ಗೆ 5 ಬೈಕಿನಲ್ಲಿ ನಮ್ಮ‌ ಸವಾರಿ ಹೊರಟಿತು.
ಎಸ್ಟೀಮ್ ಮಾಲ್ ನಮ್ಮ ಸ್ಟಾಟಿಂಗ್ ಪಾಯಿಂಟ್. ಮೊದಲು ಭೇಟಿ ನೀಡುವ ಸ್ಥಳ ಲೇಪಾಕ್ಷಿ ದೇವಾಲಯ. ಬೆಂಗಳೂರಿನಿಂದ 130ಕಿ.ಮೀ ದೂರದಲ್ಲಿ ಈ ದೇವಾಲಯವಿದ್ದು ಹೈದರಾಬಾದ್ ರಸ್ತೆಯಲ್ಲಿ ಚಿಕ್ಕಬಳ್ಳಾಪುರ ಸಾಗಿ ಬಾಗೇಪಲ್ಲಿಯಲ್ಲಿ ಎಡಕ್ಕೆ ತಿರುಗಿ ಮುಂದೆ ಸಾಗಿದರೆ ಈ ದೇವಾಲಯ ಸಿಗುತ್ತದೆ. ರಸ್ತೆ ಚೆನ್ನಾಗಿದ್ದರಿಂದ ಬೆಳಗ್ಗೆ 8.30ಕ್ಕೆ ಈ ದೇವಾಲಯದ ಪಾರ್ಕಿಂಗ್ ಜಾಗದಲ್ಲಿ ನಮ್ಮ ಬೈಕ್ ಲ್ಯಾಂಡ್ ಆಯಿತು.
ಈ ದೇವಾಲಯದ ಬಗ್ಗೆ ಅಂತರ್ಜಾಲದಲ್ಲಿ ಹುಡುಕಿದ್ರೆ ಬಹಳಷ್ಟು ಮಾಹಿತಿ ಸಿಗುತ್ತದೆ. ಹೀಗಾಗಿ ಜಾಸ್ತಿ ಬರೆಯಲು ಹೋಗಲ್ಲ. ಆದರೂ ಕೆಲವೊಂದು ಮುಖ್ಯವಾದ ವಿಚಾರ ಹೇಳಲೇಬೇಕಾಗುತ್ತದೆ. ಈ ದೇವಾಲಯಕ್ಕೆ ರಾಮಾಯಣದ ನಂಟು ಇದೆ. ಅಷ್ಟೇ ಅಲ್ಲದೇ ವಿಜಯನಗರಕ್ಕೂ ಸಂಬಂಧವಿದೆ.

ರಾಮಾಯಣದ ಕಥೆ ನಿಮಗೆ ಗೊತ್ತಿರಬಹುದು. ವನವಾಸದ ಸಮಯದಲ್ಲಿ ಸೀತೆಯನ್ನು ರಾವಣ ಅಪಹರಿಸಿ ಪುಷ್ಪಕ ವಿಮಾನದಲ್ಲಿ ಲಂಕೆಗೆ ಹೋಗುತ್ತಿದ್ದಾಗ ಜಠಾಯು ಹೋರಾಟ ಮಾಡುತ್ತದೆ. ಉಗ್ರ ಹೋರಾಟದ ಸಮಯದಲ್ಲಿ ರಾವಣ ಜಠಾಯುವಿನ ಶಕ್ತಿ ರೆಕ್ಕೆಯಲ್ಲಿ ಇದೆ ಎನ್ನುವುದನ್ನು ಅರಿತು ರೆಕ್ಕೆಯನ್ನೇ ಕತ್ತರಿಸುತ್ತಾನೆ. ರೆಕ್ಕೆ ಕತ್ತರಿಸಿದ್ದರಿಂದ ಜಠಾಯು ನೆಲಕ್ಕೆ ಬೀಳುತ್ತದೆ. ಮುಂದೆ ರಾಮ ಸೀತೆಯನ್ನು ಹುಡುಕುತ್ತಾ ಬಂದಾಗ ಜಠಾಯು ಕಾಣಸಿಗುತ್ತದೆ. ಸೀತೆಯನ್ನು ರಾವಣ ಕದ್ದುಕೊಂಡು ಹೋಗಿದ್ದಾನೆ ಎಂದು ಜಠಾಯು ಹೇಳಿದಾಗ ರಾಮ, ಲೇ ಪಕ್ಷಿ ಎಂದು ಸಂಬೋದಿಸಿ ನಂತರ ಲಯದಲ್ಲಿ ಲೀನ ಮಾಡಿದನಂತೆ. ಲೇ ಪಕ್ಷಿ ಎಂದು ಕರೆದ ಕಾರಣ ಮುಂದಿನ ದಿನಗಳಲ್ಲಿ ಈ ಸ್ಥಳ 'ಲೇಪಾಕ್ಷಿ' ಎಂದು ಪ್ರಸಿದ್ಧವಾಯಿತಂತೆ.
ಈ‌ ಸುಂದರ ದೇವಾಲಯ ನಿರ್ಮಾಣದ ಹಿಂದೆಯೂ ಕಥೆಯಿದೆ. ವಿಜಯನಗರ ಅರಸರ ಆಳ್ವಿಕೆಯ ಸಮಯದಲ್ಲಿ ಕೃಷ್ಣದೇವರಾಯನ ತಮ್ಮ ಅಚ್ಚುತರಾಯನ ಕಾಲದಲ್ಲಿ ಪೆನುಗೊಂಡ ಪ್ರದೇಶಕ್ಕೆ ವಿರೂಪಣ್ಣ ಎಂಬವನು ಕೋಶಾಧಿಕಾರಿಯಾಗಿದ್ದನಂತೆ. ಈತ ಪುರಾತನ ಕಾಲದಲ್ಲಿ ಕಟ್ಟಿದ್ದ ಈ ದೇವಾಲಯವನ್ನು ಕಲ್ಲಿನಿಂದ ಕಟ್ಟಿ ಅಭಿವೃದ್ಧಿ ಮಾಡಿದ್ದಾನೆ ಎಂದು ಅಲ್ಲಿಯ ಅರ್ಚಕರು ಕಥೆ ಹೇಳುತ್ತಾರೆ. ಅಲ್ಲಿದ್ದ ಅರ್ಚಕರಿಗೆ ತೆಲುಗು ಮತ್ತು ಕನ್ನಡ ಎರಡೂ ಭಾಷೆ ಬರುತ್ತದೆ. ಭಕ್ತರ ಸಂಖ್ಯೆ ಕಡಿಮೆ ಇದ್ದಾಗ ಪ್ರಶ್ನೆ ಕೇಳಿದರೆ ಹೆಚ್ಚಿನ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು.
ಈ ದೇವಾಲಯದ ಪ್ರಧಾನ ದೇವರು ವೀರಭದ್ರ ಸ್ವಾಮಿ. ಸಾಧಾರಣವಾಗಿ ಶಿವಲಿಂಗ ಮತ್ತು ವಿಷ್ಣುವಿನ ಮೂರ್ತಿಗಳು ಒಂದೇ ದೇವಾಲಯದಲ್ಲಿ ಇರುವುದಿಲ್ಲ. ಆದರೆ ಇಲ್ಲಿ ಶಿವಲಿಂಗ ಮತ್ತು ವಿಷ್ಣು ಮೂರ್ತಿಗಳು ಇರುವುದು ವಿಶೇಷವಾಗಿದ್ದು, ಅಗಸ್ತ್ಯ ಮುನಿಗಳು ಇಲ್ಲಿ ತಪಸ್ಸು ಮಾಡಿ ಇವುಗಳನ್ನು ಪ್ರತಿಷ್ಟಾಪಿಸಿದ್ದಾರಂತೆ. ಅಷ್ಟೇ ಅಲ್ಲದೇ ಶಿವ ಮತ್ತು ವಿಷ್ಣು ಒಟ್ಟಿಗೆ ಇರುವ ಭಾರತದ ಏಕೈಕ ದೇವಾಲಯ ಇದು ಎಂದು ಅರ್ಚಕರು ಹೇಳುತ್ತಾರೆ.(ಈ ಮಾಹಿತಿ ಸರಿಯೋ, ತಪ್ಪು ಗೊತ್ತಿಲ್ಲ. ಗೊತ್ತಿದ್ದವರು ತಿಳಿಸಿ)

ವೀರಭದ್ರ ಸ್ವಾಮಿ, ಐದು ಶಿವಲಿಂಗ, ವಿಷ್ಣು ಅಲ್ಲದೇ ಪಾರ್ವತಿದೇವಿ, ವಿಷ್ಣು, ಗಣೇಶ, ಭದ್ರಕಾಳಿ ಮೂರ್ತಿಗಳಿವೆ. ದೇವಾಲಯದ ಮೂರ್ತಿಗಳು ಇರುವ ಪ್ರಾಂಗಣದಲ್ಲಿ ಫೋಟೋಗ್ರಫಿಗೆ ನಿಷೇಧವಿದೆ. ಹೀಗಾಗಿ ಒಳಗಡೆಯ ಪೋಟೋ ನಮ್ಮಲ್ಲಿ ಇಲ್ಲ. ಕೆಳಗಡೆ ನೀಡಲಾದ ಯುಆರ್‌ಎಲ್‌ ಕ್ಲಿಕ್ ಮಾಡಿದರೆ‌‌ ವೀಕ್ಷಿಸಬಹುದು.
ಈ ದೇವಾಲಯವನ್ನು ಆಮೆಯ ಆಕಾರದಲ್ಲಿರುವ ಕೂರ್ಮಗಿರಿ ಬೆಟ್ಟದ ಮೇಲೆ ಕಟ್ಟಿದ್ದಾರೆ. ಇದಕ್ಕೆ ತಳಪಾಯವಿಲ್ಲ. ಬದಿಯಲ್ಲಿರುವ ಕಲ್ಲುಗಳನ್ನು ಕೆತ್ತಿ ಹಾಗೆಯೇ ಜೋಡಿಸಿದ್ದಾರೆ.
ಇಲ್ಲಿ 8 ಅಡಿ ಎತ್ತರದ ಸ್ತಂಭ ಇಲ್ಲಿಯ ಪ್ರಮುಖ ಆಕರ್ಷಣೆಯಾಗಿದ್ದು, ಆಧಾರವಿಲ್ಲದೆ ನಿಂತಿದೆ. ಹಲವು ಆಂಗ್ಲ ವೆಬ್ ಸೈಟ್ ಗಳಲ್ಲಿ ಈ ಸ್ತಂಭದ ಬಗ್ಗೆ ಮಾಹಿತಿ ಇದೆ. ಕನ್ನಡ ವಿಕಿಪೀಡಿಯಾದಲ್ಲೂ ಈ ದೇವಾಲಯದ ಬಗ್ಗೆ ಮಾಹಿತಿ ಇದ್ದು ಅದನ್ನು ಹಾಗೆ ಕಾಪಿ ಮಾಡಿ ಇಲ್ಲಿ ಪೇಸ್ಟ್ ಮಾಡಿದ್ದೇನೆ. "ಇಲ್ಲಿರುವ ಬಲ ಬದಿಯ 8 ಅಡಿ ಎತ್ತರದ ಸ್ತಂಭ ಒಂದು ಕೆಳಗಿನ ನೆಲಕ್ಕೆ ತಾಗದೆ ನಿಂತಿದೆ. ಅಂದರೆ ಸ್ತಂಭದ ಬುಡ ಕಲ್ಲಿನ ಮೇಲೆ ನಿಂತಿಲ್ಲ. ಮೊದಲೆಲ್ಲಾ ಬಟ್ಟೆ ಅಥವಾ ಕಾಗದವನ್ನು ಒಂದು ಕಡೆಯಿಂದ ಹಾಕಿ ಮತ್ತೊಂದು ಕಡೆಯಿಂದ ತೆಗೆಯುತ್ತಿದ್ದರಂತೆ. ಆಂಗ್ಲ ಎಂಜಿನಿಯರ್ ಒಬ್ಬನಿಗೆ ಇದು ಸಾಧ್ಯವಾಗದ ಮಾತು ಎನಿಸಿ ಆ ಸ್ತಂಭವನ್ನು ಸರಿಸಿದಾಗ ಆಲ್ಲಿದ್ದ ಸುತ್ತಲಿನ ಸ್ತಂಭಗಳು ಅಲ್ಲಾಡತೊಡಗಿದಾಗ ಅವಕ್ಕೆ ಹಾನಿಯಾಗುವುದೆಂಬ ಅಂಶ ಅವನಿಗೆ ಮನವರಿಕೆಯಾಯಿತಂತೆ. ಹಾಗೆ ಅವನು ದೂಡಲು ಯತ್ನಿಸಿದ ಸ್ತಂಭ ಮಾತ್ರ ಒಂದು ಬದಿ ನೆಲದ ಮೇಲೆ ಕುಳಿತಿದೆ ಈಗ" ಎಂದು ಮಾಹಿತಿಯನ್ನು ನೀಡಲಾಗಿದೆ.(ಈ ಮಾಹಿತಿ ಸರಿಯೋ, ತಪ್ಪು ಗೊತ್ತಿಲ್ಲ. ಗೊತ್ತಿದ್ದವರು ತಿಳಿಸಿ)
ಹೊರಗಡೆ ಬೃಹತ್ ಆಕಾರದ ಏಳು ಹೆಡೆಯ ನಾಗನ ಮೇಲೆ ಕುಳಿತಿರುವ ನಾಗಲಿಂಗವಿದೆ. ನಾಗನ ಹಿಂಭಾಗದಲ್ಲಿ ಗಣಪತಿ ಕಲ್ಲಿನ ಮೂರ್ತಿಯಿದೆ. ಅಷ್ಟೇ ಅಲ್ಲದೇ ಒಂದು ವಿಶಿಷ್ಟ ಕಲ್ಲಿನ ಮಂಟಪವಿದೆ.

ಶಿವ ಮತ್ತು ಪಾರ್ವತಿ ದೇವಿ ಕಲ್ಯಾಣ ಮಹೋತ್ಸವಕ್ಕೆ ಮಂಟಪ ನಿರ್ಮಿಸಲು ರಾಜರು ಮುಂದಾಗಿದ್ದರಂತೆ. ಆದರೆ ಕಾರಣಾಂತರಗಳಿಂದ ಈ ಮಂಟಪ ನಿರ್ಮಾಣದ ಕಾರ್ಯ ಅರ್ಧಕ್ಕೆ ನಿಂತಿದ್ದು, ಇವುಗಳನ್ನು ನಾವು ನೋಡಬಹುದು.
ದೇವಾಲಯಕ್ಕೆ ಬರುವಾಗಲೇ ನಿಮ್ಮನ್ನು ನಂದಿಯ ವಿಗ್ರಹ ಸ್ವಾಗತಿಸುತ್ತದೆ. 15 ಅಡಿ ಎತ್ತರ, 27 ಅಡಿ‌ ಅಗಲದ ನಂದಿ ವಿಗ್ರಹದ ಕೊರಳಿನಲ್ಲಿ‌ ಗಂಟೆಯ ಹಾರವನ್ನು ಆಕರ್ಷಕವಾಗಿ ಕೆತ್ತಲಾಗಿದೆ.
ಎಲ್ಲ ಸ್ಥಳಗಳನ್ನು ವೀಕ್ಷಣೆ ಮಾಡಿದ ಬಳಿಕ ಹರಿತಾ( ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಪ್ರೇಕ್ಷಣೀಯ ಸ್ಥಳಗಳಲ್ಲಿ ಮಯೂರ ಸರಣಿಯ ಹೋಟೆಲ್ ಆರಂಭಿಸಿದರೆ ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆ ಹರಿತಾ ಹೆಸರಿನ ಹೋಟೆಲ್ ಗಳನ್ನು ಸ್ಥಾಪಿಸಿದೆ) ಹೋಟೆಲ್ ನಲ್ಲಿ ತಿಂಡಿ ತಿಂದು ಮುಂದಿನ ಸ್ಥಳಕ್ಕೆ ಬೈಕಲ್ಲಿ ಹೊರಟೆವು.

ಹೆಚ್ಚಿನ ಓದಿಗೆ ಕ್ಲಿಕ್ ಮಾಡಿ






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಿದ್ಧವನ ಗುರುಕುಲದ ಸವಿನೆನಪುಗಳು....

ತಮಿಳುನಾಡು ಬೈಕ್ ಟ್ರಿಪ್ ಭಾಗ -2 ಹೊಗೇನಕಲ್ ಪ್ರವಾಸ ಕಥನ

ಯೆರ್ಕಾಡ್ ಮತ್ತು ಹೊಗೇನಕಲ್ ಬೈಕ್ ಪ್ರವಾಸ