ತುಂತುರು ಮಳೆಯ ಜೊತೆ ರಾತ್ರಿ ಬೈಕ್ ಪ್ರವಾಸ

ಕಳೆದ ವರ್ಷ ಗಂಡಿಕೋಟ, ಬೇಲುಂ ಬೈಕ್ ಟ್ರಿಪ್ ಮುಗಿಸಿ ಹೊಸಕೋಟೆ ಟೋಲ್ ಬಳಿ ನಿಂತಾಗ ಮುಂದಿನ ವರ್ಷ ಯಾವ ಕಡೆಗೆ ಹೋಗಬೇಕು ಎಂಬ ಬಗ್ಗೆ ಚರ್ಚೆ ನಡೆಯುವಾಗ ಪಟಕ್ ಅಂತ ಹೊಳೆದದ್ದೇ ವಯನಾಡ್.

ಬೈಕಿನಲ್ಲೇ ಕರ್ನಾಟಕದ ಸಮೀಪದ ರಾಜ್ಯಗಳನ್ನು ಸುತ್ತಬೇಕು ಎನ್ನುವ ಮಹತ್ವಾಕಾಂಕ್ಷೆಯ ಯೋಜನೆ ಹಾಕಿಕೊಂಡ ಹಿನ್ನೆಲೆಯಲ್ಲಿ ತಮಿಳುನಾಡು(ಯೆರ್ಕಾಡ್, ಹೊಗೆನಕಲ್) ಕರ್ನಾಟಕ(ಹಾಸನ, ಚಿಕ್ಕಮಗಳೂರು), ಆಂಧ್ರಪ್ರದೇಶ(ಲೇಪಾಕ್ಷಿ, ಗಂಡಿಕೋಟ, ಬೇಲುಂ) ಸುತ್ತಿಯಾಗಿತ್ತು. ಹೀಗಾಗಿ ಕೇರಳ ಒಂದು ಬಾಕಿ ಇತ್ತು.  ಈ ಕಾರಣಕ್ಕೆ ವಯನಾಡನ್ನು ಬೈಕಿನ ಮೇಲೆ ಕುಳಿತು ಅಲ್ಲೇ ಫೈನಲ್ ಮಾಡಿದೆವು.

ಒಂದು ವರ್ಷದ ಜಾಗ ಫೈನಲ್ ಆದ್ರೂ ದಿನಾಂಕ ಅಂತಿಮವಾಗಿರಲಿಲ್ಲ. ಕೊನೆಗೆ 3 ತಿಂಗಳ‌ ಹಿಂದೆ ಅ.12,13 ಹೋಗುವುದಾಗಿ ನಿಶ್ಚಯಿಸಲಾಯಿತು. ಪ್ರತಿ ಬಾರಿಯೂ ಮುಂಜಾನೆ 4 ಗಂಟೆಗೆ ನಮ್ಮ ಪ್ರಯಾಣ ಆರಂಭವಾಗುತಿತ್ತು. ಯಾವಾಗಲೂ ಒಂದೇ ರೀತಿ ಇದ್ದರೆ ಚೆನ್ನಾಗಿ ಇರುವುದಿಲ್ಲವಲ್ಲ. ಹೀಗಾಗಿ ಈ‌ ಬಾರಿ ಬದಲಾವಣೆ ಇರಲಿ ಎನ್ನುವ ಕಾರಣಕ್ಕೆ ರಾತ್ರಿ ಪ್ರಯಾಣಕ್ಕೆ ನಾವು ಜೈ ಎಂದ್ವಿ.

ನಿಗದಿಯಂತೆ ಕೆಂಗೇರಿ ನೈಸ್ ರಸ್ತೆಯ ಮುಂದಿರುವ ಕದಂಬ ಹೋಟೆಲಿಗೆ ಶುಕ್ರವಾರ  ರಾತ್ರಿ 7:30ರ ಒಳಗೆ ಎಲ್ಲರೂ ಬರುವುದು. ಅಲ್ಲಿ ಟೀ ಕುಡಿದು ರಾತ್ರಿ 10 ಗಂಟೆಗೆ ಮೈಸೂರು ಹೋಟೆಲ್ ತಲುಪಿ ಮುಂಜಾನೆ ಅಲ್ಲಿಂದ ಹೊರಡುವ ಪ್ಲಾನ್ ಮಾಡಿಕೊಂಡಿದ್ದೆವು.ರಾತ್ರಿ ನಿಗದಿಯಾದ ಸಮಯದ ಒಳಗಡೆ 5 ಜನ ಹೋಟೆಲಿನಲ್ಲಿ ಇದ್ದರೂ ರಾಕೇಶ್ ಮಾತ್ರ ಬಂದಿರಲಿಲ್ಲ. ಯಾಕೆ ಲೇಟ್ ಎಂದು ಕಾಲ್ ಮಾಡಿದಾಗ ಅವನ ಗಾಡಿ  ಬೆಂಗಳೂರು ವಿವಿ  ಬಳಿಯ ರಸ್ತೆಯಲ್ಲಿ‌ ಕೈ ಕೊಟ್ಟ ವಿಚಾರ ಗೊತ್ತಾಯಿತು.

ಮುಂದೆ ಏನು ಮಾಡುವುದು? ಈಗ ನಮಗೆ ತಳಮಳ ಆರಂಭ. ಪುಣ್ಯಕ್ಕೆ ಹತ್ತಿರದಲ್ಲಿ ಮೆಕ್ಯಾನಿಕ್ ಇದ್ದ ಕಾರಣ ಗಾಡಿ ರಿಪೇರಿ ಆದರೂ ಬ್ಯಾಟರಿಯಲ್ಲಿ ಚಾರ್ಜ್ ಇಲ್ಲ ಎನ್ನುವುದು ಗೊತ್ತಾಯಿತು. ಒಟ್ಟಿನಲ್ಲಿ ಗಾಡಿ ಆನ್ ಆಯ್ತು . ರಾತ್ರಿ 8:15ರ ಹೊತ್ತಿಗೆ ರಾಕೇಶ ಹೋಟೆಲಿಗೆ ಬಂದ. ಚಾರ್ಜ್ ಇಲ್ಲದ ಕಾರಣ ಹೆಡ್ ಲೈಟ್ ಆನ್ ಆದ್ರೂ  ಸಿಕ್ಕಾಪಟ್ಟೆ ಡಿಮ್.

ನಮ್ಮಲ್ಲಿ ಯಾವುದೇ ಕಾರಣಕ್ಕೂ ಪ್ರವಾಸ ಕ್ಯಾನ್ಸಲ್ ಮಾಡುವ
ಸೀನ್ ಇಲ್ಲವೇ ಇಲ್ಲ. ಕೊನೆಗೆ  ಪ್ಲಾನ್ ಮಾಡಿದ್ವಿ‌. ರಾಕೇಶ ರಾಜನಂತೆ ಮುಂದೆ ಹೋಗುವುದು. ಅವನ‌ ಬೈಕಿನ ಎಡ ಮತ್ತು ಬಲಗಡೆಯಲ್ಲಿ ಬಾಡಿ ಗಾರ್ಡ್ ರೀತಿ ಇಬ್ಬರು ಹೋಗುವುದು. ಮೈಸೂರು ಬೆಂಗಳೂರು ಡಬ್ಬಲ್ ರೋಡ್ ಆಗಿರುವ ಕಾರಣ  ನಮಗೆ ಯಾವುದೇ ಸಮಸ್ಯೆ ಆಗಿರಲಿಲ್ಲ.  ಇದರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದ ಕಾರಣ ಆ ವಾಹನಗಳ ಹೆಡ್ ಲೈಟ್ ಗಳೂ ರಾಕೇಶನ 'ನವ್ಯ' ಸಾಹಸಕ್ಕೆ ಜೊತೆಯಾದವು.


ರೈಡಿಂಗ್ ನಲ್ಲಿ‌ ಯಾವುದೇ ಸಮಸ್ಯೆ ಆಗದಿದ್ದರೂ ಮಿಂಚು, ಸಿಡಿಲು ಬಡಿದಾಗ ನಮಗೆ ಪುಕುಪುಕು. ಮೊದಲೇ ರಾಜ್ಯದಲ್ಲಿ ಮಳೆ ಆಗುತ್ತಿದೆ.ಅದರಲ್ಲೂ ಕಳೆದ ವಾರದಿಂದ ರಾತ್ರಿ ಭರ್ಜರಿ ಮಳೆ‌ ಬೇರೆ. ಈ ನಡುವೆ ನಮ್ಮ ಬೈಕ್ ಪ್ರವಾಸ ಸಾಗುತಿತ್ತು.

ರಾತ್ರಿ 9 ಗಂಟೆಯ ಸಮಯಕ್ಕೆ ನಮ್ಮ‌ ಸವಾರಿ ರಾಮನಗರದ ಉಡುಪಿ ಹೋಟೆಲ್ ಮುಂದೆ ನಿಂತಿತು. ಹೋಟೆಲ್ ಪ್ರವೇಶ ಮಾಡುತ್ತಿದ್ದಂತೆ ನನ್ನ ಊರಿನ ಲೈನ್ಕಜೆ ರಾಮಚಂದ್ರ ಭಟ್ ಸಿಗಬೇಕೇ? ಅವರನ್ನು ನೋಡದೇ ಬಹಳ ಸಮಯವಾಗಿತ್ತು. ಅವರ ಜೊತೆಗಿನ ಮಾತುಕತೆಯ ವೇಳೆ ಅವರು ವಯನಾಡಿನ ಹಲವು ಸ್ಥಳಗಳ ಬಗ್ಗೆ ಮಾಹಿತಿ‌ ನೀಡಿದರು.

ಭರ್ಜರಿ ಊಟದ ಬಳಿಕ ಪ್ರಯಾಣ ಹೊರಟಿತು. ರಾತ್ರಿ 11 ಗಂಟೆಗೆ ಮೈಸೂರಿನ ರೂಮ್ ತಲುಪಿದೆವು. ದಾರಿ ಮಧ್ಯೆ ಅಲ್ಲಲ್ಲಿ ವರುಣಾದೇವ ನಾಲ್ಕೈದು ಬಾರಿ ತುಂತುರು ಹನಿಯನ್ನು ಪ್ರೋಕ್ಷಣೆ ಮಾಡಿ ಪ್ರವಾಸಕ್ಕೆ ಶುಭ ಕೋರುತ್ತಿದ್ದ. ಮನೆಯಲ್ಲಿ ಮಳೆ ಸಮಯದಲ್ಲಿ ಈ ಪ್ರವಾಸ ಬೇಕೇ ಎಂದು ಕೇಳಿದರೂ ವರುಣಾ ದೇವರ ಕೃಪೆಯಿಂದಾಗಿ  ನಮ್ಮ ಮೊದಲ ರಾತ್ರಿ ಪ್ರವಾಸ ಯಶಸ್ವಿಯಾಗಿ ಮೈಸೂರು ತಲುಪಿತು.


















ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಿದ್ಧವನ ಗುರುಕುಲದ ಸವಿನೆನಪುಗಳು....

ತಮಿಳುನಾಡು ಬೈಕ್ ಟ್ರಿಪ್ ಭಾಗ -2 ಹೊಗೇನಕಲ್ ಪ್ರವಾಸ ಕಥನ

ಯೆರ್ಕಾಡ್ ಮತ್ತು ಹೊಗೇನಕಲ್ ಬೈಕ್ ಪ್ರವಾಸ